Stalin Delhi Visit: ಕೇಂದ್ರ- ರಾಜ್ಯದ ಸಂಬಂಧವೇ ಬೇರೆ, ಡಿಎಂಕೆ-ಬಿಜೆಪಿ ಸಂಘರ್ಷವೇ ಬೇರೆ: ತಮಿಳುನಾಡು ಸಿಎಂ ಸ್ಟಾಲಿನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 17, 2022 | 7:08 AM

Tamil Nadu Politics: ‘ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಸಂಬಂಧ ಇದ್ದೇ ಇರುತ್ತದೆ. ಅದನ್ನು ಡಿಎಂಕೆ ಮತ್ತು ಬಿಜೆಪಿ ನಡುವಣ ಸಂಬಂಧ ಎಂಬ ಭಾವನೆಯಿಂದ ನೋಡಬಾರದು’ -ಎಂಕೆ ಸ್ಟಾಲಿನ್

Stalin Delhi Visit: ಕೇಂದ್ರ- ರಾಜ್ಯದ ಸಂಬಂಧವೇ ಬೇರೆ, ಡಿಎಂಕೆ-ಬಿಜೆಪಿ ಸಂಘರ್ಷವೇ ಬೇರೆ: ತಮಿಳುನಾಡು ಸಿಎಂ ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ (MK Stalin) ಅವರು ಎರಡು ದಿನಗಳ ಭೇಟಿಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ತೆರಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu), ಉಪರಾಷ್ಟ್ರಪತಿ ಜಗದೀಪ್ ಧನ್​ಕರ್ (Jagdeep Dhankhar) ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ವಿವಿಧ ವಿಚಾರಗಳನ್ನು ಚರ್ಚಿಸಲಿದ್ದಾರೆ. ಮಂಗಳವಾರ ರಾತ್ರಿ 9.30ಕ್ಕೆ ದೆಹಲಿಗೆ ವಿಮಾನದಲ್ಲಿ ತೆರಳಿದ ಸ್ಟಾಲಿನ್ ಅವರು ಬುಧವಾರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯನ್ನು ಭೇಟಿಯಾಗಿ ಅಭಿನಂದಿಸಲಿದ್ದಾರೆ.

ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಯಾಗಿ, ಚೆನ್ನೈನಲ್ಲಿ ನಡೆದ 44ನೇ ಚೆಸ್ ಒಲಂಪಿಯಾಡ್​ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅಭಿನಂದಿಸಲಿದ್ದಾರೆ. ತಮಿಳುನಾಡು ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳ ಬಗ್ಗೆ ರಾಜ್ಯಪಾಲ ರವಿ ಅವರು ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಉಳಿಸಿರುವ ಬಗ್ಗೆ ಸ್ಟಾಲಿನ್ ಮೋದಿ ಅವರ ಗಮನ ಸೆಳೆಯುವ ಸಾಧ್ಯತೆಯಿದೆ. ಬುಧವಾರ ರಾತ್ರಿ ಅವರು ಚೆನ್ನೈಗೆ ಹಿಂದಿರುಗಲಿದ್ದಾರೆ.

ಚೆನ್ನೈನಲ್ಲಿ ನಡೆದ ಚೆಸ್ ಒಲಂಪಿಯಾಡ್​ಗೆ ಮೋದಿ ಅವರನ್ನು ಮುಖತಃ ಭೇಟಿ ಮಾಡಿಯೇ ಸ್ವಾಗತಿಸಬೇಕು ಎಂದು ಸ್ಟಾಲಿನ್ ನಿರ್ಧರಿಸಿದ್ದರು. ಆದರೆ ಕೊವಿಡ್ ಕಾರಣದಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಹೀಗಾಗಿ ಫೋನ್ ಮೂಲಕ ಮೋದಿ ಅವರನ್ನು ಆಹ್ವಾನಿಸಿದ್ದರು. ಕಳೆದ ಏಪ್ರಿಲ್ 2022ರಂದು ಸ್ಟಾಲಿನ್ ಅವರ ದೆಹಲಿಗೆ ಭೇಟಿ ನೀಡಿದ್ದರು. ಅಂದು ರಾಷ್ಟ್ರ ರಾಜಧಾನಿಯಲ್ಲಿ ಡಿಎಂಕೆ ಕಚೇರಿ ಉದ್ಘಾಟಿಸಿದ್ದರು. ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸರ್ಕಾರಿ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್​ಗಳಿಗೆ ಭೇಟಿ ನೀಡಿದ್ದರು.

ಬಿಜೆಪಿ ಜೊತೆಗೆ ಸೈದ್ಧಾಂತಿಕ ಹೊಂದಾಣಿಕೆಯಿಲ್ಲ

ಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಸೈದ್ಧಾಂತಿಕವಾಗಿ ತುಸುವೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದರು. ‘ನಾನು ದೆಹಲಿಗೆ ಕವಡಿಯಾಟ್ಟಂ ಆಡಲು ಹೋಗುತ್ತಿಲ್ಲ. ನಾನು ದೆಹಲಿಗೆ ಕೈಮುಗಿದು ಯಾರನ್ನಾದರೂ ಒಲಿಸಿಕೊಳ್ಳಲು ಹೋಗುತ್ತಿಲ್ಲ ಅಥವಾ ಯಾರದ್ದಾದರೂ ದಬಾವಣೆಯಿಂದ ನಾನು ದೆಹಲಿಗೆ ಹೋಗುತ್ತಿಲ್ಲ. ನಾನು ಅಲ್ಲಿಗೆ ಹೋಗುತ್ತಿರುವುದು ಭಾರತ ಸರ್ಕಾರದಿಂದ ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಲು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಸಂಬಂಧ ಇರಲೇಬೇಕು, ಇದ್ದೇ ಇರುತ್ತದೆ. ಅದನ್ನು ಡಿಎಂಕೆ ಮತ್ತು ಬಿಜೆಪಿ ನಡುವಣ ಸಂಬಂಧ ಎಂಬ ಭಾವನೆಯಿಂದ ನೋಡಬಾರದು’ ಎಂದು ಅವರು ದೆಹಲಿಗೆ ಹೊರಡುವ ಮೊದಲು ಸ್ಪಷ್ಟಪಡಿಸಿದ್ದರು.

ಸ್ಟಾಲಿನ್ ಅವರು ಬಿಜೆಪಿಗೆ ಹತ್ತಿರವಾಗಲು ಯತ್ನಿಸುತ್ತಿದ್ದಾರೆ. ಇದರಿಂದ ತಮಿಳುನಾಡಿನ ಸ್ಥಳೀಯ ರಾಜಕಾರಣದಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗಲಿದೆ ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಟಾಲಿನ್ ಸ್ಪಷ್ಟನೆ ನೀಡಿದರು. ‘ನಾನು ಕರುಣಾನಿಧಿಯ ಮಗ. ದ್ರಾವಿಡ ಸಿದ್ಧಾಂತದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.

Published On - 7:07 am, Wed, 17 August 22