Tamil Nadu Assembly Elections 2021: ಪಳನಿಸ್ವಾಮಿ ಜತೆ ಅಮಿತ್ ಶಾ ಸಭೆ, ಸೀಟು ಹಂಚಿಕೆ ನಿರ್ಧಾರ ಇಂದು ಸಾಧ್ಯತೆ

|

Updated on: Mar 01, 2021 | 11:48 AM

Tamil Nadu Assembly Elections 2021 Highlights: ಬಿಜೆಪಿ- ಎಐಎಡಿಎಂಕೆ ಮೈತ್ರಿಕೂಟ ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಸೀಟು ಹಂಚಿಕೆ ಬಗ್ಗೆ ಮಹತ್ವದ ನಿರ್ಧಾರ ಇಂದು ಪ್ರಕಟವಾಗುವ ಸಾಧ್ಯತೆ ಇದೆ. ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಬೆಂಬಲ ಬೇಡುವ ಕಾರ್ಯವೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

Tamil Nadu Assembly Elections 2021: ಪಳನಿಸ್ವಾಮಿ ಜತೆ ಅಮಿತ್ ಶಾ ಸಭೆ, ಸೀಟು ಹಂಚಿಕೆ ನಿರ್ಧಾರ ಇಂದು ಸಾಧ್ಯತೆ
ತಮಿಳುನಾಡಿನಲ್ಲಿ ಅಮಿತ್ ಶಾ
Follow us on

ಚೆನ್ನೈ/ ವಿಲ್ಲುಪುರಂ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ.ಕೆ.ಪಳನಿಸ್ವಾಮಿ ಜತೆ ಸಭೆ ಐಷಾರಾಮಿ ಹೋಟೆಲ್ ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಈ ಸಭೆ ಮಧ್ಯರಾತ್ರಿವರೆಗೆ ಮುಂದುವರಿದಿತ್ತು. ಭಾನುವಾರ ಬೆಳಗ್ಗೆ ಚೆನ್ನೈ ತಲುಪಿದ ಶಾ ಪುದುಚೇರಿ ಮತ್ತು ಮಿಲ್ಲುಪುರಂ ಗೆ ಭೇಟಿ ನೀಡಿ ಪಳನಿಸ್ವಾಮಿ ಜತೆ ಮಾತುಕತೆ ನಡೆಸಲು ರಾತ್ರಿ ಮತ್ತೆ ಚೆನ್ನೈಗೆ ಬಂದು ಅಲ್ಲಿಂದ ದೆಹಲಿಗೆ ಮರಳಿದ್ದಾರೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕೃಷ್ಣ ರೆಡ್ಡಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಎಲ್.ಮುುರುಗನ್ ಮತ್ತು ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಈ ಸಭೆಯಲ್ಲಿ ಭಾಗಿಯಾಗಿದ್ದರು .

ಬಿಜೆಪಿ– ಎಐಎಡಿಎಂಕೆ ಮೈತ್ರಿಕೂಟ ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಸೀಟು ಹಂಚಿಕೆ ಬಗ್ಗೆ ಮಹತ್ವದ ನಿರ್ಧಾರ ಇಂದು ಪ್ರಕಟವಾಗುವ ಸಾಧ್ಯತೆ ಇದೆ. ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಬೆಂಬಲ ಬೇಡುವ ಕಾರ್ಯವೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಎಐಎಡಿಎಂಕೆ ಮೈತ್ರಿಕೂಟದಲ್ಲಿನ ಪಾಟ್ಟಾಳಿ ಮಕ್ಕಳ್ ಕಾಚ್ಟಿ (PMK) ಪಕ್ಷ 23 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಅದೇ ರೀತಿ ಎಐಎಡಿಎಂಕೆ, ದೇಶೀಯ ಮುರ್​ಪೋಕು ದ್ರಾವಿಡ ಕಳಗಂ (DMDK) ಜತೆ ಮಾತುಕತೆ ನಡೆಸಿದೆ. ರಾಜ್ಯ ಸಚಿವ ಎಸ್.ಪಿ.ವೇಲುಮಣಿ ಮತ್ತು ಪಿ.ತಂಗಮಣಿ, ಎಐಎಡಿಎಂಕೆ ಉಪ ಸಂಚಾಲಕ ಕೆ.ಪಿ. ಮನುಸ್ವಾಮಿ ಜತೆಯೂ ಎಐಎಡಿಎಂಕೆ ಮಾತುಕತೆ ನಡೆಸಿದೆ.

ಭಾನುವಾರ ಜಾನಕೀಪುರಂ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕೋವಿಡ್ ಕಾಲದಲ್ಲಿಯೂ ತಮಿಳುನಾಡು ಉತ್ತಮ ಆಡಳಿತವನ್ನು ನೀಡಿದೆ. ಅದಕ್ಕಾಗಿ ನಾನು ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ವಿಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ತಮಿಳುನಾಡಿನಲ್ಲಿ 2ಜಿ, 3 ಜಿ ಮತ್ತು 4ಜಿ ಇದೆ. ಮುರಸೋಲಿ ಮಾರನ್ ಅವರ ಎರಡು ತಲೆಮಾರು, ಕರುಣಾನಿಧಿ ಕುಟುಂಬದ ಮೂರು ತಲೆಮಾರು, ಜವಾಹರ್ ಲಾಲ್ ನೆಹರು ಕುಟುಂಬದ ನಾಲ್ಕು ತಲೆಮಾರು ಅಧಿಕಾರಕ್ಕಾಗಿ ಹಂಬಲಿಸುತ್ತಿದೆ ಎಂದಿದ್ದಾರೆ.


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ ಶಾ, ತಮಿಳುನಾಡಿನ ಜನರಿಗೆ ಬೆಂಬಲ ಸೂಚಿಸುವುದಕ್ಕಾಗಿ ರಾಹುಲ್ ಬಾಬಾ ಜಲ್ಲಿಕಟ್ಟು ನೇರ ಪ್ರಸಾರ ನೋಡಲು ಹೋಗುತ್ತಾರೆ. ಕಾಂಗ್ರೆಸ್ ಸರ್ಕಾರ ಜಲ್ಲಿಕಟ್ಟು ನಿಷೇಧಿಸಿದ್ದನ್ನು ಅವರು ಮರೆತಿದ್ದಾರೆ. ಬಿಜೆಪಿ ಮತ್ತು ಎಐಎಡಿಎಂಕೆ ರದ್ದು ನಿರ್ಧಾರವನ್ನು ಹಿಂಪಡೆದಿತ್ತು.

ತಮಿಳಿನಲ್ಲಿ ವಣಕ್ಕಂ ಎಂದು ಹೇಳಿ ಭಾಷಣ ಆರಂಭಿಸಿದ್ದ ಶಾ, ತಮಿಳು ಪ್ರಾಚೀನ ಮತ್ತು ಸವಿಯಾದ ಭಾಷೆ. ನನಗೆ ಈ ಭಾಷೆ ಮಾತನಾಡಲು ಬರುವುದಿಲ್ಲ, ಕ್ಷಮಿಸಿ ತಮಿಳು ಸಂಸ್ಕೃತಿ ಇಲ್ಲದೇ ಭಾರತೀಯ ಸಂಸ್ಕೃತಿ ಇಲ್ಲ. ಜಗತ್ತಿನಲ್ಲೇ ಅತೀ ಪುರಾತನ ಸಂಸ್ಕೃತಿ ಇದು. ದೇಶ ಮತ್ತು ಜಗತ್ತಿನಾದ್ಯಂತ ತಮಿಳು ಜನರು ತಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಹೆಮ್ಮೆ ಪಡುತ್ತಾರೆ. ಭಾರತೀಯರು ತಮಿಳು ಭಾಷೆಯನ್ನು ಗೌರವಿಸುತ್ತಾರೆ. ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣದಲ್ಲಿ ತೊಡಗಿದೆ. ಆದರೆ ಎಐಎಡಿಎಂಕೆ ಮತ್ತು ಬಿಜೆಪಿ ಪ್ರಜಾಸತ್ತಾತ್ಮಕವಾಗಿದೆ. ಈ ಸರ್ಕಾರ ಅಧಿಕಾರಕ್ಕೇರಿದರೆ ದಲಿತ, ಆದಿವಾಸಿ ಮತ್ತು ಬಡವರ ಉದ್ಧಾರಕ್ಕಾಗಿ ಕೆಲಸ ಮಾಡಲಿದೆ ಎಂದು ಶಾ ಭರವಸೆ ನೀಡಿದ್ದಾರೆ.

 ಇದನ್ನೂ ಓದಿ: Tamil Nadu Assembly Elections 2021: ಚುನಾವಣಾ ಮೈತ್ರಿಗಾಗಿ ಕಮಲ್ ಹಾಸನ್ ಭೇಟಿ ಮಾಡಿದ ಶರತ್ ಕುಮಾರ್