ನೀರಾ ರಾಡಿಯಾ ಟೇಪ್‌ಗಳಲ್ಲಿ ಯಾವುದೇ ಅಪರಾಧ ಕಂಡುಬಂದಿಲ್ಲ: ಸುಪ್ರೀಂಕೋರ್ಟ್‌ಗೆ ತಿಳಿಸಿದ ಸಿಬಿಐ
Niira Radia tapes ತನಿಖೆಯಲ್ಲಿ ಯಾವುದೇ ಅಪರಾಧ ಪತ್ತೆಯಾಗಿಲ್ಲ. ಮುಚ್ಚಿದ ಕವರ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ತನಿಖೆಯ ಫಲಿತಾಂಶವನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗಿದೆ...
ದೆಹಲಿ: ಮಾಜಿ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ (Niira Radia tapes)ಅವರು ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಧ್ವನಿಮುದ್ರಿತ ಸಂಭಾಷಣೆಯ ತನಿಖೆಯ ನಂತರ ಯಾವುದೇ ಅಪರಾಧ ಪತ್ತೆಯಾಗಿಲ್ಲ ಎಂದು ಕೇಂದ್ರೀಯ ತನಿಖಾ ದಳ (CBI) ಬುಧವಾರ ಸುಪ್ರೀಂಕೋರ್ಟ್‌ಗೆ (Supreme Court) ತಿಳಿಸಿದೆ. ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ನ್ಯಾಯಾಲಯದ ಆದೇಶದ ತನಿಖೆಯ ಫಲಿತಾಂಶದ ಕುರಿತು 2015 ರಲ್ಲಿ ಏಜೆನ್ಸಿ ಸಲ್ಲಿಸಿದ ಮುಚ್ಚಿದ ಕವರ್ ವರದಿಯ ಬಗ್ಗೆ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಿದರು. ಇಷ್ಟು ವರ್ಷಗಳಾದರೂ ಈ ಪ್ರಕರಣವನ್ನು ನ್ಯಾಯಾಲಯ ಕೈಗೆತ್ತಿಕೊಂಡಿರಲಿಲ್ಲ. ತನಿಖೆಯಲ್ಲಿ ಯಾವುದೇ ಅಪರಾಧ ಪತ್ತೆಯಾಗಿಲ್ಲ. ಮುಚ್ಚಿದ ಕವರ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ತನಿಖೆಯ ಫಲಿತಾಂಶವನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗಿದೆ ಎಂದು ಭಾಟಿ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠಕ್ಕೆ ಹೇಳಿದ್ದಾರೆ. ಅಕ್ಟೋಬರ್‌ನಲ್ಲಿ ನ್ಯಾಯಾಲಯವು ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮೊದಲು ಸಿಬಿಐ ಇತ್ತೀಚಿನ ಸ್ಥಿತಿ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ಕೈಗಾರಿಕೋದ್ಯಮಿ ರತನ್ ಟಾಟಾ ಸಲ್ಲಿಸಿದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ಈ ವರದಿಯನ್ನು ಸಲ್ಲಿಸಿದೆ. ತಮ್ಮ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದ ಟಾಟಾ, ನೀರಾ ರಾಡಿಯಾ ಒಳಗೊಂಡ ಆಡಿಯೊ ಟೇಪ್ ಸೋರಿಕೆ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಎಂಬ ಎನ್ ಜಿಒ ಟೇಪ್‌ಗಳ ತನಿಖೆಗೆ ಒತ್ತಾಯಿಸಿದ್ದು ಅವೆಲ್ಲವನ್ನೂ ಸಾರ್ವಜನಿಕಗೊಳಿಸಬೇಕೆಂದು ಒತ್ತಾಯಿಸಿತ್ತು. 2013 ಅಕ್ಟೋಬರ್ ತಿಂಗಳಲ್ಲಿ ತೆರಿಗೆ ವಂಚನೆಯ ತನಿಖೆಯ ಭಾಗವಾಗಿ 2008 ಮತ್ತು 2009 ರ ನಡುವೆ ರಾಡಿಯಾ ಅವರ 5,800 ಕ್ಕೂ ಹೆಚ್ಚು ಟೇಪ್ ಮಾಡಿದ ಸಂಭಾಷಣೆಗಳ ಪ್ರತಿಗಳನ್ನು ಪರಿಶೀಲಿಸಿದ ನಂತರ ಏಜೆನ್ಸಿಯು ಗುರುತಿಸಿದ 14 ಸಮಸ್ಯೆಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಸಿಬಿಐಗೆ ನಿರ್ದೇಶಿಸಿತು.
ಕಾರ್ಪೊರೇಟ್ ಲಾಬಿ ಮಾಡುವವರು ಮತ್ತು ಉನ್ನತ ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ಗಳ ನಡುವಿನ ಸಂಭಾಷಣೆಯಲ್ಲಿ ಹೊರಹೊಮ್ಮಿದ ಸಂಭವನೀಯ ಅಪರಾಧಗಳನ್ನು ತನಿಖೆ ಮಾಡಲು ಸಿಬಿಐ ಈ ವಿಷಯದಲ್ಲಿ 14 ಪ್ರಾಥಮಿಕ ವಿಚಾರಣೆಗಳನ್ನು (PEs) ದಾಖಲಿಸಿದೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈಗ ಎಲ್ಲಾ ಪ್ರಕರಣಗಳು ಮುಚ್ಚಿಹೋಗಿವೆ.
ಆದಾಗ್ಯೂ 2013 ರಲ್ಲಿ ತನಿಖೆಗೆ ಆದೇಶಿಸುವಾಗ, ಸುಪ್ರೀಂಕೋರ್ಟ್ ಸಂಭಾಷಣೆಗಳು ಖಾಸಗಿ ಉದ್ದಿಮೆಗಳು ಸರ್ಕಾರಿ ಅಧಿಕಾರಿಗಳು ಮತ್ತು ಇತರರೊಂದಿಗೆ ಅನ್ಯ ಉದ್ದೇಶಗಳಿಗಾಗಿ ಮಾಡಿದ ದುರುದ್ದೇಶವನ್ನು ಸೂಚಿಸುತ್ತವೆ. ಆಸಕ್ತ ವ್ಯಕ್ತಿಗಳು ಸರ್ಕಾರಿ ಅಧಿಕಾರಿಗಳು ಮತ್ತು ಇತರರಿಂದ ಲಾಭವನ್ನು ಪಡೆದುಕೊಂಡಿದ್ದಾರೆ, ಇದು ಲಾಭಗಳನ್ನು ಹೊರತೆಗೆಯಲು ಖಾಸಗಿ ಪಕ್ಷಗಳು ಅಳವಡಿಸಿಕೊಂಡಿರುವ ಭ್ರಷ್ಟ ವಿಧಾನಗಳನ್ನು ಸೂಚಿಸುತ್ತದೆ ಎಂದಿತ್ತು.