ತೆಲಂಗಾಣ: ಆಸ್ಪತ್ರೆಯವರು ಆ್ಯಂಬುಲೆನ್ಸ್ (Ambulance) ಸೌಲಭ್ಯವನ್ನು ನೀಡದ ಕಾರಣದಿಂದ ತನ್ನ 3 ವರ್ಷದ ಮಗಳ ಶವವನ್ನು ತಂದೆ ಬೈಕ್‌ನಲ್ಲಿ ಹೊತ್ತುಕೊಂಡು ಮನೆಗೆ ತೆರಳಿರುವ ಅಮಾನವೀಯ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟಿದ್ದ ಮಗಳ ಶವವನ್ನು ಸಾಗಿಸಲು ಆಕೆಯ ತಂದೆ ಆಸ್ಪತ್ರೆಯವರ ಬಳಿ ಆಂಬ್ಯುಲೆನ್ಸ್ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ, ಅದಕ್ಕೆ ಆಸ್ಪತ್ರೆ ನಿರಾಕರಿಸಿತು. ಹೀಗಾಗಿ, ಅನಿವಾರ್ಯವಾಗಿ ಆತ ತನ್ನ ಮಗಳ ಹೆಣವನ್ನು ಬೈಕ್ನಲ್ಲಿಟ್ಟುಕೊಂಡು ತೆಗೆದುಕೊಂಡು ಹೋಗಿದ್ದಾರೆ.
ತೆಲಂಗಾಣದ ಖಮ್ಮಂನ ವ್ಯಕ್ತಿ ತಮ್ಮ ಮಗಳ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯಿಂದ ತಮ್ಮ ಕುಟುಂಬದ ಹುಟ್ಟೂರು ಎಂಕೂರ್ ಮಂಡಲಕ್ಕೆ ಬೈಕ್‌ನಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್ ಆದ ನಂತರ ಇದರ ಹಿಂದಿನ ಕಥೆ ಬಯಲಾಗಿದೆ. ತೆಲಂಗಾಣದ ಬುಡಕಟ್ಟು ಸಮುದಾಯಕ್ಕೆ ಸೇರಿದ ಕುಟುಂಬದವರ ಮಗಳು ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿದ್ದಳು.
ಇದನ್ನೂ ಓದಿ: ಶವದ ವಾಹನ ಬರದಿದ್ದಕ್ಕೆ 7 ವರ್ಷದ ಮಗಳ ಶವವನ್ನು ತನ್ನ ಹೆಗಲ ಮೇಲೆ ಹೊತ್ತು 10 ಕಿಮೀ ನಡೆದ ತಂದೆ
ಆಕೆಯ ಮೃತದೇಹವನ್ನು ಆಕೆಯ ತಂದೆ ತಮ್ಮ ಹುಟ್ಟೂರಾದ ತೆಲಂಗಾಣದ ಎಂಕೂರ್ ಮಂಡಲ್ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಅಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದರು. ವೆಟ್ಟಿ ಮಲ್ಲಯ್ಯ ಎಂಬುವವರ ಮಗಳು 3 ವರ್ಷದ ಸುಕ್ಕಿ ಎಂಬಾಕೆ ಮೃತಪಟ್ಟ ಬಾಲಕಿ. ಫಿಟ್ಸ್‌ನಿಂದ ಬಳಲುತ್ತಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಆಕೆ ಸಾವನ್ನಪ್ಪಿದಳು.
ಆ ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರಿಂದ ಆಕೆಯ ಅಂತಿಮ ಸಂಸ್ಕಾರಕ್ಕಾಗಿ ಆಕೆಯ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲು ಆ್ಯಂಬುಲೆನ್ಸ್ಗೆ ಮನವಿ ಮಾಡಿದೆವು. ಖಾಸಗಿ ಆ್ಯಂಬುಲೆನ್ಸ್ಗೆ ಸಾಕಾಗುವಷ್ಟು ಹಣ ನಮ್ಮ ಬಳಿ ಇರಲಿಲ್ಲ. ನಮಗೆ ಆ್ಯಂಬುಲೆನ್ಸ್ ನೀಡಲು ಸರ್ಕಾರಿ ಆಸ್ಪತ್ರೆ ನಿರಾಕರಿಸಿತು. ಹೀಗಾಗಿ, ನಾನು ಆಕೆಯ ಮೃತದೇಹವನ್ನು ನಾನು ಮತ್ತು ನನ್ನ ಹೆಂಡತಿ ಬೈಕ್‌ನಲ್ಲಿ ಇಟ್ಟುಕೊಂಡು 60 ಕಿ.ಮೀ ದೂರದಲ್ಲಿರುವ ಮನೆಗೆ ತೆರಳಿದೆವು ಎಂದು ಮೃತ ಬಾಲಕಿಯ ತಂದೆ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಬಳಿ ಅವರು ಆ್ಯಂಬುಲೆನ್ಸ್ಗಾಗಿ ಯಾವುದೇ ಬೇಡಿಕೆಯನ್ನೂ ಇಟ್ಟಿರಲಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ದಾರೆ.