ಮಹಾರಾಷ್ಟ್ರದಲ್ಲಿ 1ರಿಂದ 8ನೆ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್
ಕೊರೊನಾ ಹಿನ್ನೆಲೆಯಲ್ಲಿ 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸದೇ ತೇರ್ಗಡೆ ಮಾಡಲಾಗುವುದು. 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಕುರಿತು ಸದ್ಯದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಕೊವಿಡ್ ಸೋಂಕು ಹೆಚ್ಚುತ್ತಿರುವ ಕಾರಣ 1ರಿಂದ 8ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಕೊರೊನಾ ಕಾರಣದಿಂದ ಶಾಲೆಗಳು ಸ್ಥಗಿತಗೊಂಡು ವಿದ್ಯಾರ್ಥಿಗಳು ತರಗತಿಗಳು ನಡೆಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಟ್ವೀಟ್ ಮಾಡಿರುವ ಮಹಾರಾಷ್ಟ್ರ ರಾಜ್ಯದ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್, ಕೊರೊನಾ ಹಿನ್ನೆಲೆಯಲ್ಲಿ 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸದೇ ತೇರ್ಗಡೆ ಮಾಡಲಾಗುವುದು. 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಕುರಿತು ಸದ್ಯದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಬಹುತೇಕ 9 ಮತ್ತು 11 ನೇ ತರಗತಿಯ ತರಗತಿಗಳು ಆನ್ಲೈನ್ನಲ್ಲೇ ನಡೆದಿರುವುದರಿಂದ ಪರೀಕ್ಷೆಗಳನ್ನೂ ಆನ್ಲೈನ್ನಲ್ಲೇ ನಡೆಸಲು ವಿದ್ಯಾರ್ಥಿ ಸಮೂಹ ಆಗ್ರಹಿಸಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿದೆ ಕೊವಿಡ್ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಪುಣೆ ಜಿಲ್ಲೆಯಲ್ಲಿ ಇಂದಿನಿಂದ (ಏಪ್ರಿಲ್ 3) ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸುವ ಬಗ್ಗೆ ನಿನ್ನೆ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ನೂತನ ಆದೇಶದಂತೆ ಪುಣೆ ಜಿಲ್ಲೆಯಲ್ಲಿಇಂದು ರಾತ್ರಿ ಕರ್ಫ್ಯೂ ಜಾರಿಯಾಗಲಿದೆ.
ಪುಣೆ (ಮಹಾರಾಷ್ಟ್ರ) ಡಿವಿಷನಲ್ ಕಮಿಷನರ್ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಬಾರ್, ಹೊಟೇಲ್, ರೆಸ್ಟೋರೆಂಟ್ಗಳು ಏಳು ದಿನಗಳ ಕಾಲ ಕಾರ್ಯನಿರ್ವಹಿಸುವಂತಿಲ್ಲ. ಹೊಟೆಲ್ ಹಾಗೂ ರೆಸ್ಟೋರೆಂಟ್ಗಳಿಂದ ಹೋಮ್ ಡೆಲಿವರಿಗೆ ಮಾತ್ರ ಅವಕಾಶವಿದೆ. ಜೊತೆಗೆ, ಧಾರ್ಮಿಕ ಕ್ಷೇತ್ರಗಳು ಕೂಡ 7 ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲಿವೆ.
ಮದುವೆ ಹಾಗೂ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರ್ಕಾರ ತಡೆಯೊಡ್ಡಿದೆ. ಸಾವು ಸಂಭವಿಸಿದಲ್ಲಿ ಕೇವಲ 20 ಮತ್ತು ವಿವಾಹ ಸಮಾರಂಭದಲ್ಲಿ ಕೇವಲ 50 ಜನರು ಸೇರಬಹುದು ಎಂದು ಸೂಚನೆ ನೀಡಲಾಗಿದೆ.
ಇಂದಿನಿಂದ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ, 12 ಗಂಟೆಗಳ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಮುಂದಿನ ಶುಕ್ರವಾರ ಪರಿಸ್ಥಿತಿಯನ್ನು ಮತ್ತೆ ಅವಲೋಕಿಸಲಾಗುವುದು ಎಂದು ಡಿವಿಷನಲ್ ಕಮಿಷನರ್ ಸೌರಭ್ ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: ಎಚ್ಚರ, ಎಚ್ಚರಾ.. ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದರೆ ಒಂದೆರಡು ವರ್ಷ ಜೈಲು ಶಿಕ್ಷೆ ಗ್ಯಾರಂಟಿ
ಬಸವಕಲ್ಯಾಣ ಬಿಜೆಪಿ ಸಮಾವೇಶದಲ್ಲಿ ಕೊವಿಡ್ ನಿಯಮ ಉಲ್ಲಂಘನೆ; 5,000ಕ್ಕೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ