Tamil Nadu Election 2021: ತಮಿಳುನಾಡಿನಲ್ಲಿ ಅಮಿತ್​ ಶಾ ಪ್ರಚಾರ; ಅಭಿವೃದ್ಧಿ ನಮ್ಮಿಂದ ಮಾತ್ರ ಸಾಧ್ಯವೆಂದ ಗೃಹ ಸಚಿವ

|

Updated on: Apr 03, 2021 | 3:20 PM

ತಮಿಳುನಾಡಿನ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂರನ್ನು ತುಂಬ ಹೊಗಳಿದ ಅಮಿತ್​ ಶಾ, ಇವರಿಬ್ಬರೂ ಜತೆಯಾಗಿ ತಮಿಳುನಾಡಿನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

Tamil Nadu Election 2021: ತಮಿಳುನಾಡಿನಲ್ಲಿ ಅಮಿತ್​ ಶಾ ಪ್ರಚಾರ; ಅಭಿವೃದ್ಧಿ ನಮ್ಮಿಂದ ಮಾತ್ರ ಸಾಧ್ಯವೆಂದ ಗೃಹ ಸಚಿವ
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅಮಿತ್ ಶಾ, ಖುಷ್ಬೂ ಸುಂದರ್​
Follow us on

ಚೆನ್ನೈ: ಗೃಹ ಸಚಿವ ಅಮಿತ್ ಶಾ ಅವರು ಇಂದು ತಮಿಳುನಾಡಿನಲ್ಲಿ ಮತ ಪ್ರಚಾರ ನಡೆಸಿದರು. ನಟಿ ಖುಷ್ಬೂ ಸುಂದರ್​ ಸ್ಪರ್ಧಿಸಿರುವ ಥೌಸಂಡ್ ಲೈಟ್ ವಿಧಾನಸಭಾ ಕ್ಷೇತ್ರದಿಂದ ಅರ್ಧ ಕಿಮೀ ದೂರ ಇರುವ ತೇನಾಂಪೇಟ್​​ನಲ್ಲಿ ರೋಡ್​ ಶೋ ನಡೆಸಿದರು. ಅಮಿತ್ ಶಾ ಜತೆ ಖುಷ್ಬೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇತರರು ಇದ್ದರು. ಇನ್ನು ರೋಡ್ ಶೋ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಮಿತ್​ ಶಾ, ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್​ನ್ನು ತೊಡೆದುಹಾಕುವಂತೆ ಮತದಾರರಿಗೆ ಕರೆ ನೀಡಿದರು. ರಾಜ್ಯದಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿಯಾಗುತ್ತದೆ. ಮಹಿಳೆಯರು, ನಿರುದ್ಯೋಗಿಗಳು ಮತ್ತು ಇಲ್ಲಿನ ಮೀನುಗಾರರಿಗೆ ನಾವು ಮಾತ್ರ ಸುರಕ್ಷತೆ ನೀಡಬಲ್ಲೆವು. ಅಲ್ಲದೆ, ತಮಿಳುನಾಡಿನ ಸಂಸ್ಕೃತಿ, ಸಂಪ್ರದಾಯದ ರಕ್ಷಣೆಯೂ ಆಗುತ್ತದೆ ಎಂದು ಹೇಳಿದ್ದಾರೆ.

ಡಿಎಂಕೆ- ಕಾಂಗ್ರೆಸ್​ನ ಭ್ರಷ್ಟಾಚಾರ-ವಂಶರಾಜಕಾರಣಕ್ಕೆ ಫುಲ್​ಸ್ಟಾಪ್​ ಇಡಬೇಕು. ಅಂದಾಗ ತಮಿಳುನಾಡು ಪ್ರಗತಿಯತ್ತ ಸಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶಾದ್ಯಂತ ಅನೇಕ ಕಡೆ ಅಭಿವೃದ್ಧಿ ಕಾರ್ಯಗಳು ಆಗಿವೆ. ಹಾಗೇ ತಮಿಳುನಾಡು ಕೂಡ ಅಭಿವೃದ್ಧಿಯಾಗಬೇಕು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಂ.ಜಿ.ರಾಮಚಂದ್ರನ್​ ಮತ್ತು ಜಯಲಲಿತಾ ಅವರು ಕನಸು ಕಂಡಂತೆ ತಮಿಳುನಾಡು ಪ್ರಗತಿಯಾಗಬೇಕು ಎಂದಿದ್ದಾರೆ. ಇನ್ನು ಥೌಸಂಡ್ ಲೈಟ್​ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಖುಷ್ಬೂಗೆ ಮತ ಹಾಕಿ, ಗೆಲ್ಲಿಸಿ. ಅವರು ಖಂಡಿತ ಇಲ್ಲಿನ ಜನರ ಕಾಳಜಿ ಮಾಡುತ್ತಾರೆ.. ಅವರ ಬೇಕು-ಬೇಡಗಳನ್ನು ಗಮನಿಸುತ್ತಾರೆ ಎಂದು ಹೇಳಿದರು.

ತಮಿಳುನಾಡಿನ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂರನ್ನು ತುಂಬ ಹೊಗಳಿದ ಅಮಿತ್​ ಶಾ, ಇವರಿಬ್ಬರೂ ಜತೆಯಾಗಿ ತಮಿಳುನಾಡಿನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಕೊವಿಡ್​-19 ಸೋಂಕು ನಿಯಂತ್ರಣಕ್ಕೂ ತುಂಬ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಬಾರಿಯೂ ಬಿಜೆಪಿ-ಎಐಎಡಿಎಂಕೆ ಮೈತ್ರಿಗೆ ಮತ ಚಲಾಯಿಸಿ, ಗೆಲ್ಲಿಸಿ ಎಂದರು. ಮತಪ್ರಚಾರ ಸಭೆಯಲ್ಲಿ ಮಾತನಾಡಿದ ಖುಷ್ಬೂ ಸುಂದರ್, ತಮಿಳುನಾಡಿನಲ್ಲಿ ಅಮ್ಮನ ಆಡಳಿತ ಮರುಕಳಿಸಬೇಕು ಎಂದರೆ ಬಿಜೆಪಿ-ಎಐಎಡಿಎಂಕೆ ಮೈತ್ರಿ ಸರ್ಕಾರ ಆಡಳಿತಕ್ಕೆ ಬರಬೇಕು ಎಂದು ತಿಳಿಸಿದರು.