ಐಸಿಸಿಯಿಂದ ಕೆನಡಾ ಕ್ರಿಕೆಟ್ ಮಂಡಳಿ ಅಮಾನತು!
Canada Cricket: ಕೆನಡಾ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಐಸಿಸಿ, ಅಲ್ಲಿನ ಕ್ರಿಕೆಟ್ ವ್ಯವಸ್ಥೆಯನ್ನು ಸುಧಾರಿಸಲು ಶೀಘ್ರದಲ್ಲೇ 'ನಾರ್ಮಲೈಸೇಶನ್ ಕಮಿಟಿ' ಯನ್ನು ನೇಮಿಸಲಿದೆ. ಅದರಂತೆ 'ನಾರ್ಮಲೈಸೇಶನ್ ಕಮಿಟಿ' ನೆರವಿನೊಂದಿಗೆ ಕೆನಡಾದಲ್ಲಿ ಕ್ರಿಕೆಟ್ ಆಡಳಿತ ಮುಂದುವರೆಯಲಿದೆ. ಅಷ್ಟೇ ಅಲ್ಲದೆ ಕೆನಡಾ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್ ಮಾನ್ಯತೆಯನ್ನು ಮುಂದುವರೆಸುವುದಾಗಿ ಐಸಿಸಿ ತಿಳಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಿಕೆಟ್ ಕೆನಡಾ (Cricket Canada) ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಕೆನಡಾ ಕ್ರಿಕೆಟ್ ಮಂಡಳಿಯ ಆಡಳಿತಾತ್ಮಕ ವೈಫಲ್ಯಗಳು, ಭ್ರಷ್ಟಾಚಾರದ ಆರೋಪಗಳು ಹಾಗೂ ನಿಯಮಾವಳಿಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಬೋರ್ಡ್ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಮೂಲಕ ಕೆನಡಾ ಕ್ರಿಕೆಟ್ ಮಂಡಳಿಯನ್ನು ಅಮಾನಲ್ಲಿಡಲಾಗಿದೆ. ಇದಕ್ಕೆ ಐಸಿಸಿ ನೀಡಿರುವ ಕಾರಣಗಳು ಈ ಕೆಳಗಿನಂತಿವೆ…
ಫಿಕ್ಸಿಂಗ್ ಆರೋಪ: ಕೆನಡಾದ ರಾಷ್ಟ್ರೀಯ ಮಾಧ್ಯಮವಾದ ಸಿಬಿಸಿ (CBC) ಪ್ರಸಾರ ಮಾಡಿದ ತನಿಖಾ ವರದಿಯಲ್ಲಿ ಕ್ರಿಕೆಟ್ ಕೆನಡಾ ಮಂಡಳಿಯ ಅಧಿಕಾರಿಗಳು ಭ್ರಷ್ಟಾಚಾರ ಮತ್ತು ಪಂದ್ಯದ ಫಲಿತಾಂಶ ಬದಲಿಸುವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಆಯ್ಕೆಯಲ್ಲಿ ಹಸ್ತಕ್ಷೇಪ: ಇತ್ತೀಚೆಗೆ ಕೆನಡಾ ಮಾಜಿ ಮುಖ್ಯ ಕೋಚ್ ಖುರ್ರಮ್ ಚೋಹನ್ ಅವರ ಆಡಿಯೋ ಕ್ಲಿಪ್ ಒಂದು ಸೋರಿಕೆಯಾಗಿತ್ತು. ಅದರಲ್ಲಿ ಅಧಿಕಾರಿಗಳು ಬಲವಂತವಾಗಿ ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳ (ACU) ತನಿಖೆಯನ್ನೂ ಕೂಡ ನಡೆಸಿದ್ದರು.
ಆರ್ಥಿಕ ಅಶಿಸ್ತು: ಕೆನಡಾ ಕ್ರಿಕೆಟ್ ಮಂಡಳಿಯು ತನ್ನ ಹಣಕಾಸು ವರದಿಗಳಲ್ಲಿ ಪಾರದರ್ಶಕತೆಯನ್ನು ಪಾಲಿಸಿಲ್ಲ. ಹೀಗಾಗಿ ಕೆನಡಾ ಕ್ರೀಡಾ ಸಚಿವಾಲಯ ಮತ್ತು ಐಸಿಸಿ ಕೆನಾಡ ಕ್ರಿಕೆಟ್ ಮಂಡಳಿಗೆ ನೀಡುತ್ತಿದ್ದ ಅನುದಾನವನ್ನು ತಡೆಹಿಡಿದಿದ್ದವು.
ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು ಇದೀಗ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೆನಡಾ ಕ್ರಿಕೆಟ್ ಮಂಡಳಿಯ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟಿದೆ.
ಆಟಗಾರರಿಗೆ ಐಸಿಸಿ ಅಭಯ:
ಕೆನಡಾ ಕ್ರಿಕೆಟ್ ಮಂಡಳಿಯನ್ನು ಸದಸ್ಯತ್ವವನ್ನು ಅಮಾನತುಗೊಳಿಸಿದರೂ, ಐಸಿಸಿ ಕೆನಡಾ ತಂಡದ ಆಟಗಾರರಿಗೆ ಅಭಯಹಸ್ತ ಚಾಚಿದ್ದಾರೆ. ಅಂದರೆ ಯಾವುದೇ ಆತಂಕವಿಲ್ಲದೇ ಕ್ರಿಕೆಟ್ನಲ್ಲಿ ಮುಂದುವರೆಯಬಹುದು ಎಂದು ತಿಳಿಸಲಾಗಿದೆ.
ಅದರಂತೆ ಕೆನಡಾದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ತಂಡಗಳು ಎಂದಿನಂತೆ ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಾಗಿ ತಿಳಿಸಲಾಗಿದೆ.
ಹಾಗೆಯೇ ಈ ಪಂದ್ಯಗಳ ಮತ್ತು ಪ್ರವಾಸದ ವೆಚ್ಚಗಳಿಗೆ ಐಸಿಸಿ ನೇರವಾಗಿ ಹಣಕಾಸಿನ ನೆರವು ನೀಡಲಿದ್ದು, ಈ ಮೂಲಕ ಕೆನಡಾ ತಂಡವನ್ನು ಮುಂದುವರೆಸಲು ನಿರ್ಧರಿಸಲಾಗಿದೆ.
ಐಸಿಸಿಯ ಮುಂದಿನ ನಡೆಯೇನು?
ಸದ್ಯ ಕೆನಡಾ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಐಸಿಸಿ, ಅಲ್ಲಿನ ಕ್ರಿಕೆಟ್ ವ್ಯವಸ್ಥೆಯನ್ನು ಸುಧಾರಿಸಲು ಶೀಘ್ರದಲ್ಲೇ ‘ನಾರ್ಮಲೈಸೇಶನ್ ಕಮಿಟಿ’ ಯನ್ನು ನೇಮಿಸಲಿದೆ. ಅದರಂತೆ ‘ನಾರ್ಮಲೈಸೇಶನ್ ಕಮಿಟಿ’ ನೆರವಿನೊಂದಿಗೆ ಕೆನಡಾದಲ್ಲಿ ಕ್ರಿಕೆಟ್ ಆಡಳಿತ ಮುಂದುವರೆಯಲಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಮಹತ್ವದ ಬದಲಾವಣೆ..!
ಅಲ್ಲದೆ ಐಸಿಸಿ ನೀಡಿರುವ ಎಲ್ಲಾ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದ ನಂತರವಷ್ಟೇ ಕೆನಡಾ ಕ್ರಿಕೆಟ್ ಮಂಡಳಿಯ ಅಮಾನತನ್ನು ತೆರವುಗೊಳಿಸುವ ಬಗ್ಗೆ ಪರಿಶೀಲಿಸುವುದಾಗಿ ಐಸಿಸಿ ತಿಳಿಸಿದೆ.
Published On - 1:06 pm, Tue, 2 June 26




