ತಮಿಳುನಾಡಿನ ಹೆಸರುವಾಸಿ ವಿಲೇಜ್ ಕುಕ್ಕಿಂಗ್ ಚಾನಲ್ (Village Cooking Channel-VCC) ಈಗೊಂದು ಐತಿಹಾಸಿಕ ಸಾಧನೆ ಮಾಡಿದೆ. ವಿಲೇಜ್ ಕುಕ್ಕಿಂಗ್ ಚಾನಲ್ ಯಾವುದು ಅಂತ ಗೊತ್ತಾಗಿರಬೇಕಲ್ಲ..! ಅದೇ ಜನವರಿಯಲ್ಲಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಹೋಗಿದ್ದ ರಾಹುಲ್ ಗಾಂಧಿ, ಮಶ್ರೂಮ್ ಬಿರ್ಯಾನಿ ಮಾಡಿದ್ದರಲ್ಲ..ಅದೇ ಅಡುಗೆ ಚಾನಲ್. ಆ ಕುಕ್ಕಿಂಗ್ ಚಾನಲ್ ಇದೀಗ ಯೂಟ್ಯೂಬ್ನಲ್ಲಿ ಬರೋಬ್ಬರಿ 1 ಕೋಟಿ ಚಂದಾದಾರರನ್ನು (subscribers) ನ್ನು ಹೊಂದಿದೆ. ಅಷ್ಟೇ ಅಲ್ಲ 1 ಕೋಟಿ ಸಬ್ಸ್ಕ್ರೈಬರ್ಸ್ ಹೊಂದಿದ ತಮಿಳಿನ ಮೊದಲ ಯೂಟ್ಯೂಬ್ ಚಾನಲ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಈ ಹಳ್ಳಿ ಅಡುಗೆ ಚಾನಲ್ ಶುರು ಮಾಡಿದ್ದು 75 ವರ್ಷದ ಪೆರಿಯಥಾಂಬಿ ಮತ್ತು ಅವರ ಮೊಮ್ಮಕ್ಕಳಾದ ಅಯ್ಯನಾರ್, ಮುರುಗೇಶನ್, ತಮಿಳುಸೆಲ್ವನ್, ಮುತ್ತುಮಾನಿಕಂ ಮತ್ತು ಸುಬ್ರಮಣಿಯನ್. 2018ರ ಏಪ್ರಿಲ್ನಿಂದ ಶುರುವಾದ ಅಡುಗೆ ಚಾನಲ್ ಭರ್ಜರಿ ಯಶಸ್ಸುಕಂಡಿದೆ. ಕೊವಿಡ್ 19 ವಿರುದ್ಧ ಹೋರಾಟಕ್ಕಾಗಿ ಈ ತಮಿಳು ವಿಲೇಜ್ ಕುಕ್ಕಿಂಗ್ ಚಾನಲ್ನಿಂದ ಬಂದ ಆದಾಯದಲ್ಲಿ 10 ಲಕ್ಷ ರೂಪಾಯಿಯನ್ನು ತಾತ-ಮೊಮ್ಮಕ್ಕಳು ಮುಖ್ಯಮಂತ್ರಿ ಕೊವಿಡ್ 19 ಪರಿಹಾರ ನಿಧಿಗೆ ನೀಡಿದ್ದಾರೆ.
ಇದು ಪಕ್ಕಾ ಹಳ್ಳಿಗಳ, ಸಂಪ್ರದಾಯ ಬದ್ಧ ಅಡುಗೆ ಮಾಡಿ ತೋರಿಸುವ ಚಾನಲ್. ಯಾವುದೇ ಮನೆಯೊಳಗೆ ಅಡುಗೆ ಮಾಡದೆ ಪುಡುಕೊಟ್ಟಾಯ್ ಜಿಲ್ಲೆಯ ಒಂದು ಕೃಷಿ ಭೂಮಿಯಲ್ಲಿ ಇವರೆಲ್ಲ ಸೇರಿ ಸಾಂಪ್ರದಾಯಿಕ, ಹಳ್ಳಿ ಅಡುಗೆಗಳನ್ನು ಮಾಡುತ್ತಾರೆ. ವೆಜ್, ನಾನ್ವೆಜ್ ಅಡುಗೆಗಳನ್ನು ತಯಾರಿಸಿ, ಅದನ್ನು ನಂತರ ಅನಾಥಾಶ್ರಮಗಳಿಗೆ, ಬಡ ಜನರಿಗೆ ಹಂಚುತ್ತಾರೆ. ಇತ್ತ ಅಡುಗೆಯೂ ಆಯಿತು, ಅತ್ತ ಸಹಾಯವೂ ಆಯಿತು ಎಂಬಂತೆ ಕೆಲಸ ಮಾಡುತ್ತಿದ್ದಾರೆ.
ಪೆರಿಯಾಥಂಬಿ ಅವರು ಕಳೆದ 50 ವರ್ಷಗಳಿಂದಲೂ ಅಡುಗೆ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಹೆಸರು ತಂದುಕೊಟ್ಟಿದ್ದು ಈ ಯೂಟ್ಯೂಬ್ ಚಾನಲ್. ಇದು ನನ್ನ ಶ್ರಮ ಮಾತ್ರವಲ್ಲ…ಎಲ್ಲ ಸಾಧ್ಯವಾಗಿದ್ದು ಮೊಮ್ಮಕ್ಕಳಿಂದಲೇ ಎನ್ನುತ್ತಾರೆ ಪೆರಿಯಾಥಂಬಿ. ನನಗೆ ಯೂಟ್ಯೂಬ್ ಚಾನಲ್ ಎಂದರೇನು ಎಂದೇ ಗೊತ್ತಿರಲಿಲ್ಲ. ಮೊಮ್ಮಕ್ಕಳೇ ಎಲ್ಲ ವಿವರಿಸಿದರು. ಅದೀಗ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂದಿದ್ದಾರೆ.
ಯೂಟ್ಯೂಬ್ ಚಾನಲ್ ಮಾಡಿದ ಪ್ರಾರಂಭದಲ್ಲಿ ನಮಗೆ ಸುಮಾರು 1.5 ಲಕ್ಷ ರೂಪಾಯಿಯಷ್ಟು ನಷ್ಟವಾಯಿತು. ಅಷ್ಟೊಂದು ಜನರೇನೂ ಇಷ್ಟಪಡುತ್ತಿರಲಿಲ್ಲ. 2019ರಷ್ಟೊತ್ತಿಗೆ ಕೇವಲ 37 ಸಾವಿರ ಸಬ್ಸ್ಕ್ರೈಬರ್ ಇದ್ದರು. ಬಳಿಕ ರೂಪುರೇಷೆಯಲ್ಲಿ ಬದಲಾವಣೆ ಮಾಡಿಕೊಂಡೆವು. ಈಗ ಇಷ್ಟರ ಮಟ್ಟಿಗೆ ಜನರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪೆರಿಯಾಥಂಬಿ ಮೊಮ್ಮಕ್ಕೂ ಅಡುಗೆ ಮಾಡುವ ಜತೆ ವಿದ್ಯಾವಂತರೂ ಆಗಿದ್ದಾರೆ. ಸುಬ್ರಹ್ಮಣಿಯನ್ ಅವರು ಕಾಮರ್ಸ್ನಲ್ಲಿ ಎಂಫಿಲ್ ಮಾಡಿದ್ದಾರೆ. ವಿಡಿಯೋ ಶೂಟ್ ಮಾಡುವುದು, ಎಡಿಟ್ ಮಾಡುವುದು ಇವರದ್ದೇ ಜವಾಬ್ದಾರಿ. ತಮಿಳುಸೆಲ್ವನ್ ನ್ಯಾನೊತಂತ್ರಜ್ಞಾನದಲ್ಲಿ ಎಂಫಿಲ್ ಮಾಡಿದ್ದರೆ, ಮುತ್ತುಮಾನಿಕಂ ಹೋಟೆಲ್ ಮ್ಯಾನೇಜ್ಮೆಂಟ್ ಓದಿದ್ದಾರೆ. ಅಯ್ಯನಾರ್ ಅವರು ಬಿಕಾಂ ಪದವಿ ಗಳಿಸಿದ್ದಾರೆ.
ಫ್ರೂಟ್ ಸಲಾಡ್ ಮಾಡುವುದನ್ನು ತೋರಿಸಿದ ವಿಧಾನ:
ಇದನ್ನೂ ಓದಿ: ರಾಖಿ ಸಾವಂತ್ಗೆ ಪಾಠ ಕಲಿಸಿ, ಪ್ರಾಮಿಸ್ ಮಾಡಿದ್ದ ಸಲ್ಲು; ಎಲ್ಲವನ್ನೂ ಬಾಯ್ಬಿಟ್ಟ ನಟಿ
Tamil Nadu Village Cooking Channel hits 1 crore YouTube subscribers
Published On - 5:22 pm, Tue, 6 July 21