ಬಿಹಾರದ ಮತದಾರರ ಪಟ್ಟಿಯಿಂದ ತನ್ನ ಹೆಸರು ಕಾಣೆಯಾಗಿದೆ ಎಂದ ತೇಜಸ್ವಿ ಯಾದವ್; ಚುನಾವಣಾ ಆಯೋಗ ಹೇಳಿದ್ದೇನು?

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ದೊಡ್ಡ ಆರೋಪ ಮಾಡಿದ್ದಾರೆ. ಬಿಹಾರದ ಮತದಾರರ ಪಟ್ಟಿಯಿಂದ ತನ್ನ ಹೆಸರು ಕಾಣೆಯಾಗಿದೆ ಎಂದು ತೇಜಸ್ವಿ ಯಾದವ್ ಹೇಳಿಕೊಂಡಿದ್ದಾರೆ. ಆದರೆ ಚುನಾವಣಾ ಆಯೋಗವು ಅವರ ಹೇಳಿಕೆಯನ್ನು ನಿರಾಕರಿಸಿದೆ. ಅವರ ಹೆಸರಿನ ಸೇರ್ಪಡೆಯನ್ನು ಆಯೋಗ ದೃಢಪಡಿಸಿದೆ.

ಬಿಹಾರದ ಮತದಾರರ ಪಟ್ಟಿಯಿಂದ ತನ್ನ ಹೆಸರು ಕಾಣೆಯಾಗಿದೆ ಎಂದ ತೇಜಸ್ವಿ ಯಾದವ್; ಚುನಾವಣಾ ಆಯೋಗ ಹೇಳಿದ್ದೇನು?
Tejashwi Yadav

Updated on: Aug 02, 2025 | 5:33 PM

ಪಾಟ್ನಾ, ಆಗಸ್ಟ್ 2: ಬಿಹಾರದಲ್ಲಿ (Bihar) ಹೊಸದಾಗಿ ಬಿಡುಗಡೆಯಾದ ಮತದಾರರ ಪಟ್ಟಿಯ ಕರಡು ಪ್ರತಿಯಲ್ಲಿ ತನ್ನ ಹೆಸರು ಕಾಣೆಯಾಗಿದೆ ಎಂದು ಹೇಳುವ ಮೂಲಕ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ (Tejashwi Yadav) ರಾಜಕೀಯ ವಿವಾದವನ್ನು ಸೃಷ್ಟಿಸಿದ್ದಾರೆ. ಆದರೆ, ಭಾರತೀಯ ಚುನಾವಣಾ ಆಯೋಗ (Election Commission) ಅವರ ಹೇಳಿಕೆಯನ್ನು ತಳ್ಳಿಹಾಕಿದೆ. ತೇಜಸ್ವಿ ಯಾದವ್ ಅವರ ಹೆಸರನ್ನು ಸರಣಿ ಸಂಖ್ಯೆ 416ರಲ್ಲಿ ಪಟ್ಟಿಮಾಡಲಾಗಿದೆ ಎಂದು ದಾಖಲೆಸಮೇತ ದೃಢಪಡಿಸಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ “ಕರಡು ಮತದಾರರ ಪಟ್ಟಿ”ಯಲ್ಲಿ ತಮ್ಮ ಹೆಸರು ಕಾಣೆಯಾಗಿದೆ ಎಂದು ರಾಷ್ಟ್ರೀಯ ಜನತಾ ದಳ (RJD) ನಾಯಕ ಮತ್ತು ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಇಂದು ಆರೋಪಿಸಿದ್ದಾರೆ. ಪತ್ರಿಕಾ ಗೋಷ್ಠಿಯ ಸಮಯದಲ್ಲಿ ಮಾಜಿ ಉಪಮುಖ್ಯಮಂತ್ರಿ ತಮ್ಮ ಮೊಬೈಲ್ ಫೋನ್ ಅನ್ನು ದೊಡ್ಡ ಪರದೆಗೆ ಸಂಪರ್ಕಿಸಿದರು. ತಮ್ಮ EPIC ಸಂಖ್ಯೆಯನ್ನು ಸರ್ಚ್ ಮಾಡಿದಾಗ ಅದರಲ್ಲಿ ಡಿಸ್​ಪ್ಲೇ ಆಗಲಿಲ್ಲ. “ಯಾವುದೇ ದಾಖಲೆಗಳು ಕಂಡುಬಂದಿಲ್ಲ” ಎಂದು ಸ್ಕ್ರೀನ್ ಮೇಲೆ ಬಂದಿತು.

ಇದನ್ನೂ ಓದಿ: ವಾರಣಾಸಿಯಲ್ಲಿ 2200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ

“ಈಗ ನೋಡಿ! ನಾನು ಮತದಾರರ ಪಟ್ಟಿಯಲ್ಲೇ ಇಲ್ಲ. ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಅರ್ಹತೆಯನ್ನೇ ಕಳೆದುಕೊಂಡಂತಾಗಿದೆ. ಬಹುಶಃ, ಇದರಿಂದ ನನ್ನನ್ನು ಈ ದೇಶದ ನಾಗರಿಕನಾಗಿ ಪರಿಗಣಿಸುವುದನ್ನು ನಿಲ್ಲಿಸಬಹುದು. ನಾನು ಭಾರತದಲ್ಲಿ ವಾಸಿಸುವ ಹಕ್ಕಿನಿಂದಲೂ ವಂಚಿತನಾಗಬಹುದು” ಎಂದು ತೇಜಸ್ವಿ ಯಾದವ್ ಆಕ್ರೋಶ ಹೊರಹಾಕಿದ್ದಾರೆ.


“ಆನ್‌ಲೈನ್​​ನಲ್ಲಿ ಪರಿಶೀಲಿಸುವ ಅವಕಾಶವಿರುವುದರಿಂದ ನನಗೆ ಈ ವಿಷಯ ಗೊತ್ತಾಯಿತು. ಆದರೆ, ಬಿಹಾರದ ಹೊರಗೆ ಹಳ್ಳಿಗಳಲ್ಲಿ ವಾಸಿಸುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು ಎಂದು ನೀವು ನಿರೀಕ್ಷಿಸುತ್ತೀರಾ? ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುವುದಿಲ್ಲವೇ? ಐಎಎಸ್ ಅಧಿಕಾರಿ ದಂಪತಿಗಳು ಸಹ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಕಳೆದುಕೊಂಡಿರುವುದನ್ನು ನಾನು ಕೇಳಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ 3ನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ; ಟ್ರಂಪ್ ‘ಸತ್ತ ಆರ್ಥಿಕತೆ’ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ಘೋಷಣೆ

ಆದರೆ, ಭಾರತೀಯ ಚುನಾವಣಾ ಆಯೋಗ (ECI) ಮತದಾರರ ಕರಡು ಪಟ್ಟಿಯಿಂದ ತೇಜಸ್ವಿ ಯಾದವ್ ಅವರ ಹೆಸರು ಕಾಣೆಯಾಗಿದೆ ಎಂಬ ಅವರ ಹೇಳಿಕೆಯನ್ನು ನಿರಾಕರಿಸಿದೆ. ಅವರ ಹೆಸರನ್ನು ಸರಣಿ ಸಂಖ್ಯೆ 416ರಲ್ಲಿ ಸ್ಪಷ್ಟವಾಗಿ ಪಟ್ಟಿ ಮಾಡಲಾಗಿದೆ ಎಂದು ಹೇಳಿದೆ. ಎಲ್ಲಾ ಪರಿಷ್ಕರಣೆಗಳನ್ನು ಸರಿಯಾದ ಪ್ರಕ್ರಿಯೆಯ ಪ್ರಕಾರ ನಡೆಸಲಾಗಿದೆ ಮತ್ತು ರಾಜಕೀಯ ಪಕ್ಷಗಳಿಗೆ ಪ್ರಮಾಣಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ಮತದಾರರ ಹೆಸರು ಡಿಲೀಟ್ ಮಾಡುವ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:30 pm, Sat, 2 August 25