ತೆಲಂಗಾಣದಲ್ಲಿ ತಂಬಾಕು, ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್​ ಮಸಾಲ ನಿಷೇಧ

|

Updated on: May 27, 2024 | 10:20 AM

ತೆಲಂಗಾಣದಲ್ಲಿ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್​ ಮಸಾಲ ನಿಷೇಧಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ. ಮೇ 24, 2024 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ನಿಷೇಧವನ್ನು ವಿಧಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ತೆಲಂಗಾಣದಲ್ಲಿ ತಂಬಾಕು, ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್​ ಮಸಾಲ ನಿಷೇಧ
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ
Follow us on

ತೆಲಂಗಾಣ ಸರ್ಕಾರ(Telangana Government)ವು ರಾಜ್ಯದಲ್ಲಿ ತಂಬಾಕು(Tobacco)  ಮತ್ತು ನಿಕೋಟಿನ್( Nicotine) ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಮೇ 24, 2024 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ನಿಷೇಧವನ್ನು ವಿಧಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಆಹಾರ ಸುರಕ್ಷತಾ ಆಯುಕ್ತರ ಆದೇಶದ ಪ್ರಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಅಡಿಯಲ್ಲಿ ನಿಷೇಧವನ್ನು ಜಾರಿಗೊಳಿಸಲಾಗುವುದು.

ಗುಟ್ಕಾ ಹಾಗೂ ಪಾನ್​ ಮಸಾಲ ಸೇವನೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಅಪಾಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಉತ್ಪನ್ನಗಳು ಸಾಮಾನ್ಯವಾಗಿ ಕ್ಯಾನ್ಸರ್​, ಬಾಯಿಯ ಸಬ್​ಮ್ಯೂಕಸ್​ ಫೈಬ್ರೋಸಿಸ್ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ.

2014ರಲ್ಲಿ ತೆಲಂಗಾಣ ಸ್ಥಾಪನೆಯಾದ ನಂತರ ರಾಜ್ಯದಲ್ಲಿ ಗುಟ್ಖಾ ನಿಷೇಧಿಸಲಾಗಿತ್ತು. ನವೆಂಬರ್ 2021 ರಲ್ಲಿ, ತೆಲಂಗಾಣ ಹೈಕೋರ್ಟ್ ನಿಷೇಧವನ್ನು ಎತ್ತಿ ಹಿಡಿದಿತ್ತು. ನಿಷೇಧವನ್ನು ಗುಟ್ಖಾ ತಯಾರಕರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು, ಇದು ಮಾರ್ಚ್ 2022 ರಲ್ಲಿ ನಿಷೇಧವನ್ನು ವಿಧಿಸುವ ಅಧಿಸೂಚನೆಯನ್ನು ತಡೆಹಿಡಿಯಿತು.

ಮತ್ತಷ್ಟು ಓದಿ: ಶಾಲೆ, ಕಾಲೇಜುಗಳ ಬಳಿ ತಂಬಾಕು ಉತ್ಪನ್ನ ಮಾರಾಟ: ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಪ್ರಕರಣ ಪತ್ತೆ

ಸೆಪ್ಟೆಂಬರ್ 2022 ರಲ್ಲಿ, ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆ ಜಾರಿಯಲ್ಲಿರುವವರೆಗೆ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಂತೆ ತೆಲಂಗಾಣ ಹೈಕೋರ್ಟ್ ಅಧಿಕಾರಿಗಳನ್ನು ನಿರ್ಬಂಧಿಸಿತು.

2023ರ ಜನವರಿಯಲ್ಲಿ ಗುಟ್ಖಾ ನಿಷೇಧಕ್ಕೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಇದಕ್ಕೂ ನಿಷೇಧ ಹೇರಿದೆ. ಹೀಗಿರುವಾಗ ಹೊಸ ನಿಷೇಧ ಯಾವ ರೀತಿ ಜಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ