ಅಪ್ಪನ ಪಕ್ಷದಿಂದಲೇ ಮಗಳ ಉಚ್ಛಾಟನೆ; ಬಿಆರ್​​ಎಸ್​​ನಿಂದ ಎಂಎಲ್‌ಸಿ ಕೆ. ಕವಿತಾ ಹೊರಕ್ಕೆ

'ಪಕ್ಷ ವಿರೋಧಿ ಚಟುವಟಿಕೆ'ಯ ಆರೋಪದ ಮೇಲೆ ಕೆ. ಕವಿತಾ ಅವರನ್ನು ಅವರ ತಂದೆ ಮತ್ತು ತೆಲಂಗಾಣದ ಮಾಜಿ ಸಿಎಂ ಕೆಸಿಆರ್ ತಮ್ಮ ಪಕ್ಷವಾದ ಬಿಆರ್‌ಎಸ್‌ನಿಂದ ಹೊರಹಾಕಿದ್ದಾರೆ. ಪಕ್ಷದ ನಾಯಕರ ವಿರುದ್ಧ ಮಾತನಾಡಿದ ಕೆಲವು ದಿನಗಳ ನಂತರ ಕೆಸಿಆರ್ ಅವರ ಪುತ್ರಿ ಕೆ. ಕವಿತಾ ಅವರನ್ನು ಬಿಆರ್‌ಎಸ್‌ನಿಂದ ಉಚ್ಛಾಟನೆ ಮಾಡಲಾಗಿದೆ.

ಅಪ್ಪನ ಪಕ್ಷದಿಂದಲೇ ಮಗಳ ಉಚ್ಛಾಟನೆ; ಬಿಆರ್​​ಎಸ್​​ನಿಂದ ಎಂಎಲ್‌ಸಿ ಕೆ. ಕವಿತಾ ಹೊರಕ್ಕೆ
K Kavitha

Updated on: Sep 02, 2025 | 3:23 PM

ಹೈದರಾಬಾದ್, ಸೆಪ್ಟೆಂಬರ್ 2: ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ (K Kavitha) ಅವರನ್ನು ಇಂದು “ಪಕ್ಷ ವಿರೋಧಿ ಚಟುವಟಿಕೆ” ಆರೋಪದ ಮೇಲೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯಿಂದ ಹೊರಹಾಕಲಾಗಿದೆ. ತನ್ನ ಸೋದರಸಂಬಂಧಿಗಳು ಮತ್ತು ಬಿಆರ್‌ಎಸ್ ನಾಯಕರಾದ ಟಿ. ಹರೀಶ್ ರಾವ್ ಮತ್ತು ಜೆ. ಸಂತೋಷ್ ಕುಮಾರ್ ಅವರು ತಮ್ಮ ತಂದೆ ಕೆಸಿಆರ್ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ಮೌನ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಕವಿತಾ ಆರೋಪಿಸಿದ್ದರು. ಅದರ ಬೆನ್ನಲ್ಲೇ ಬಿಆರ್‌ಎಸ್ ಎಂಎಲ್‌ಸಿ ಕವಿತಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಈ ವರ್ಷದ ಮೇ ತಿಂಗಳಲ್ಲಿ ಅಮೆರಿಕಕ್ಕೆ ಹೋದಾಗ ಕವಿತಾ ತನ್ನ ತಂದೆಗೆ ಬರೆದ ಪತ್ರ ಸೋರಿಕೆಯಾಗಿತ್ತು. ಕೆಸಿಆರ್‌ಗೆ ಬರೆದ ಪತ್ರದಲ್ಲಿ ಪಕ್ಷದೊಳಗಿನ “ಆಂತರಿಕ ಸಮಸ್ಯೆಗಳ” ಬಗ್ಗೆ ಸುಳಿವು ನೀಡಿದ ನಂತರ ಕವಿತಾ ಮತ್ತು ಬಿಆರ್‌ಎಸ್ ನಡುವಿನ ಬಿರುಕು ಬೆಳಕಿಗೆ ಬಂದಿತ್ತು. ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಈ ಪತ್ರ ಸೋರಿಕೆಯಾಗಿತ್ತು. ಅಲ್ಲಿಂದ ಹಿಂದಿರುಗಿದ ನಂತರ ಅವರು ಪಕ್ಷದಲ್ಲಿ ಕೆಲವು ಪಿತೂರಿಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ಕೆಸಿಆರ್ ದೇವರಂತೆ, ಆದರೆ ಕೆಲವು ದೆವ್ವಗಳು ಅವರನ್ನು ಸುತ್ತುವರೆದಿವೆ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್-ಆರ್​​ಜೆಡಿಯಿಂದ ದೇಶದ ಎಲ್ಲ ತಾಯಂದಿರಿಗೆ ಅವಮಾನ; ಅಮ್ಮನನ್ನು ನೆನೆದು ಭಾವುಕರಾದ ಪ್ರಧಾನಿ ಮೋದಿ

ಕವಿತಾ ಪಕ್ಷದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಬಿಆರ್‌ಎಸ್ ವಕ್ತಾರ ಕ್ರಿಶಾಂಕ್ ಮನ್ನೆ ಹೇಳಿದ್ದಾರೆ. “ನೀವು ನಿಮ್ಮ ಸ್ವಂತ ಪಕ್ಷವನ್ನು ಸಾರ್ವಜನಿಕವಾಗಿ ಟೀಕಿಸಲು ಸಾಧ್ಯವಿಲ್ಲ. ಅವರು ನಮ್ಮ ಪಕ್ಷದ ನಾಯಕರ ಮೇಲೆ ಆಧಾರರಹಿತ ಆರೋಪ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ಕೆ. ಕವಿತಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪಕ್ಷದ ಎಂಎಲ್‌ಸಿ ಕೆ. ಕವಿತಾ ಅವರ ಇತ್ತೀಚಿನ ನಡವಳಿಕೆ ಮತ್ತು ನಡೆಯುತ್ತಿರುವ ಪಕ್ಷ ವಿರೋಧಿ ಚಟುವಟಿಕೆಗಳು ಪಕ್ಷಕ್ಕೆ ಹಾನಿ ಮಾಡುತ್ತಿವೆ. ಆದ್ದರಿಂದ ಪಕ್ಷದ ನಾಯಕತ್ವವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ” ಎಂದು ಬಿಆರ್‌ಎಸ್ ಪೋಸ್ಟ್ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ