ಟಿವಿಕೆ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಯನ್ನೇ ಸರ್ಕಾರದ ವಿಶೇಷ ಅಧಿಕಾರಿಯಾಗಿ ನೇಮಿಸಿದ ಸಿಎಂ ವಿಜಯ್

ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಭರ್ಜರಿ ಗೆಲುವು ಸಾಧಿಸಿತ್ತು. ಈ ಚುನಾವಣೆಯಲ್ಲಿ ಆಡಳಿತ ಪಕ್ಷವಾಗಿದ್ದ ಡಿಎಂಕೆ ಕೂಡ ಟಿವಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಮೊದಲ ಚುನಾವಣೆಯಲ್ಲೇ ವಿಜಯ್ ಮುಖ್ಯಮಂತ್ರಿಯಾಗಿದ್ದಾರೆ. ಈ ಭರ್ಜರಿ ಗೆಲುವಿನ ಬಗ್ಗೆ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಚುನಾವಣೆಗೂ ಮೊದಲೇ ಭವಿಷ್ಯ ನುಡಿದಿದ್ದರು. ಇದೀಗ ಅದೇ ಜ್ಯೋತಿಷಿಯನ್ನು ಮುಖ್ಯಮಂತ್ರಿ ವಿಜಯ್ ತಮ್ಮ ಸರ್ಕಾರದ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಿದ್ದಾರೆ!

ಟಿವಿಕೆ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಯನ್ನೇ ಸರ್ಕಾರದ ವಿಶೇಷ ಅಧಿಕಾರಿಯಾಗಿ ನೇಮಿಸಿದ ಸಿಎಂ ವಿಜಯ್
Vijay And Radhan Pandit
Image Credit source: PTI

Updated on: May 12, 2026 | 3:51 PM

ಚೆನ್ನೈ, ಮೇ 12: ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ (Joseph Vijay) ಅವರ ಗೆಲುವಿನ ಬಗ್ಗೆ ಚುನಾವಣೆಗೂ ಮುನ್ನವೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಇಂದು ತಮಿಳುನಾಡು ಮುಖ್ಯಮಂತ್ರಿಯ ವಿಶೇಷ ಕರ್ತವ್ಯ ಅಧಿಕಾರಿ (OSD) ಆಗಿ ನೇಮಿಸಲಾಗಿದೆ. ಈ ನೇಮಕ ಭಾರೀ ಚರ್ಚೆಗೆ ಕಾರಣವಾಗಿದೆ. ಟಿವಿಕೆ (TVK) ಪಕ್ಷವನ್ನು ಕೇವಲ 2 ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. 2024ರಲ್ಲಿ ನಟ ವಿಜಯ್ ಅವರ ರಾಜಕೀಯ ಉದಯದ ಬಗ್ಗೆ ಖ್ಯಾತ ಜ್ಯೋತಿಷಿಯಾದ ರಾಧನ್ ಪಂಡಿತ್ ಭವಿಷ್ಯ ನುಡಿದಿದ್ದರು.

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ವೈಯಕ್ತಿಕ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ವಿಜಯ್ ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ರಾಧನ್ ಪಂಡಿತ್ ಯಾರು?:

ವೈದಿಕ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಆಧಾರಿತ ಮಾರ್ಗದರ್ಶನದಲ್ಲಿ ಸುಮಾರು 4 ದಶಕಗಳ ಅನುಭವ ಹೊಂದಿರುವ ರಾಧನ್ ಪಂಡಿತ್ ವೆಟ್ರಿವೇಲ್ ಭಾರತದ ಅತ್ಯಂತ ಉನ್ನತ ಮಟ್ಟದ ಸೆಲೆಬ್ರಿಟಿ ಮತ್ತು ರಾಜಕೀಯ ಜ್ಯೋತಿಷಿಗಳಲ್ಲಿ ಒಬ್ಬರು. ಪಂಡಿತ್ ವೆಟ್ರಿವೇಲ್ ಎಂದು ಕರೆಯಲ್ಪಡುವ ಈ ಜ್ಯೋತಿಷಿ 2008ರಲ್ಲಿ ದೆಹಲಿಗೆ ತೆರಳಿದ್ದರು. ಅಲ್ಲಿ ಅವರು ತಮ್ಮ ಹೆಸರನ್ನು ರಾಧನ್ ಪಂಡಿತ್ ಎಂದು ಬದಲಾಯಿಸಿಕೊಂಡರು.

ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ

ಮಾಧ್ಯಮ ವರದಿಗಳ ಪ್ರಕಾರ, ಬಿಜೆಪಿ, ಕಾಂಗ್ರೆಸ್, ಡಿಎಂಕೆ ಮತ್ತು ಎಐಎಡಿಎಂಕೆಯಾದ್ಯಂತ ರಾಧನ್ ಪಂಡಿತ್ ಅವರ ಕ್ಲೈಂಟ್‌ಗಳು ಹೆಚ್ಚಾಗಿ ಭಾರತೀಯ ರಾಜಕಾರಣಿಗಳೇ ಆಗಿದ್ದಾರೆ. ಪಂಡಿತ್ ರಾಧನ್ ಪಂಡಿತ್ ನಟ-ರಾಜಕಾರಣಿ ವಿಜಯ್ ಮತ್ತು ಟಿವಿಕೆಯ ಪ್ರಮುಖ ಬೆಂಬಲಿಗರಲ್ಲಿ ಒಬ್ಬರು. ಏಪ್ರಿಲ್‌ನಲ್ಲಿ ತಮಿಳುನಾಡಿನಲ್ಲಿ ನಡೆದ ಚುನಾವಣೆಗೆ ಬಹಳ ಮುಂಚೆಯೇ ವಿಜಯ್ ಅವರ ಜಾತಕದ ಪ್ರಕಾರ ಅವರಿಗೆ ರಾಜಕೀಯದಲ್ಲಿ ಭರ್ಜರಿ ಯಶಸ್ಸು ಸಿಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು. ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ವಿಜಯ್ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಧನ್ ಪಂಡಿತ್ ಭವಿಷ್ಯ ನುಡಿದಿದ್ದರು.

ತಮಿಳುನಾಡಿನಲ್ಲಿ ಪ್ರಮುಖ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುವ ರಾಧನ್ ಪಂಡಿತ್ ಚುನಾವಣೆಗೂ ಬಹಳ ಮೊದಲೇ ವಿಜಯ್ ಅವರ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು. ವಿಜಯ್ ಮಾತ್ರವಲ್ಲದೆ, ಮಾಜಿ ಸಿಎಂ ಜಯಲಲಿತಾ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ರಾಧನ್ ಪಂಡಿತ್ ಅವರ ಕಚೇರಿಯ ಮುಂದೆ ಸಾಲುಗಟ್ಟಿ ನಿಂತಿದ್ದರು. 4 ದಶಕಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿದ್ದು, ಹಲವಾರು ರಾಜಕೀಯ ದಿಗ್ಗಜರ ಭವಿಷ್ಯ ನುಡಿದಿರುವ ವ್ಯಕ್ತಿ ಇದೀಗ ಮುಖ್ಯಮಂತ್ರಿಗಳ ವಿಶೇಷ ರಾಜಕೀಯ ಕರ್ತವ್ಯ ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ, ಟಿವಿಕೆಗೆ ಷಣ್ಮುಗಂ ನೇತೃತ್ವದ 30 ಶಾಸಕರ ಬೆಂಬಲ

ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪ್ರಮುಖ ಗೆಲುವು ಸಾಧಿಸಿತ್ತು. ಈ ಮೂಲಕ ಟಿವಿಕೆ 108 ಸ್ಥಾನಗಳೊಂದಿಗೆ ತಮಿಳುನಾಡಿನ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಮತ್ತು ಇತರ ಎಡ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us