ತೆಲಂಗಾಣದಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ; ಅಮಿತ್ ಶಾ ಪ್ರವಾಸದ ಮಾಹಿತಿ ನೀಡಿದ ತರುಣ್ ಚುಗ್

| Updated By: ganapathi bhat

Updated on: Sep 11, 2021 | 10:52 PM

Telangana BJP: ಬಿಜೆಪಿ ತೆಲಂಗಾಣ ಉಸ್ತುವಾರಿ ತರುಣ್ ಚುಗ್ ಕೇಂದ್ರ ಸಚಿವ ಅಮಿತ್ ಶಾ ತೆಲಂಗಾಣ ಭೇಟಿಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಅಮಿತ್ ಶಾ ನಿರ್ಮಲ್ ಟೂರ್ ಶನಿವಾರ ನಡೆಯಲಿದೆ.

ತೆಲಂಗಾಣದಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ; ಅಮಿತ್ ಶಾ ಪ್ರವಾಸದ ಮಾಹಿತಿ ನೀಡಿದ ತರುಣ್ ಚುಗ್
ತರುಣ್ ಚುಗ್
Follow us on

Amit Shah Telangana Tour: ಭಾರತೀಯ ಜನತಾ ಪಾರ್ಟಿ ತೆಲಂಗಾಣ ರಾಜ್ಯ ಉಸ್ತುವಾರಿ ತರುಣ್ ಚುಗ್ ತೆಲಂಗಾಣ ರಾಜ್ಯ ರಾಜಕೀಯದ ಬಗ್ಗೆ ಗಂಭೀರ ಮುನ್ನೋಟಗಳನ್ನು ಪ್ರಸ್ತಾಪಿಸಿದ್ದಾರೆ. ತೆಲಂಗಾಣದಲ್ಲಿ ಬದಲಾವಣೆ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ. ಈ ಸಂಬಂಧ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕೂಡ ಹೇಳಿಕೆ ನೀಡಿದ್ದಾರೆ. ಬಿಜೆಪಿ ತೆಲಂಗಾಣ ಉಸ್ತುವಾರಿ ತರುಣ್ ಚುಗ್ ಕೇಂದ್ರ ಸಚಿವ ಅಮಿತ್ ಶಾ ತೆಲಂಗಾಣ ಭೇಟಿಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಅಮಿತ್ ಶಾ ನಿರ್ಮಲ್ ಟೂರ್ ಶನಿವಾರ ನಡೆಯಲಿದೆ.

ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ತೆಲಂಗಾಣ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಬಗ್ಗೆ ನಡೆದ ತಯಾರಿ ಸಭೆಯಲ್ಲಿ ತರುಣ್ ಚುಗ್ ಮಾತನಾಡಿದ್ದಾರೆ. ತೆಲಂಗಾಣದ ನಿರ್ಮಲ್ ಎಂಬಲ್ಲಿಗೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಪ್ರಸ್ತಾಪಿಸಿದ ತರುಣ್ ಚುಗ್, ತೆಲಂಗಾಣದ ಇತಿಹಾಸದ ಕುರಿತಾಗಿಯೂ ಹೆಮ್ಮೆಯ ಮಾತುಗಳನ್ನು ಹೇಳಿದ್ದಾರೆ. ತೆಲಂಗಾಣ ಹಲವು ಸ್ವಾತಂತ್ರ್ಯ ಹೋರಾಟಗಾರರ ಜನ್ಮಸ್ಥಳ. ಸಪ್ಟೆಂಬರ್ 17, 1948 ರಂದು ಸರ್ದಾರ್ ವಲ್ಲಭಾಭಾಯಿ ಪಟೇಲರು ತೆಲಂಗಾಣಕ್ಕೆ ಭೇಟಿ ಕೊಟ್ಟ ದಿನ ಎಂದು ಸ್ಮರಿಸಿಕೊಂಡಿದ್ದಾರೆ.

ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ನೇತೃತ್ವದ ‘ಪ್ರಜಾ ಸಂಗ್ರಾಮ ಯಾತ್ರೆ’ ಯಶಸ್ಸಿನ ಜತೆಗೆ, ನಿರ್ಮಲ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 17ರಂದು ಬಿಜೆಪಿ ಐತಿಹಾಸಿಕ ಸಮಾವೇಶ ನಡೆಸಲಿದೆ. ಸೆಪ್ಟೆಂಬರ್ ಹದಿನೇಳನ್ನು ತೆಲಂಗಾಣ ವಿಮೋಚನಾ ದಿನವೆಂದು ಘೋಷಿಸಲು ಸರ್ಕಾರಕ್ಕೆ ಒತ್ತಾಯಿಸುವ ಸಮಾವೇಶಕ್ಕೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ತೆಲಂಗಾಣ ರಾಜ್ಯ ಬಿಜೆಪಿ ಉಸ್ತುವಾರಿ ತರುಣ್ ಚುಗ್ ತಿಳಿಸಿದ್ದಾರೆ.

ಸಮಾವೇಶದ ಪೂರ್ವತಯಾರಿ ಬಗ್ಗೆ ಬಿಜೆಪಿ ನಾಯಕರ ಸಭೆ ನಡೆಸಿದ ತರುಣ್ ಚುಗ್, ಸಮಾವೇಶ ಸ್ಥಳದ ಸಿದ್ಧತೆಯನ್ನೂ ಪರಿಶೀಲಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, ಹಾಗೂ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಜತೆಗೂ ಚುಗ್ ಚರ್ಚಿಸಿದ್ದಾರೆ. ತೆಲಂಗಾಣದ ಕುಟುಂಬ ರಾಜಕಾರಣ ತೊಲಗಿಸಲು ಅಮಿತ್ ಶಾ ಶಂಖ ನಾದ ಮೊಳಗಿಸಲಿದ್ದಾರೆ ಎಂದು ಕೆಸಿಆರ್ ಸರ್ಕಾರದ ವಿರುದ್ಧ ತರುಣ್ ಚುಗ್ ಗುಡುಗಿದ್ದಾರೆ.

ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ನಿರ್ಮಲ್ ಸಭೆ ನಡೆಯಲಿದೆ. ಪ್ರಜಾಪ್ರಭುತ್ವ ವಿರೋಧಿ ಆಡಳಿತವನ್ನು ಕೊನೆಗೊಳಿಸಲು ಸತತವಾಗಿ ಕೆಲಸ ಮಾಡಲಿದೆ. ಅದಕ್ಕಾಗಿ ಅಮಿತ್ ಶಾ ಸಭೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ತೆಲಂಗಾಣ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ತಿಳಿಸಿದ್ದಾರೆ. ತೆಲಂಗಾಣ ವಿಮೋಚನಾ ದಿನವು ಸಪ್ಟೆಂಬರ್ 17 ರಂದು ನಡೆಯಲಿದೆ. ಹಾಗೂ ಈ ದಿನವನ್ನು ಅಧಿಕೃತವಾಗಿ ಆಚರಿಸುವಂತೆ ಸರ್ಕಾರವನ್ನು ಈ ವೇಳೆ ಒತ್ತಾಯಿಸಲಿದ್ದಾರೆ. ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಕೂಡ ಅಮಿತ್ ಶಾ ಭೇಟಿ ವೇಳೆ ಜೊತೆಯಾಗುವ ನಿರೀಕ್ಷೆ ಇದೆ.

ಹೈದರಾಬಾದ್​ನ ಜನರು ಆಗಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಾಭಾಯಿ ಪಟೇಲರ ನಾಯಕತ್ವದಲ್ಲಿ ನಿಜಾಮರ ಆಳ್ವಿಕೆಯಿಂದ ಪ್ರಜಾಪ್ರಭುತ್ವ ದೇಶಕ್ಕೆ ಸೇರ್ಪಡೆಗೊಂಡರು. ಆ ಮೂಲಕ, ಸ್ವಾತಂತ್ರ್ಯವನ್ನು ನಿಜವಾಗಿ ಪಡೆದುಕೊಂಡರು. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪ್ರತ್ಯೇಕ ರಾಜ್ಯ ಬೇಡಿಕೆ ವೇಳೆ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಆದರೆ, ಈಗ ಅದನ್ನು ಮರೆತಿದ್ದಾರೆ ಎಂದು ತೆಲಂಗಾಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ. ಪ್ರೇಮಂಧರ್ ರೆಡ್ಡಿ ಮಂಗಳವಾರ ತಿಳಿಸಿದ್ದರು.

ಇದನ್ನೂ ಓದಿ: Gujarat CM Resigns: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ

ಇದನ್ನೂ ಓದಿ: Gujarat Politics: ಕರ್ನಾಟಕ ಮಾದರಿಯಲ್ಲಿ ಗುಜರಾತ್​ನಲ್ಲೂ ಜಾತಿ ಲೆಕ್ಕಾಚಾರದ ಮೊರೆ ಹೋದ ಬಿಜೆಪಿ?

Published On - 8:36 pm, Sat, 11 September 21