ಚೆನ್ನೈ, ಸೆಪ್ಟೆಂಬರ್ 21: ಕಾವೇರಿ ನದಿ ನೀರು ಹಂಚಿಕೆಗೆ (Cauvery water dispute) ಸಂಬಂಧಿಸಿದಂತೆ ಕರ್ನಾಟಕದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ (Duraimurgan) ಗುರುವಾರ ಹೇಳಿದ್ದಾರೆ. ಈ ಹಿಂದಿನ ಮಾತುಕತೆಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡದ ಕಾರಣ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ ಎಂದು ಅವರು ಹೇಳಿದರು. ವಿವಾದ ಬಗೆಹರಿಸಲು ರಾಜ್ಯಗಳ ಸಭೆ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಸರ್ಕಾರ ಮನವಿ ಮಾಡಿದ್ದಕ್ಕೆ ದುರೈ ಮುರುಗನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ, ಪ್ರತಿದಿನ 5,000 ಕ್ಯೂಸೆಕ್‌ನಷ್ಟು ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ದೇಶನ ನೀಡಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಆದೇಶ ಪ್ರಶ್ನಿಸಿ ಎರಡೂ ರಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದುರೈ ಮುರುಗನ್, ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮವನ್ನು ರಾಜ್ಯ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಮಾತುಕತೆಗಳಿಗೆ ಈಗ ಅವಕಾಶವಿಲ್ಲ. ಹಲವು ವರ್ಷಗಳ ಮಾತುಕತೆ ಫಲ ನೀಡದ ಕಾರಣ ನ್ಯಾಯಾಧಿಕರಣದ ಮೊರೆ ಹೋಗಿದ್ದೆವು. ಏನೇ ಇರಲಿ, ಅಂತಿಮ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಬಿಟ್ಟಿದ್ದು (ತಮಿಳುನಾಡಿಗೆ) ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು; ಬೆಂಗಳೂರಿನಲ್ಲಿರುವ ತಮಿಳರ ವಾಪಸ್ ಕರೆಸಿಕೊಳ್ಳಿ, ಸ್ಟಾಲಿನ್ಗೆ ವಾಟಾಳ್ ನಾಗರಾಜ್ ಆಗ್ರಹ
ಅಲ್ಪಾವಧಿ ಕುರುವಾಯಿ ಸಾಗುವಳಿ ಇನ್ನೂ ಮುಂದುವರಿದಿರುವ ಹಿನ್ನೆಲೆಯಲ್ಲಿ 93 ಟಿಎಂಸಿ ಅಡಿ ಸಾಮರ್ಥ್ಯಕ್ಕೆ ಬದಲಾಗಿ ಕೇವಲ 11 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೂ, ಮೆಟ್ಟೂರು ಜಲಾಶಯದ ನಾಲೆಗಳನ್ನು ಮುಚ್ಚಲು ರಾಜ್ಯ ಮುಂದಾಗುವುದಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಈ ಮಧ್ಯೆ, ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶದ ವಿರುದ್ಧ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಮಂಡ್ಯದಲ್ಲಿ ರೈತ ಸಂಘಟನೆಗಳು ಹೆದ್ದಾರಿ ತಡೆ ನಡೆಸಿವೆ. ಮತ್ತೊಂದೆಡೆ, ಕೆಆರ್ಎಸ್ ಡ್ಯಾಂಗೆ ನುಗ್ಗಲು ಯತ್ನಿಸಿದ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೆಪ್ಟೆಂಬರ್ 23ರಂದು ಮಂಡ್ಯ ಬಂದ್ಗೆ ಕರೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ