Kuja in Vrishabha Rashi: ಜೂನ್‌ನಲ್ಲಿ ಕುಜ ವೃಷಭ ರಾಶಿಯಲ್ಲಿ ಸಂಚಾರ; 12ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ?
ಜೂನ್‌ನಲ್ಲಿ ಕುಜ ಗ್ರಹವು ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಶುಕ್ರ, ಚಂದ್ರ, ಗುರು ಮತ್ತು ಬುಧರ ಪ್ರಭಾವಕ್ಕೊಳಗಾಗಿದೆ. ಇದು ಕುಜನ ತೀಕ್ಷ್ಣತೆಯನ್ನು ಕಡಿಮೆ ಮಾಡಿ, ಬುದ್ಧಿವಂತಿಕೆ ಮತ್ತು ಸೌಮ್ಯತೆಯ ಮಿಶ್ರಣವನ್ನು ನೀಡುತ್ತದೆ. ಪ್ರತಿ ರಾಶಿಯ ಮೇಲೆ ಈ ಸಂಚಾರದ ಪರಿಣಾಮಗಳು ವಿಭಿನ್ನವಾಗಿದ್ದು, ಹಣಕಾಸು, ಸಂಬಂಧಗಳು, ವೃತ್ತಿ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಸುಬ್ರಹ್ಮಣ್ಯ ಸ್ವಾಮಿ ಆರಾಧನೆಯು ಶುಭ ಫಲಗಳನ್ನು ಹೆಚ್ಚಿಸಲು ಶ್ರೇಷ್ಠ ಪರಿಹಾರವಾಗಿದೆ.

ಕುಜ ಗ್ರಹವು ಜೂನ್ ತಿಂಗಳಿನಲ್ಲಿ ವೃಷಭ ರಾಶಿಯಲ್ಲಿ ಸಂಚರಿಸುತ್ತಾ ಶುಕ್ರನ ದ್ರೇಕ್ಕಾಣ, ಚಂದ್ರನ ಹೋರೆ, ಗುರುವಿನ ನವಾಂಶ, ಬುಧನ ತ್ರಿಂಶಾಂಶ ಮತ್ತು ಚಂದ್ರನ ದ್ವಾದಶಾಂಶದಲ್ಲಿ ಸ್ಥಿತನಾಗಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ ಫಲಗಳನ್ನು ನೀಡುತ್ತದೆ. ಸ್ಥಿರ ಹಾಗೂ ಭೂತತ್ವದ ವೃಷಭ ರಾಶಿಯಲ್ಲಿ ಅಗ್ನಿತತ್ವದ ಕುಜನಿರುವುದು ಸಾಮಾನ್ಯವಾಗಿ ನಿಧಾನಗತಿಯ ಆದರೆ ದೃಢವಾದ ಪ್ರಯತ್ನಗಳನ್ನು ಸೂಚಿಸುತ್ತದೆ. ಇಲ್ಲಿ ಚಂದ್ರ, ಗುರು, ಶುಕ್ರರ ಪ್ರಭಾವವು ಹೆಚ್ಚಿರುವುದರಿಂದ ಕುಜನ ತೀಕ್ಷ್ಣತೆ ಮತ್ತು ಉಗ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ, ಬುದ್ಧಿವಂತಿಕೆ ಮತ್ತು ಸೌಮ್ಯತೆಯ ಮಿಶ್ರಣ ಕಾಣಸಿಗುತ್ತದೆ.
ಮೇಷ ರಾಶಿ:
ನಿಮ್ಮ ರಾಶ್ಯಾಧಿಪತಿಯಾದ ಕುಜನು ದ್ವಿತೀಯ ಭಾವದಲ್ಲಿ ಇರುವುದರಿಂದ ಆರ್ಥಿಕ ವಿಷಯಗಳಲ್ಲಿ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಹಠಾತ್ ಧನಲಾಭದ ಯೋಗವಿದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ. ಆಸ್ತಿ ಪಾಸ್ತಿ ವಿಷಯಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬರಲಿದೆ. ಬುಧನ ತ್ರಿಂಶಾಂಶದ ಪ್ರಭಾವದಿಂದಾಗಿ ಮಾತಿನಲ್ಲಿ ಕಠೋರತೆ ಬರಬಹುದು. ಆವೇಶಕ್ಕೆ ಒಳಗಾಗಿ ಮಾತನಾಡಿ ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ತಂದುಕೊಳ್ಳಬೇಡಿ. ಕಣ್ಣು ಅಥವಾ ಹಲ್ಲಿನ ಸಮಸ್ಯೆ ಬಾಧಿಸಬಹುದು.
ವೃಷಭ ರಾಶಿ:
ಕುಜನು ನಿಮ್ಮ ರಾಶಿಯಲ್ಲೇ ಸಂಚರಿಸುತ್ತಿದ್ದಾನೆ. ಶುಕ್ರನ ದ್ರೇಕ್ಕಾಣ ಮತ್ತು ಚಂದ್ರನ ಹೋರೆಯ ಪ್ರಭಾವ ಇಲ್ಲಿ ಹೆಚ್ಚಿರುತ್ತದೆ. ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಲಿದೆ. ಕಾರ್ಯರಂಗದಲ್ಲಿ ಉತ್ಸಾಹ ಮತ್ತು ಸೃಜನಶೀಲತೆ ಹೆಚ್ಚಾಗಿರುತ್ತದೆ. ಸಂಗಾತಿಯಿಂದ ಅಥವಾ ಸ್ತ್ರೀ ವರ್ಗದಿಂದ ಲಾಭವಾಗಲಿದೆ. ಮನಸ್ಸಿನಲ್ಲಿ ಚಂಚಲತೆ (ಚಂದ್ರನ ಹೋರೆಯಿಂದಾಗಿ) ಮತ್ತು ಅತಿಯಾದ ಕೋಪ ಇರಲಿದೆ. ರಕ್ತದೊತ್ತಡ ಅಥವಾ ಉಷ್ಣ ಬಾಧೆಯ ಸಾಧ್ಯತೆ ಇದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಮಿಥುನ ರಾಶಿ:
ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ಕುಜನ ಸಂಚಾರವಿದೆ. ವಿದೇಶಿ ವ್ಯವಹಾರಗಳಲ್ಲಿ ಪ್ರಗತಿ, ಆಧ್ಯಾತ್ಮಿಕ ಕ್ಷೇತ್ರಗಳತ್ತ ಒಲವು ಹೆಚ್ಚಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ವಿನಿಯೋಗಿಸುವಿರಿ. ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ನಿದ್ರಾಹೀನತೆ ಮತ್ತು ಆಸ್ಪತ್ರೆಯ ವೆಚ್ಚಗಳು ಎದುರಾಗಬಹುದು. ಶತ್ರುಗಳ ಕಾಟ ಹೆಚ್ಚಾಗುವ ಸಂಭವವಿದ್ದು, ಕೋರ್ಟ್ ಕಚೇರಿ ವಿಷಯಗಳಲ್ಲಿ ಜಾಗ್ರತೆ ಅಗತ್ಯ.
ಕರ್ಕಾಟಕ ರಾಶಿ:
ನಿಮ್ಮ ರಾಶಿಗೆ ಕುಜನು ಯೋಗಕಾರಕನಾಗಿದ್ದು, ಈಗ ಏಕಾದಶ ಭಾವದಲ್ಲಿ ಸ್ಥಿತನಾಗಿದ್ದಾನೆ. ಚಂದ್ರನ ದ್ವಾದಶಾಂಶ ಇರುವುದರಿಂದ ನಿಮಗೆ ವಿಶೇಷ ಫಲ ಸಿಗಲಿದೆ. ಜೂನ್ ತಿಂಗಳು ನಿಮಗೆ ಅತ್ಯಂತ ಲಾಭದಾಯಕವಾಗಿರಲಿದೆ. ಬಾಕಿ ಉಳಿದಿದ್ದ ಹಣ ಕೈ ಸೇರಲಿದೆ. ಹಿರಿಯ ಸಹೋದರ ಅಥವಾ ಮಿತ್ರರಿಂದ ದೊಡ್ಡ ಸಹಾಯ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಅತಿಯಾದ ಆತ್ಮವಿಶ್ವಾಸದಿಂದಾಗಿ ಕೆಲವು ಉತ್ತಮ ಅವಕಾಶಗಳನ್ನು ಕೈತಪ್ಪಿಸಿಕೊಳ್ಳಬಹುದು. ಪ್ರೇಮ ಜೀವನದಲ್ಲಿ ಸಣ್ಣಪುಟ್ಟ ಗೊಂದಲಗಳು ಉಂಟಾಗಬಹುದು.
ಸಿಂಹ ರಾಶಿ :
ನಿಮ್ಮ ರಾಶಿಯ ದಶಮ ಭಾವದಲ್ಲಿ ದಿಗ್ದರ್ಶನ ಪಡೆದ ಕುಜನಿದ್ದಾನೆ. ಗುರುವಿನ ನವಾಂಶದ ಪ್ರಭಾವ ಇಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ನಿಮ್ಮ ಅಧಿಕಾರ ಮತ್ತು ಗೌರವ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಹೊಸ ಜವಾಬ್ದಾರಿಗಳು ಸಿಗಲಿವೆ. ಕೆಲಸದ ಒತ್ತಡದಿಂದಾಗಿ ಕುಟುಂಬಕ್ಕೆ ಸಮಯ ಕೊಡುವುದು ಕಷ್ಟವಾಗಬಹುದು. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ವಿನಯವಿರಲಿ.
ಕನ್ಯಾ ರಾಶಿ :
ನಿಮ್ಮ ರಾಶಿಯಿಂದ ಭಾಗ್ಯಸ್ಥಾನದಲ್ಲಿ ಕುಜನ ಸಂಚಾರವಿದೆ. ಬುಧನ ತ್ರಿಂಶಾಂಶವು ನಿಮ್ಮ ರಾಶ್ಯಾಧಿಪತಿಯ ಬಲವನ್ನು ತೋರ್ಪಡಿಸುತ್ತದೆ. ದೂರದ ಪ್ರಯಾಣ ಅಥವಾ ತೀರ್ಥಯಾತ್ರೆ ಕೈಗೊಳ್ಳುವಿರಿ. ಉನ್ನತ ಶಿಕ್ಷಣ ಪಡೆಯುತ್ತಿರುವವರಿಗೆ ಉತ್ತಮ ಸಮಯ. ತಂದೆಯ ಕಡೆಯಿಂದ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ. ಭಾಗ್ಯೋದಯಕ್ಕೆ ಕೆಲವು ಅಡೆತಡೆಗಳು ಎದುರಾಗಬಹುದು. ಭಾಗ್ಯ ಸ್ಥಾನದ ಕುಜನು ಕೆಲವೊಮ್ಮೆ ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟುಮಾಡಬಹುದು, ಜಾಗ್ರತೆ ವಹಿಸಿ.
ತುಲಾ ರಾಶಿ :
ನಿಮ್ಮ ರಾಶಿಯಿಂದ ಅಷ್ಟಮಭಾವದಲ್ಲಿ ಕುಜನಿರುವುದು ಸ್ವಲ್ಪ ಕಠಿಣ ಪರಿಸ್ಥಿತಿಯನ್ನು ಸೂಚಿಸುತ್ತದೆ. ಸಂಶೋಧನೆ, ಜ್ಯೋತಿಷ್ಯ ಅಥವಾ ಗೂಢ ವಿಜ್ಞಾನದಲ್ಲಿ ಆಸಕ್ತಿ ಇರುವವರಿಗೆ ಇದು ಸುವರ್ಣ ಕಾಲ. ವಿಮೆ ಅಥವಾ ಉಯಿಲಿನ ಮೂಲಕ ಹಠಾತ್ ಧನಲಾಭವಾಗಬಹುದು. ವಾಹನ ಚಲಾಯಿಸುವಾಗ ಅತ್ಯಂತ ಜಾಗರೂಕರಾಗಿರಿ. ಅಪಘಾತ ಅಥವಾ ಗಾಯಗಳಾಗುವ ಸಂಭವವಿದೆ. ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಅಥವಾ ಶಸ್ತ್ರಚಿಕಿತ್ಸೆಯ ಯೋಗ ಬರಬಹುದು. ಸಂಗಾತಿಯೊಂದಿಗೆ ವಾಗ್ವಾದ ಬೇಡ.
ವೃಶ್ಚಿಕ ರಾಶಿ :
ನಿಮ್ಮ ರಾಶ್ಯಾಧಿಪತಿಯಾದ ಕುಜನು ಸಪ್ತಮ (ಕಳತ್ರ) ಭಾವದಲ್ಲಿ ಸಂಚರಿಸುತ್ತಿದ್ದಾನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗಲಿದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಸೂಕ್ತ ಸಮಯ. ವೈವಾಹಿಕ ಜೀವನದಲ್ಲಿ ಸಾಮರಸ್ಯದ ಕೊರತೆ ಕಾಣಿಸಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು ಅಥವಾ ಅವರ ಸ್ವಭಾವದಲ್ಲಿ ಉಗ್ರತೆ ಕಾಣಬಹುದು. ತಾಳ್ಮೆಯೇ ಇಲ್ಲಿ ಮುಖ್ಯ ಮಂತ್ರ.
ಧನು ರಾಶಿ :
ನಿಮ್ಮ ರಾಶಿಯಿಂದ ಷಷ್ಠ ಭಾವದಲ್ಲಿ ಕುಜನಿದ್ದಾನೆ. ಗುರುವಿನ ನವಾಂಶ ಇರುವುದರಿಂದ ಕುಜನು ನಿಮಗೆ ಅನುಕೂಲಕರವಾಗಿ ನಡೆದುಕೊಳ್ಳುತ್ತಾನೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ಕಚೇರಿ ವ್ಯಾಜ್ಯಗಳು ನಿಮ್ಮ ಪರವಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ಸಾಲದ ಬಾಧೆ ಕಡಿಮೆಯಾಗಲಿದೆ. ಸಣ್ಣಪುಟ್ಟ ಉಷ್ಣ ಸಂಬಂಧಿ ಕಾಯಿಲೆಗಳು ಅಥವಾ ರಕ್ತದ ದೋಷಗಳು ಬಾಧಿಸಬಹುದು. ಸೋದರಮಾವನ ಜೊತೆಗಿನ ಸಂಬಂಧದಲ್ಲಿ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.
ಮಕರ ರಾಶಿ :
ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿ ಕುಜನ ಸಂಚಾರವಿದೆ. ಬುದ್ಧಿಶಕ್ತಿ ತೀಕ್ಷ್ಣವಾಗಲಿದ್ದು, ಕಠಿಣ ನಿರ್ಧಾರಗಳನ್ನು ಧೈರ್ಯವಾಗಿ ತೆಗೆದುಕೊಳ್ಳುವಿರಿ. ಕ್ರೀಡಾಪಟುಗಳಿಗೆ ಮತ್ತು ತಾಂತ್ರಿಕ ವಲಯದವರಿಗೆ ಉತ್ತಮ ಯಶಸ್ಸು ಸಿಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಳವಳ ಉಂಟಾಗಬಹುದು. ಗರ್ಭಿಣಿಯರು ಈ ಸಮಯದಲ್ಲಿ ಅತಿ ಹೆಚ್ಚು ಜಾಗ್ರತೆ ವಹಿಸಬೇಕು. ಷೇರು ಮಾರುಕಟ್ಟೆಯಲ್ಲಿ ಅತಿಯಾದ ರಿಸ್ಕ್ ತೆಗೆದುಕೊಳ್ಳಬೇಡಿ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?
ಕುಂಭ ರಾಶಿ :
ನಿಮ್ಮ ರಾಶಿಯಿಂದ ಚತುರ್ಥ ಭಾವದಲ್ಲಿ ಕುಜನಿದ್ದಾನೆ. ಚಂದ್ರನ ಹೋರೆ ಮತ್ತು ದ್ವಾದಶಾಂಶದ ಪ್ರಭಾವ ಇಲ್ಲಿ ಹೆಚ್ಚಿರುತ್ತದೆ. ಭೂಮಿ, ಮನೆ ಅಥವಾ ವಾಹನ ಖರೀದಿಸಲು ಯೋಗವಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ಉತ್ತಮ ಲಾಭ ಸಿಗಲಿದೆ. ಮನೆಯ ನವೀಕರಣ ಕಾರ್ಯ ಕೈಗೊಳ್ಳಬಹುದು. ಮನೆಯಲ್ಲಿ ಸುಖ-ಶಾಂತಿಯ ಕೊರತೆ ಎದುರಾಗಬಹುದು. ತಾಯಿಯ ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇದೆ. ಎದೆಯ ಭಾಗದಲ್ಲಿ ನೋವು ಅಥವಾ ರಕ್ತದೊತ್ತಡದ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ.
ಮೀನ ರಾಶಿ:
ನಿಮ್ಮ ರಾಶಿಯಿಂದ ತೃತೀಯಭಾವದಲ್ಲಿ ಕುಜನಿದ್ದಾನೆ. ಗುರು ಮತ್ತು ಚಂದ್ರನ ಶುಭ ಪ್ರಭಾವಗಳು ಈ ಸ್ಥಾನಕ್ಕೆ ಬಲ ತುಂಬುತ್ತವೆ. ನಿಮ್ಮ ಧೈರ್ಯ, ಶೌರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಣ್ಣ ಪ್ರಮಾಣದ ಪ್ರವಾಸಗಳು ಲಾಭದಾಯಕವಾಗಿರಲಿವೆ. ಕಮ್ಯುನಿಕೇಶನ್ ಮತ್ತು ಮಾರ್ಕೆಟಿಂಗ್ ರಂಗದಲ್ಲಿ ಇರುವವರಿಗೆ ಭರ್ಜರಿ ಯಶಸ್ಸು ಸಿಗಲಿದೆ. ಕಿರಿಯ ಸಹೋದರ-ಸಹೋದರಿಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಕೈ ಮತ್ತು ಹೆಗಲಿಗೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳಬಹುದು.
ವೃಷಭ ರಾಶಿಯಲ್ಲಿರುವ ಕುಜನ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಲು ಜೂನ್ ತಿಂಗಳಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಅತ್ಯಂತ ಶ್ರೇಷ್ಠ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Tue, 2 June 26




