AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂನಲ್ಲಿ ನೂತನ ವಿಮಾನ ನಿಲ್ದಾಣ, ತಮಿಳುನಾಡಿನಲ್ಲಿ 2ನೇ ಕಂಟೇನರ್ ಟರ್ಮಿನಲ್ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದನೆ

ದಕ್ಷಿಣ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ವಾಯು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಅಸ್ಸಾಂನ ಕಚಾರ್ ಜಿಲ್ಲೆಯ ಸಿಲ್ಚಾರ್‌ನ ಡೊಲೂ ಎಂಬಲ್ಲಿ ನೂತನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 2,014 ಕೋಟಿ ಅಂದಾಜು ವೆಚ್ಚದ ಈ ಮಹತ್ವದ ಯೋಜನೆಗೆ ಹಸಿರು ನಿಶಾನೆ ತೋರಲಾಗಿದೆ. ಸಿಲ್ಚಾರ್ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಗೆ ಸೇರಿದ ರಕ್ಷಣಾ ಭೂಮಿಯಲ್ಲಿ ಕೇವಲ 70 ಎಕರೆ ಪ್ರದೇಶದಲ್ಲಿ ನಾಗರಿಕ ವಿಮಾನಯಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಅಸ್ಸಾಂನಲ್ಲಿ ನೂತನ ವಿಮಾನ ನಿಲ್ದಾಣ, ತಮಿಳುನಾಡಿನಲ್ಲಿ 2ನೇ ಕಂಟೇನರ್ ಟರ್ಮಿನಲ್ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದನೆ
ಅಶ್ವಿನಿ ವೈಷ್ಣವ್Image Credit source: PTI
ಸುಷ್ಮಾ ಚಕ್ರೆ
|

Updated on: Nov 25, 2026 | 6:37 PM

Share

ನವದೆಹಲಿ, ನವೆಂಬರ್ 25: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2 ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅಸ್ಸಾಂನ ಸಿಲ್ಚಾರ್‌ನ ಡೊಲೂ ಎಂಬಲ್ಲಿ ನೂತನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮತ್ತು ತಮಿಳುನಾಡಿನ ಕಾಮರಾಜರ್ ಬಂದರಿನಲ್ಲಿ 2ನೇ ಕಂಟೇನರ್ ಟರ್ಮಿನಲ್ ಅಭಿವೃದ್ಧಿಗೆ ಹಸಿರು ನಿಶಾನೆ ತೋರಲಾಗಿದೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅಸ್ಸಾಂನ ಸಿಲ್ಚಾರ್‌ನ ಡೊಲೂನಲ್ಲಿ 2,014 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಿಸಲು ಅನುಮೋದನೆ ನೀಡಿದೆ. ಹಾಗೇ, ತಮಿಳುನಾಡಿನ ಕಾಮರಾಜರ್ ಬಂದರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿ 4,288.26 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಎರಡನೇ ಕಂಟೇನರ್ ಟರ್ಮಿನಲ್ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸಿಲ್ಚಾರ್‌ಗೆ ನೂತನ ವಿಮಾನ ನಿಲ್ದಾಣ:

ಡೊಲೂನಲ್ಲಿ ನಿರ್ಮಾಣವಾಗಲಿರುವ ಈ ನೂತನ ವಿಮಾನ ನಿಲ್ದಾಣವು, ಪ್ರಸ್ತುತ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿರುವ ರಕ್ಷಣಾ ಇಲಾಖೆಯ ಸಿವಿಲ್ ಎನ್‌ಕ್ಲೇವ್ ಎದುರಿಸುತ್ತಿರುವ ತೀವ್ರ ಕಾರ್ಯಾಚರಣೆ ಮತ್ತು ಸ್ಥಳಾವಕಾಶದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಲಿದೆ. ಇದು ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಡೊಲೂ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿದ್ದು, ಚಹಾ ತೋಟಗಳು, ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಪರಿಸರ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಬರಾಕ್ ಕಣಿವೆಯ ಮುಖ್ಯ ಕೇಂದ್ರವಾಗಿದೆ. ಪ್ರಸ್ತುತ ಭಾರತೀಯ ವಾಯುಪಡೆ (ಐಎಎಫ್​) ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಒಡೆತನದಲ್ಲಿರುವ ಸಿಲ್ಚಾರ್ ವಿಮಾನ ನಿಲ್ದಾಣವು 70 ಎಕರೆ ಪ್ರದೇಶದಲ್ಲಿ ಸಿವಿಲ್ ಎನ್‌ಕ್ಲೇವ್ ಅನ್ನು ನಿರ್ವಹಿಸುತ್ತಿದೆ.

ಇದನ್ನೂ ಓದಿ: ‘ಪಶ್ಚಿಮ ಬಂಗ’ವಾಗಲಿದೆ ಬಂಗಾಳ; ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ

ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಈ ನೂತನ ವಿಮಾನ ನಿಲ್ದಾಣವು ಪೀಕ್ ಅವರ್‌ಗಳಲ್ಲಿ 800 ಪ್ರಯಾಣಿಕರನ್ನು ಮತ್ತು ವಾರ್ಷಿಕವಾಗಿ 10.1 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ತಿಳಿಸಿದರು. ಈ ಯೋಜನೆಗೆ 2,014 ಕೋಟಿ ರೂ. ವೆಚ್ಚವಾಗಲಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ತನ್ನ ಆಂತರಿಕ ಸಂಪನ್ಮೂಲಗಳ ಮೂಲಕವೇ ಸಂಪೂರ್ಣ ವೆಚ್ಚವನ್ನು ಭರಿಸಲಿದೆ.

ಪ್ರಸ್ತಾವಿತ ಟರ್ಮಿನಲ್ ಕಟ್ಟಡವು 12,351 ಚದರ ಮೀಟರ್ ವಿಸ್ತೀರ್ಣ ಹೊಂದಿರಲಿದ್ದು, ಆಧುನಿಕ ಪ್ರಯಾಣಿಕ ಸೌಲಭ್ಯಗಳು, ಸುಸ್ಥಿರ ಹಸಿರು-ಕಟ್ಟಡ ತತ್ವಗಳು ಮತ್ತು ಭವಿಷ್ಯದಲ್ಲಿ ವಿಸ್ತರಿಸಬಹುದಾದ ವಿನ್ಯಾಸವನ್ನು ಒಳಗೊಂಡಿರಲಿದೆ. ಅಲ್ಲದೆ, ಈ ಯೋಜನೆಯಡಿ A-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಸೂಕ್ತವಾದ 2,705 ಮೀಟರ್ ಉದ್ದ ಮತ್ತು 45 ಮೀಟರ್ ಅಗಲದ ರನ್‌ವೇ, 6 A-320 ವಿಮಾನಗಳನ್ನು ನಿಲ್ಲಿಸಬಹುದಾದ ನೂತನ ಏಪ್ರನ್ ಮತ್ತು ಪ್ರತ್ಯೇಕ ಐಸೋಲೇಶನ್ ಬೇ ನಿರ್ಮಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಈ ವಿಮಾನ ನಿಲ್ದಾಣವು ಬರಾಕ್ ಕಣಿವೆ ಮತ್ತು ನೆರೆಯ ಈಶಾನ್ಯ ಪ್ರದೇಶಗಳಿಗೆ ಉತ್ತಮ ಸಂಪರ್ಕ ಕಲ್ಪಿಸಲಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸಲು ನೆರವಾಗಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದಕ್ಷಿಣ ಅಸ್ಸಾಂ ಮತ್ತು ನೆರೆಯ ರಾಜ್ಯಗಳ ವಾಯು ಸಂಚಾರದ ಬೇಡಿಕೆಯನ್ನು ಇದು ಪೂರೈಸಲಿದ್ದು, ವ್ಯಾಪಾರ-ವಹಿವಾಟು ವೃದ್ಧಿಸುವ ಮೂಲಕ ಈಶಾನ್ಯ ಭಾರತವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿ ಕಾರಿಡಾರ್‌ಗಳೊಂದಿಗೆ ಬೆಸೆಯಲಿದೆ.

ಇದನ್ನೂ ಓದಿ: ಮುದ್ರಾ ಸಾಲ ಖಾತ್ರಿ ಯೋಜನೆಗೆ 5,000 ಕೋಟಿ ರೂ, ರಸಗೊಬ್ಬರ ಸಬ್ಸಿಡಿಗೆ 62,370 ಕೋಟಿ ರೂ ನೀಡಲು ಕೇಂದ್ರ ಸಂಪುಟ ಅನುಮೋದನೆ

ಚಹಾ ತೋಟಗಳು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಿಗೆ ಹೆಸರಾಗಿರುವ ಅಸ್ಸಾಂನ ಬರಾಕ್ ಕಣಿವೆ ಮತ್ತು ನೆರೆಯ ಈಶಾನ್ಯ ರಾಜ್ಯಗಳಿಗೆ ಈ ವಿಮಾನ ನಿಲ್ದಾಣವು ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ. ಅಲ್ಲದೆ, ಈ ಭಾಗದ ತೋಟಗಾರಿಕಾ ಬೆಳೆಗಳು ಮತ್ತು ಬೇಗನೆ ಹಾಳಾಗುವ ಕೃಷಿ ಉತ್ಪನ್ನಗಳ ಸರಕು ಸಾಗಣೆಗೆ ಹೆಚ್ಚಿನ ಅನುಕೂಲವಾಗಲಿದ್ದು, ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಆರ್ಥಿಕತೆಗೆ ಹೊಸ ವೇಗ ನೀಡಲಿದೆ.

ಕಾಮರಾಜರ್ ಬಂದರಿನಲ್ಲಿ ಎರಡನೇ ಕಂಟೇನರ್ ಟರ್ಮಿನಲ್:

ತಮಿಳುನಾಡಿನ ಕಾಮರಾಜರ್ ಬಂದರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿ 4,288.26 ಕೋಟಿ ಅಂದಾಜು ವೆಚ್ಚದಲ್ಲಿ ಎರಡನೇ ಕಂಟೇನರ್ ಟರ್ಮಿನಲ್ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯು 18 ಮೀಟರ್ ವಿನ್ಯಾಸದ ಆಳ ಮತ್ತು ವಾರ್ಷಿಕ 2 ದಶಲಕ್ಷ TEUಗಳ ಕಂಟೇನರ್ ನಿರ್ವಹಣಾ ಸಾಮರ್ಥ್ಯದೊಂದಿಗೆ 900 ಮೀಟರ್ ಉದ್ದದ ಕಂಟೇನರ್ ಟರ್ಮಿನಲ್ ನಿರ್ಮಿಸುವ ಗುರಿ ಹೊಂದಿದೆ. ಇದನ್ನು 2 ಹಂತಗಳಲ್ಲಿ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ಹಸ್ತಾಂತರ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗುವುದು.

ಈ ನೂತನ ಟರ್ಮಿನಲ್ 400 ಮೀಟರ್ ಉದ್ದ ಮತ್ತು 24,346 TEU ಸಾಮರ್ಥ್ಯದ ಬೃಹತ್ ಕಂಟೇನರ್ ಹಡಗುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ದೊಡ್ಡ ಹಡಗುಗಳನ್ನು ನಿಭಾಯಿಸುವ ಕೆಪಿಎಲ್​ ಸಾಮರ್ಥ್ಯವನ್ನು ಬಲಪಡಿಸಲಿದ್ದು, ಅಂತಾರಾಷ್ಟ್ರೀಯ ಹಡಗು ಮಾರ್ಗಗಳೊಂದಿಗೆ ಸಂಪರ್ಕವನ್ನು ಸುಧಾರಿಸಲಿದೆ. ಚೆನ್ನೈ-ಎನ್ನೋರ್ ಕೈಗಾರಿಕಾ ಮತ್ತು ಆರ್ಥಿಕ ಪ್ರದೇಶ ಹಾಗೂ ದಕ್ಷಿಣದ ಒಳನಾಡಿನ ಆಟೋಮೊಬೈಲ್, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್ ಮತ್ತು ರಾಸಾಯನಿಕಗಳ ಆಮದು-ರಫ್ತು ಬೇಡಿಕೆಯನ್ನು ಪೂರೈಸಲು ಈ ಯೋಜನೆಯನ್ನು ರೂಪಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ