ದೆಹಲಿ: ಎರಡು ದಿನಗಳ ಹಿಂದೆ ಹೆಲಿಕಾಪ್ಟರ್ ಅಪಘಾತದಲ್ಲಿ (Tamilnadu Chopper crash) ಮೃತಪಟ್ಟ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡರ್ (Brigadier Lakhbinder Singh Lidder)ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಪೂರ್ಣ ಮಿಲಿಟರಿ ಗೌರವದೊಂದಿಗೆ ಮಾಡಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮೂರು ಸೇವಾ ಮುಖ್ಯಸ್ಥರು -ಜನರಲ್ ಎಂಎಂ ನರವಾಣೆ, ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್‌ನಲ್ಲಿ ಬ್ರಿಗೇಡಿಯರ್‌ಗೆ ಗೌರವ ಸಲ್ಲಿಸಿದರು. ಲಿಡ್ಡರ್ ಅವರ ಪತ್ನಿ ಹಾಗೂ ಪುತ್ರಿ ಕಣ್ಣೀರೊಂದಿಗೆ ಅಂತಿಮ ನಮನ ಸಲ್ಲಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡ ಬ್ರಿಗೇಡಿಯರ್ ಲಿಡ್ಡರ್ ಅವರಿಗೆ ಗೌರವ ಸಲ್ಲಿಸಿದರು.
Delhi: Brig LS Lidder laid to final rest with full military honours. The officer lost his life in #TamilNaduChopperCrash on 8th December. pic.twitter.com/u0ybylFOTC
— ANI (@ANI) December 10, 2021
ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಬ್ರಿಗೇಡಿಯರ್ ಲಿಡ್ಡರ್- ಈ ಮೂವರ ಮೃತದೇಹಗಳನ್ನು ಮಾತ್ರ ಇದುವರೆಗೆ ಗುರುತಿಸಲಾಗಿದೆ ಎಂದು ಸೇನೆ ಹೇಳಿದೆ. ಎಲ್ಲಾ 13 ಮೃತದೇಹಗಳನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿದ ಪೆಟ್ಟಿಗೆಗಳಲ್ಲಿ ಗುರುವಾರ ಸಂಜೆ ಕೊಯಮತ್ತೂರು ಬಳಿಯ ಸೂಲೂರಿನಿಂದ ಪಾಲಮ್ ವಾಯುನೆಲೆಗೆ ಕೊಂಡೊಯ್ಯಲಾಯಿತು. ಅಪಘಾತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಬ್ರಿಗೇಡಿಯರ್ ಲಿಡ್ಡರ್ ಬಗ್ಗೆ…
ಡಿಸೆಂಬರ್ 1990ರಲ್ಲಿ 2 JAK RIF ನಲ್ಲಿ ವೃತ್ತಿಜೀವನ ಆರಂಭಿಸಿದದ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡರ್, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರ ರಕ್ಷಣಾ ಸಹಾಯಕರಾಗಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ, ಬ್ರಿಗೇಡಿಯರ್ ಲಿಡ್ಡರ್ ಜಮ್ಮು ಮತ್ತು ಕಾಶ್ಮೀರ, ಪೂರ್ವ ವಲಯ ಮತ್ತು ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿಯೂ ಸೇವೆ ಸಲ್ಲಿಸಿದ್ದರು. ಮೇಜರ್ ಜನರಲ್ ಹುದ್ದೆಗೆ ಮುಂದಿನ ಬಡ್ತಿಗಾಗಿ ಬ್ರಿಗೇಡಿಯರ್ ಲಿಡ್ಡರ್ ಅವರನ್ನು ಹೆಸರಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕ (2020) ಲಭಿಸಿದೆ.
ಲಿಡ್ಡರ್ ಕುಟುಂಬವು 1989 ರಲ್ಲಿ ಪಂಜಾಬ್‌ನಿಂದ ಪಂಚಕುಲಕ್ಕೆ ಸ್ಥಳಾಂತರಗೊಂಡಿತು ಮತ್ತು ನಗರದಲ್ಲಿ ಮನೆಯನ್ನು ಹೊಂದಿದೆ. ಲಿಡ್ಡರ್ ಈ ವರ್ಷ ಜುಲೈನಲ್ಲಿ ಪಂಚಕುಲದಲ್ಲಿರುವ ಅವರ ಮನೆಗೆ ಭೇಟಿ ನೀಡಿದ್ದರು.
ಲಿಡ್ಡರ್ ಅವರ ಪತ್ನಿ ಗೀತಿಕಾ ಲಿಡ್ಡರ್ ಮತ್ತು ಮಗಳು ಅಶಾನಾ ಅವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಲಿಡ್ಡರ್ ಅವರ ದಿವಂಗತ ತಂದೆ ಮೆಹಂಗಾ ಸಿಂಗ್ ಅವರು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರು. ಅವರ ಸಹೋದರ ವಿದೇಶದಲ್ಲಿ ವಾಸಿಸುತ್ತಿದ್ದರೆ, ಅವರ ಸಹೋದರಿ ಹಿಮಾಚಲ ಪ್ರದೇಶದ ಪ್ರಮುಖ ಬೋರ್ಡಿಂಗ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: CDS Bipin Rawat ಬಿಪಿನ್ ರಾವತ್ ಅಂತ್ಯ ಸಂಸ್ಕಾರ ಇಂದು; ಉಳಿದ 10 ಸೇನಾ ಸಿಬ್ಬಂದಿ ಗುರುತು ಪತ್ತೆ ಬಳಿಕ ಮೃತದೇಹಗಳ ಹಸ್ತಾಂತರ
Published On - 12:05 pm, Fri, 10 December 21