Tamil Nadu: ತಮಿಳುನಾಡಿನ ಹಾಸ್ಟೆಲ್ ಟಾಯ್ಲೆಟ್​ನಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಶವವಾಗಿ ಪತ್ತೆ

ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಸಾವುಗಳ ಬಗ್ಗೆ ರಾಜ್ಯ ತನಿಖಾ ಸಂಸ್ಥೆ ಸಿಬಿ-ಸಿಐಡಿ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರಾಜ್ಯ ಪೊಲೀಸ್‌ನ ಸಿಬಿಸಿಐಡಿ ವಿಭಾಗಕ್ಕೆ ವರ್ಗಾಯಿಸಲಾಗುವುದು.

Tamil Nadu: ತಮಿಳುನಾಡಿನ ಹಾಸ್ಟೆಲ್ ಟಾಯ್ಲೆಟ್​ನಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಶವವಾಗಿ ಪತ್ತೆ
Updated By: ಸುಷ್ಮಾ ಚಕ್ರೆ

Updated on: Sep 21, 2022 | 2:06 PM

ಚೆನ್ನೈ: ತಮಿಳುನಾಡಿನ (Tamil Nadu) ತೂತುಕುಡಿಯಲ್ಲಿ ಮಂಗಳವಾರ ರಾತ್ರಿ 12ನೇ ತರಗತಿಯ ವಿದ್ಯಾರ್ಥಿನಿ ತನ್ನ ಹಾಸ್ಟೆಲ್​ನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿನಿ ಬರೆದಿಟ್ಟಿರುವ ಸೂಸೈಡ್ ನೋಟ್ (Suicide Note) ಅನ್ನು ಆಕೆಯ ಹಾಸ್ಟೆಲ್ ಕೊಠಡಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಎಲ್. ಬಾಲಾಜಿ ಶ್ರೀನಿವಾಸನ್ ಈ ಬಗ್ಗೆ ಮಾಹಿತಿ ನೀಡಿದ್ದು, ಮೃತ ಬಾಲಕಿ ತನ್ನ ಆತ್ಮಹತ್ಯೆ ಪತ್ರದಲ್ಲಿ ಕೆಲವು ವೈಯಕ್ತಿಕ ಕಾರಣಗಳನ್ನು ಬರೆದಿದ್ದಾಳೆ. ವೈಯಕ್ತಿಕ ಕಾರಣಗಳಿಂದಾಗಿ ಅವಳು ವಿಚಲಿತಳಾಗಿದ್ದಳು. ಅದೇನೆಂದು ನಾವು ನಿಖರವಾದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ 17 ವರ್ಷದ ಮೃತ ಯುವತಿ ವೈತೀಶ್ವರಿಗೆ ತನ್ನ ಚಿಕ್ಕಮ್ಮನ ಸಾವಿನ ನಂತರ ಬಹಳ ಆಘಾತವಾಗಿತ್ತು. ಇದರಿಂದ ಖಿನ್ನತೆಗೊಳಗಾಗಿದ್ದ ಆಕೆ ನೀವು ನನ್ನನ್ನು ಜೀವಂತವಾಗಿ ನೋಡುವುದು ಇದೇ ಕೊನೆಯ ಬಾರಿ ಎಂದು ಅವಳು ತನ್ನ ಶಾಲೆಯ ಇನ್ನೊಬ್ಬ ವಿದ್ಯಾರ್ಥಿಗೆ ಹೇಳಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪತಿಯನ್ನ ಕೊಂದು ಆತ್ಮಹತ್ಯೆಯ ಬಣ್ಣ ಕಟ್ಟಿದ್ಲಾ ಐನಾತಿ ಪತ್ನಿ? ಮಂಡ್ಯ ಜಿಲ್ಲೆಯಲ್ಲೊಂದು ವಿಚಿತ್ರ ಕೊಲೆ ಪ್ರಕರಣ ಬೆಳಕಿಗೆ

ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಸಾವುಗಳ ಬಗ್ಗೆ ರಾಜ್ಯ ತನಿಖಾ ಸಂಸ್ಥೆ ಸಿಬಿ-ಸಿಐಡಿ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರಾಜ್ಯ ಪೊಲೀಸ್‌ನ ಸಿಬಿಸಿಐಡಿ ವಿಭಾಗಕ್ಕೆ ವರ್ಗಾಯಿಸಲಾಗುವುದು.

ಕಳೆದ ಕೆಲವು ತಿಂಗಳುಗಳಿಂದ ತಮಿಳುನಾಡಿನಲ್ಲಿ 12ನೇ ತರಗತಿಯ 5 ವಿದ್ಯಾರ್ಥಿಗಳು (ನಾಲ್ವರು ಹುಡುಗಿಯರು ಮತ್ತು ಒಬ್ಬ ಹುಡುಗ) ಮತ್ತು 11ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶೈಕ್ಷಣಿಕ ಒತ್ತಡಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದರು. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಮಾನಸಿಕ ಶಕ್ತಿಯನ್ನು ತುಂಬಬೇಕು ಎಂದು ಶಿಕ್ಷಕರನ್ನು ಒತ್ತಾಯಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ