2 ಮತದಾರರ ಗುರುತಿನ ಚೀಟಿ ಹೊಂದಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಚುನಾವಣಾ ಆಯೋಗ ನೋಟಿಸ್
ಕಾಂಗ್ರೆಸ್ ನಾಯಕ ಪವನ್ ಖೇರಾ ವಿರುದ್ಧ 2 ವೋಟಿಂಗ್ ಐಡಿ ಹೊಂದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪವನ್ ಖೇರಾ ಅವರಿಗೆ ನೋಟಿಸ್ ಕಳುಹಿಸಿದೆ. ದೆಹಲಿಯ ಎರಡು ಪ್ರತ್ಯೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ಮತದಾರರಾಗಿ ನೋಂದಾಯಿಸಲಾಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಆರೋಪಿಸಿದ ಕೆಲವೇ ಗಂಟೆಗಳ ನಂತರ ಈ ನೋಟಿಸ್ ನೀಡಲಾಗಿದೆ.

ನವದೆಹಲಿ, ಸೆಪ್ಟೆಂಬರ್ 2: ದೆಹಲಿಯ ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡ ಆರೋಪದ ಮೇಲೆ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಅವರಿಗೆ ಚುನಾವಣಾ ಆಯೋಗ (Election Commission) ಇಂದು (ಮಂಗಳವಾರ) ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ಅನ್ನು ನವದೆಹಲಿಯ ಜಿಲ್ಲಾ ಚುನಾವಣಾ ಅಧಿಕಾರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಅಧಿಕೃತ ಆದೇಶದ ಪ್ರತಿಯೊಂದಿಗೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 8ರಂದು ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ನಾಯಕ ಪವನ್ ಅವರಿಗೆ ಸೂಚಿಸಲಾಗಿದೆ.
ಈ ನೋಟಿಸ್ ಪ್ರಕಾರ, ಪವನ್ ಖೇರಾ ಅವರ ಹೆಸರನ್ನು ನವದೆಹಲಿ ಮತ್ತು ಜಂಗ್‌ಪುರ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಬಹು ಮತದಾರರ ನೋಂದಣಿಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧ.
Notice to Shri Pawan Khera for getting himself registered in Electoral Roll of more than one constituency. pic.twitter.com/o6AZcXc138
— District Election Office, New Delhi District (@DEO_NDD) September 2, 2025
ಚುನಾವಣಾ ಕಾನೂನುಗಳನ್ನು ಉಲ್ಲಂಘಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಪವನ್ ಖೇರಾ ತಮ್ಮ ಹಳೆಯ ನೋಂದಣಿಗಳಲ್ಲಿ ಒಂದನ್ನು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಿದ್ದರೂ ಅದು ಹೇಗೆ ಇನ್ನೂ ಸಕ್ರಿಯವಾಗಿದೆ ಎಂಬುದನ್ನು ವಿವರಿಸುವಂತೆ ಚುನಾವಣಾ ಆಯೋಗವನ್ನು ಅವರು ಕೇಳಿದ ಕೆಲವೇ ಗಂಟೆಗಳಲ್ಲಿ ಚುನಾವಣಾ ಆಯೋಗವು ಅವರಿಗೆ ನೋಟಿಸ್ ನೀಡಿದೆ.
ಇದನ್ನೂ ಓದಿ: ಮತದಾನದ ಪ್ರಕ್ರಿಯೆ ಬಲಪಡಿಸಲು 6 ತಿಂಗಳಲ್ಲಿ 28 ಉಪಕ್ರಮಗಳನ್ನು ಪರಿಚಯಿಸಿದ ಚುನಾವಣಾ ಆಯೋಗ
ಕೆಲವೇ ಗಂಟೆಗಳ ಹಿಂದೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ದೆಹಲಿಯ 2 ಪ್ರತ್ಯೇಕ ವಿಧಾನಸಭಾ ಕ್ಷೇತ್ರಗಳಾದ ಜಂಗ್‌ಪುರ (ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಅಡಿಯಲ್ಲಿ) ಮತ್ತು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ಮತದಾರರಾಗಿ ನೋಂದಾಯಿಸಲಾಗಿದೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ನೋಟಿಸ್ ಜಾರಿಯಾಗಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




