‘ದೇವಾಲಯದ ಆಡಳಿತವೇ ಹೊಣೆ’; ದೀಪ ಬೆಳಗಿಸುವ ಆದೇಶ ಉಲ್ಲಂಘನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದ ತಮಿಳುನಾಡು ಸರ್ಕಾರ

ತಮಿಳುನಾಡಿನ ಮಧುರೈನಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ಪ್ರಾಚೀನ ಕಲ್ಲಿನ ಕಂಬ ದೀಪಥೂನ್‌ನಲ್ಲಿ ದೀಪ ಬೆಳಗಿಸುವ ಸಮಾರಂಭ ನಿನ್ನೆ (ಮಂಗಳವಾರ) ನಡೆಯಲಿಲ್ಲ. ಸಾಂಪ್ರದಾಯಿಕ ದೀಪವನ್ನು ಬೆಳಗಿಸದಿದ್ದಕ್ಕಾಗಿ ತಮಿಳುನಾಡು ಸರ್ಕಾರ ಇಂದು ನ್ಯಾಯಾಲಯಕ್ಕೆ ಕ್ಷಮೆಯಾಚಿಸಿತು. ದೀಪ ಬೆಳಗಿಸಲು ಪ್ರಸ್ತಾಪಿಸಿದ ತಂಡವನ್ನು ಅವರು ಅನುಮೋದಿಸಲಿಲ್ಲ ಎಂದು ಹೇಳುವ ಮೂಲಕ ಸರ್ಕಾರವು ಈ ಆದೇಶ ಉಲ್ಲಂಘನೆಗೆ ಅರುಲ್ಮಿಗು ಸುಬ್ರಮಣ್ಯಸ್ವಾಮಿ ದೇವಾಲಯ ಆಡಳಿತವೇ ಹೊಣೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ದೀಪಗಳನ್ನು ಬೆಳಗಿಸುವಂತೆ ನಿರ್ದೇಶನ ನೀಡಿದ್ದರೂ, ಮಂಗಳವಾರ ತಿರುಪ್ಪರಕುಂದ್ರಂನಲ್ಲಿರುವ ಸಾಂಪ್ರದಾಯಿಕ 'ಉಚಿ ಪಿಳ್ಳೈಯರ್ ಮಂಟಪ'ದಲ್ಲಿ ಮಾತ್ರ ವಾರ್ಷಿಕ 'ಕಾರ್ತಿಗೈ ದೀಪ'ವನ್ನು ಬೆಳಗಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

ದೇವಾಲಯದ ಆಡಳಿತವೇ ಹೊಣೆ; ದೀಪ ಬೆಳಗಿಸುವ ಆದೇಶ ಉಲ್ಲಂಘನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದ ತಮಿಳುನಾಡು ಸರ್ಕಾರ
ದೀಪ ಬೆಳಗಿಸುವ ವಿವಾದ

Updated on: Nov 25, 2026 | 8:02 PM

ನವದೆಹಲಿ, ನವೆಂಬರ್ 25: ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ವಿವಾದಿತ ‘ದೀಪತೂನ್’ ಕಲ್ಲಿನ ಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗಿಸುವಂತೆ ನೀಡಿದ್ದ ಆದೇಶವನ್ನು ಪಾಲಿಸಲು ವಿಫಲವಾಗಿರುವುದಕ್ಕೆ ತಮಿಳುನಾಡು ಸರ್ಕಾರ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದೆ. ಆದರೆ, ಆದೇಶ ಉಲ್ಲಂಘನೆಗೆ ಅರುಳ್ಮಿಗು ಸುಬ್ರಮಣಿಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯೇ ಕಾರಣ ಎಂದು ರಾಜ್ಯ ಸರ್ಕಾರ ಮತ್ತು ಮಧುರೈ ಜಿಲ್ಲಾಡಳಿತ ದೂಷಿಸಿವೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ಇಂದು ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ವಸ್ತುಸ್ಥಿತಿ ವರದಿ  ಸಲ್ಲಿಸಿದರು.

ದೇವಸ್ಥಾನದ ಟ್ರಸ್ಟಿಗಳ ಮಂಡಳಿಯು ಪ್ರಸ್ತಾವಿತ ತಂಡಕ್ಕೆ ದೀಪ ಬೆಳಗಿಸಲು ಅನುಮತಿ ನಿರಾಕರಿಸಿದ ಕಾರಣ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. “ನ್ಯಾಯಾಲಯದ ಆದೇಶವನ್ನು ಪಾಲಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಾನು ನಿಷ್ಠೆಯಿಂದ ತೆಗೆದುಕೊಂಡಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಈ ನ್ಯಾಯಾಲಯದ ಯಾವುದೇ ನಿರ್ದೇಶನವನ್ನು ನಾನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿಲ್ಲ. ನ್ಯಾಯಾಲಯದ ಆದೇಶಗಳನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಮತ್ತು ಈ ನ್ಯಾಯಾಲಯವು ಹೊರಡಿಸಿದ ಪ್ರತಿಯೊಂದು ನಿರ್ದೇಶನವನ್ನು ಪಾಲಿಸಲು ಬದ್ಧನಾಗಿದ್ದೇನೆ” ಎಂದು ಮಧುರೈ ಜಿಲ್ಲಾಧಿಕಾರಿ ಹೇಳಿದ್ದಾರೆ.

Loading...

ನವೆಂಬರ್ 20ರ ಸುಪ್ರೀಂ ಕೋರ್ಟ್ ಆದೇಶದಂತೆ ‘ದೀಪತೂನ್’ ಸ್ತಂಭದ ಮೇಲೆ ದೀಪ ಬೆಳಗಿಸಲು ಸಾಧ್ಯವಾಗದಿದ್ದಕ್ಕಾಗಿ ರಾಜ್ಯ ಸರ್ಕಾರವು ನ್ಯಾಯಾಲಯದ ಬೇಷರತ್ ಕ್ಷಮೆಯಾಚಿಸಿದೆ. “ಗೌರವಾನ್ವಿತ ನ್ಯಾಯಾಲಯದ ಆದೇಶಗಳಿಗೆ ನಾವು ಅತ್ಯುನ್ನತ ಗೌರವ ನೀಡುತ್ತೇವೆ. ಉದ್ದೇಶಪೂರ್ವಕವಾಗಿ ಆದೇಶ ಉಲ್ಲಂಘಿಸಿಲ್ಲ” ಎಂದು ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಲು ಜಿಲ್ಲಾಡಳಿತವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು ಎಂದು ವಾದಿಸಿರುವ ಸರ್ಕಾರ, “ದೀಪತೂನ್ ಸ್ತಂಭದ ಮೇಲೆ ದೀಪ ಬೆಳಗಿಸಲು ಪ್ರಸ್ತಾಪಿಸಲಾಗಿದ್ದ ತಂಡಕ್ಕೆ ಅರುಳ್ಮಿಗು ಸುಬ್ರಮಣಿಯ ಸ್ವಾಮಿ ದೇವಾಲಯದ ಟ್ರಸ್ಟಿಗಳ ಮಂಡಳಿಯು ಅಧಿಕೃತ ಅನುಮತಿ ನೀಡಲಿಲ್ಲ” ಎಂದು ದೂರಿದೆ.

ಇದನ್ನೂ ಓದಿ: ಕಾರ್ತಿಕ ದೀಪೋತ್ಸವಕ್ಕೂ ಮುನ್ನ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಬಂಧನ; 750 ನಾಯಕರಿಗೆ ಗೃಹಬಂಧನ

ದೇವಸ್ಥಾನದ ಪರವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಜಿಲ್ಲಾಡಳಿತವು ಸ್ವತಂತ್ರವಾಗಿ ಯಾರನ್ನೂ ನೇಮಿಸಲು ಅಥವಾ ಅನುಮೋದಿಸಲು ಸಾಧ್ಯವಿಲ್ಲದ ಕಾರಣ, ಅನಿವಾರ್ಯವಾಗಿ ಸಾಂಪ್ರದಾಯಿಕ ಉಚ್ಚಿಪಿಳ್ಳೈಯಾರ್ ಮಂಟಪದಲ್ಲೇ ದೀಪ ಬೆಳಗಿಸಲಾಯಿತು ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

 

“ದೀಪಥೂನದಂದು ದೀಪಗಳನ್ನು ಬೆಳಗಿಸದಿದ್ದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಜಿಲ್ಲಾಡಳಿತವು ದೇವಸ್ಥಾನದಿಂದ (ದೇವಾಲಯ ಪ್ರಾಧಿಕಾರ) ಅನುಮತಿ ಪಡೆದು ದೀಪೋತ್ಸವದಂದು ದೀಪಗಳನ್ನು ಬೆಳಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ, ಟ್ರಸ್ಟಿಗಳ ಮಂಡಳಿಯು ನವೆಂಬರ್ 24ರಂದು ಅವರ ಸಾಂಪ್ರದಾಯಿಕ ಸ್ಥಳದಲ್ಲಿ ದೀಪಗಳನ್ನು ಬೆಳಗಿಸಲು ನಿರ್ಧರಿಸಿತು”  ಎಂದು ಅವರು ಹೇಳಿದ್ದಾರೆ.

ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಸಮ್ಮತಿ:

ಮಂಗಳವಾರ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ದೀಪತೂನ್ ಸ್ತಂಭವನ್ನು ಕತ್ತಲೆಯಲ್ಲಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗಳು ಮತ್ತು ಇತರ ಅರ್ಜಿಗಳನ್ನು ಇನ್ನೊಂದು ಅಥವಾ 2 ದಿನಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೆ, ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮುಖ್ಯ ಅರ್ಜಿಯ ಅಂತಿಮ ವಿಚಾರಣೆಯನ್ನು ಮುಂದಿನ ವರ್ಷದ ಜನವರಿ ತಿಂಗಳಿಗೆ ನಿಗದಿಪಡಿಸಿದೆ.

ಇದನ್ನೂ ಓದಿ: ಕಾರ್ತಿಕ ದೀಪೋತ್ಸವ ವಿವಾದ; ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಮಧುರೈನ ಸಾಂಪ್ರದಾಯಿಕ ಸ್ಥಳದಲ್ಲೇ ದೀಪ ಬೆಳಗಿದ ಆಡಳಿತ

ಮಂಗಳವಾರ ಸಂಜೆ ‘ದೀಪತೂನ್’ ಬದಲು ಸಾಂಪ್ರದಾಯಿಕ ಸ್ಥಳದಲ್ಲಿ ದೀಪ ಬೆಳಗಿಸಿದ್ದರಿಂದ ಮಧುರೈನಲ್ಲಿ ತೀವ್ರ ರಾಜಕೀಯ ಸಂಘರ್ಷ ಮತ್ತು ಪ್ರತಿಭಟನೆಗಳು ಭುಗಿಲೆದ್ದಿವೆ. ಇದೇ ವಿಚಾರವಾಗಿ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೂ ವರದಿಯಾಗಿದ್ದು, ಹಿಂದೂ ಸಂಘಟನೆಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ತಿರುಪ್ಪರಂಕುಂಡ್ರಂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us