ಚೆನ್ನೈ: ತಮಿಳುನಾಡಿನ ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಿನಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ 26 ವರ್ಷದ ಶಾಲಾ ಶಿಕ್ಷಕಿ ರಮಣಿ ಅವರನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿದ್ದಾನೆ. ಮದನ್ ಎಂಬ ವ್ಯಕ್ತಿ ವಿದ್ಯಾರ್ಥಿಗಳು ಮತ್ತು ಇತರ ಶಿಕ್ಷಕರ ಎದುರಲ್ಲೇ ರಮಣಿಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಮದನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ರಮಣಿ ಮತ್ತು ಮದನ್ ಪ್ರೇಮಿಗಳಾಗಿದ್ದರು. ಇದಕ್ಕೆ ರಮಣಿ ಅವರ ಕುಟುಂಬ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಇತ್ತೀಚೆಗೆ ಮದನ್‌ನ ಮದುವೆಯ ಪ್ರಸ್ತಾಪವನ್ನು ರಮಣಿ ತಿರಸ್ಕರಿಸಿದ ನಂತರ ಇಬ್ಬರ ನಡುವೆ ಜಗಳ ಹೆಚ್ಚಾಯಿತು. ಇದು ಮಾರಣಾಂತಿಕ ಹಲ್ಲೆಗೆ ಕಾರಣವಾಗಿದ್ದು, ಕೋಪದ ಭರದಲ್ಲಿ ಮದನ್ ರಮಣಿಗೆ ಇರಿದಿದ್ದಾನೆ.
ಇದನ್ನೂ ಓದಿ: ಬಾಬಾ ಸಿದ್ದಿಕಿ ಕೊಲೆಯ ಪ್ರಮುಖ ಆರೋಪಿ ಶಿವಕುಮಾರ್ ಬಂಧನದಿಂದ ಬಯಲಾಯ್ತು ಮತ್ತಷ್ಟು ಭಯಾನಕ ವಿಚಾರ
ತೀವ್ರವಾಗಿ ಗಾಯಗೊಂಡಿರುವ ರಮಣಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಆಕೆಯನ್ನು ಹೊತ್ತೊಯ್ದ ವಿಡಿಯೋ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಶಿಕ್ಷಕಿ ಮೃತಪಟ್ಟಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಮದನ್‌ನನ್ನು ಹಿಡಿದು ತನಿಖೆ ಆರಂಭಿಸಿದ್ದಾರೆ.
ಈ ಸಾವು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ರಾಜ್ಯ ಸರ್ಕಾರವನ್ನು ಖಂಡಿಸಿದ್ದಾರೆ. ಡಿಎಂಕೆ ಆಡಳಿತವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.
ಇದನ್ನೂ ಓದಿ: ಲಂಡನ್ನಲ್ಲಿ ಹರ್ಷಿತಾ ಕೊಲೆ ಪ್ರಕರಣ, ಕತ್ತು ಹಿಸುಕಿ, ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟು ಪತಿ ಪರಾರಿ
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಈ ಹಿಂಸಾಚಾರವನ್ನು ಖಂಡಿಸಿದ್ದಾರೆ. ಮಲ್ಲಿಪಟ್ಟಿನಂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ರಮಣಿ ಮೇಲೆ ನಡೆದ ಹಲ್ಲೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಶಿಕ್ಷಕರ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಕೊಲೆ ಮಾಡಿದವನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ