ಟೊಮೆಟೊ ದರ ಏರಿಕೆ; ಎಫ್‌ಎಫ್‌ಒಗಳಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದ ತಮಿಳುನಾಡು ಸರ್ಕಾರ

ಎಲ್ಲಾ ತರಕಾರಿಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಅಗತ್ಯಕ್ಕೆ ತಕ್ಕಂತೆ ಹೊರರಾಜ್ಯಗಳಿಂದ ಟೊಮೆಟೊ ಖರೀದಿಗೆ ಕ್ರಮಕೈಗೊಳ್ಳಲಾಗುವುದು. ತರಕಾರಿ ಬೆಲೆ ಏರಿಕೆ ಮುಂದುವರಿದರೆ ಪಡಿತರ ಅಂಗಡಿಗಳಲ್ಲೂ ಕಡಿಮೆ ಬೆಲೆಗೆ ತರಕಾರಿ ಮಾರಲು ಸಿದ್ಧ ಎಂದ ತಮಿಳುನಾಡು ಸಚಿವರು.

ಟೊಮೆಟೊ ದರ ಏರಿಕೆ; ಎಫ್‌ಎಫ್‌ಒಗಳಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದ ತಮಿಳುನಾಡು ಸರ್ಕಾರ
ಟೊಮೆಟೊ

Updated on: Jun 28, 2023 | 4:04 PM

ಚೆನ್ನೈ: ಹೆಚ್ಚುತ್ತಿರುವ ಬೆಲೆಯನ್ನು ನಿಯಂತ್ರಿಸುವುದಕ್ಕಾಗಿ ತಮಿಳುನಾಡಿನಾದ್ಯಂತ ರಾಜ್ಯ ಸರ್ಕಾರ ನಡೆಸುತ್ತಿರುವ ಫಾರ್ಮ್ ಫ್ರೆಶ್ ಔಟ್‌ಲೆಟ್‌ಗಳಲ್ಲಿ (FFO) ಟೊಮೆಟೊ (tomatoes) ಮಾರಾಟ ಮಾಡಲು ತಮಿಳುನಾಡು (Tamil Nadu) ಸರ್ಕಾರ ಕ್ರಮ ಕೈಗೊಂಡಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತೊಂದರೆಯುಂಟಾಗದಂತ ಟೊಮೆಟೊವನ್ನು ಎಫ್‌ಎಫ್‌ಒಗಳಲ್ಲಿ ಕೆಜಿಗೆ 60 ರೂ.ಗೆ ಮಾರಾಟ ಮಾಡಲಾಗುವುದು. ತಮಿಳುನಾಡಿನಲ್ಲಿ ಸಾಮಾನ್ಯ ಖರೀದಿಗಿಂತ ಶೇ.15ರಷ್ಟು ಹೆಚ್ಚು ಟೊಮೆಟೊ ಖರೀದಿಸಲಾಗಿದೆ ಎಂದು ತಮಿಳುನಾಡಿನ ಸಹಕಾರ, ಆಹಾರ ಮತ್ತು ಗ್ರಾಹಕ ರಕ್ಷಣಾ ಇಲಾಖೆ ಸಚಿವ ಪೆರಿಯಕರುಪ್ಪನ್ ಹೇಳಿದ್ದಾರೆ. ತಮಿಳುನಾಡಿನ 62 ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟವಾಗಲಿದೆ.

ಎಲ್ಲಾ ತರಕಾರಿಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದ ಸಚಿವರು ಅಗತ್ಯಕ್ಕೆ ತಕ್ಕಂತೆ ಹೊರರಾಜ್ಯಗಳಿಂದ ಟೊಮೆಟೊ ಖರೀದಿಗೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ತರಕಾರಿ ಬೆಲೆ ಏರಿಕೆ ಮುಂದುವರಿದರೆ ಪಡಿತರ ಅಂಗಡಿಗಳಲ್ಲೂ ಕಡಿಮೆ ಬೆಲೆಗೆ ತರಕಾರಿ ಮಾರಲು ಸಿದ್ಧ. ಇನ್ನು 3ರಿಂದ 4 ದಿನಗಳಲ್ಲಿ ಟೊಮೆಟೊ ಬೆಲೆ ಸಂಪೂರ್ಣ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಕಳೆದ ಕೆಲವು ದಿನಗಳಿಂದ ಕೆಜಿಗೆ 100 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ ಬೆಲೆ ಬುಧವಾರ ಚೆನ್ನೈನ ಕೊಯಂಬೆಡು ಮಾರುಕಟ್ಟೆ ಮತ್ತು ಇತರ ಚಿಲ್ಲರೆ ಅಂಗಡಿಗಳಲ್ಲಿ ಕೆಜಿಗೆ 10 ರೂ.ಇಳಿಕೆ ಆಗಿದೆ.

ಇದನ್ನೂ ಓದಿ: ಟೊಮೆಟೊ ಕೆಚಪ್ ತಿನ್ನುವುದನ್ನು ಇಂದೇ ನಿಲ್ಲಿಸಿ! ಪೌಷ್ಟಿಕ ತಜ್ಞರು ಏನು ಹೇಳುತ್ತಾರೆ ನೋಡಿ

ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆ ಬಗ್ಗೆ ಮಾತನಾಡಿದ  ಸಗಟು ವ್ಯಾಪಾರಿಗಳು, ಮಳೆಯಿಂದಾಗಿ ಟೊಮೆಟೊ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿದ್ದಾರೆ .ಆಂಧ್ರ ಮತ್ತು ಕರ್ನಾಟಕದಿಂದ ವಿಶೇಷವಾಗಿ ಆಂಧ್ರಪ್ರದೇಶದ ಮದನಪಲ್ಲಿ ಟೊಮೆಟೊ ಮಾರುಕಟ್ಟೆಯಿಂದ ಪೂರೈಕೆಯಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ. ಇದರಿಂದ ಶುಂಠಿ, ಬೇಳೆ ಸೇರಿದಂತೆ ಹಲವು ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಉದಾಹರಣೆಗೆ ಶುಂಠಿ ಕೆಜಿಗೆ 300 ರೂ.ಗೆ ಮಾರಾಟವಾಗುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ