75ನೇ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಇಡೀ ದೇಶವೇ ಅತಿ ಸಡಗರದಿಂದ ಆಗಸ್ಟ್ 15 ರಂದು ಆಚರಿಸಿತು. ಕೇಂದ್ರ ಸರ್ಕಾರವೂ ಕೂಡ ಸ್ವತಂತ್ರ ಅಮೃತ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಆಜಾದಿ ಕಾ ಅಮೃತ ಮಹೋತ್ಸವ (azadi ka amrit mahotsav) ಅಭಿಯಾನದಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಯಶಸ್ವಿಯಾಗಿಸಿತ್ತು. ಆದರೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಅಹಿತಕರ ಘಟನೆಯೊಂದು ನಡೆದು ಹೋಗಿದೆ. ಮಕ್ಕಳಿಗೆ ಸ್ವಾತಂತ್ರ್ಯದ ಬಗ್ಗೆ ಸಾರಿ ಹೇಳಬೇಕಾದ ಶಾಲೆಯ ಮುಖ್ಯ ಶಿಕ್ಷಕಿಯೇ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಹಾಗೂ ಧ್ವಜವಂದನೆ ಸಲ್ಲಿಸಲು ನಿರಾಕರಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಮೂಲಗಳ ಪ್ರಕಾರ, ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಲು ನಿರಾಕರಿಸಿದ್ದಾರೆ. ಜೊತೆಗೆ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಶಿಕ್ಷಕಿ, ನಾನೊಬ್ಬ ಕ್ರಿಶ್ಚಿಯನ್ ಆಗಿದ್ದು ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಧ್ವಜವಂದನೆಯನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಮುಖ್ಯಶಿಕ್ಷಕಿಯ ಈ ವರ್ತನೆ ಈಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದು, ಮುಖ್ಯ ಶಿಕ್ಷಣಾಧಿಕಾರಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ವಾಸ್ತವವಾಗಿ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯಶಿಕ್ಷಕಿಯಾದ ತಮಿಳ್ಸೆಲ್ವಿ ಈ ವರ್ಷ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಮಾಹಿತಿಯ ಪ್ರಕಾರ, ಅವರನ್ನು ಗೌರವಿಸುವ ಸಲುವಾಗಿ ಆಗಸ್ಟ್ 15 ರ ಸ್ವತಂತ್ರ ದಿನದಂದು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದರ ಅಂಗವಾಗಿ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಧ್ವಜರೋಹಣ ನೆರವೇರಿಸುವಂತೆ ಕೇಳಿಕೊಳ್ಳಲಾಗಿದೆ. ಆದರೆ ಇದಕ್ಕೆ ಮುಖ್ಯಶಿಕ್ಷಕಿ ನಿರಾಕರಿಸಿದ್ದರಿಂದ ಸಹಾಯಕ ಮುಖ್ಯೋಪಾಧ್ಯಾಯರೇ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇದಕ್ಕೆ ಸಬೂಬು ನೀಡಿರುವ ಮುಖ್ಯಶಿಕ್ಷಕಿ, ನನ್ನ ಧರ್ಮದಲ್ಲಿ ಧ್ವಜವಂದನೆಗೆ ಅವಕಾಶವಿಲ್ಲ ಎಂದು ವಾದಿಸಿದ್ದಾರೆ.
ಈ ಹಿಂದೆಯೂ ತಮಿಳ್ಸೆಲ್ವಿ ಅವರು ರಾಷ್ಟ್ರಧ್ವಜ ಹಾರಿಸಲು ಮತ್ತು ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಲು ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ವಿಡಿಯೋ ಮುಖಾಂತರ ಸ್ಪಷ್ಟನೆ ನೀಡುರವ ತಮಿಳ್ಸೆಲ್ವಿ ತಾನು ಕ್ರಿಶ್ಚಿಯನ್ ಧರ್ಮದವಳಾಗಿದ್ದು, ನಾನು ರಾಷ್ಟ್ರಧ್ವಜವನ್ನು ಹಾರಿಸದಿರುವುದಕ್ಕೆ ಅಥವಾ ಅದಕ್ಕೆ ನಮಸ್ಕರಿಸದಿದ್ದಕ್ಕಾಗಿ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾರೆ. ಜೊತೆಗೆ ನಾವು ದೇವರಿಗೆ ಮಾತ್ರ ನಮಸ್ಕರಿಸುತ್ತೇವೆ ಹೊರತು ಬೇರೆ ಯಾರಿಗೂ ಅಲ್ಲ. ನಾವು ಧ್ವಜವನ್ನು ಗೌರವಿಸುತ್ತೇವೆ ಆದರೆ ನಾವು ದೇವರಿಗೆ ಮಾತ್ರ ನಮಸ್ಕರಿಸುತ್ತೇವೆ ಎಂದು ವಾದಿಸಿದ್ದಾರೆ.
ವಿಷಯ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಧರ್ಮಪುರಿ ಮುಖ್ಯ ಶಿಕ್ಷಣಾಧಿಕಾರಿ (ಸಿಇಒ) ಅವರಿಗೆ ದೂರು ಸಲ್ಲಿಸಲಾಗಿದೆ. ದೂರಿನಲ್ಲಿ, ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲು ಮುಖ್ಯಶಿಕ್ಷಕಿ ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆಯೂ ಕೂಡ ಸ್ವಾತಂತ್ರ್ಯ ದಿನಾಚರಣೆ ವೇಳೆ ಮುಖ್ಯಶಿಕ್ಷಕಿ ರಜೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಕಳೆದ ಹಲವು ವರ್ಷಗಳಿಂದ ಅನಾರೋಗ್ಯದ ನೆಪದಲ್ಲಿ ಕಾರ್ಯಕ್ರಮಕ್ಕೆ ಮುಖ್ಯಶಿಕ್ಷಕಿ ಶಾಲೆಗೆ ಬಂದಿರಲಿಲ್ಲ ಎಂಬುದು ದೂರಿನಲ್ಲಿ ಉಲ್ಲೇಖವಾಗಿದೆ.