ವಾಟ್ಸ್ಆ್ಯಪ್ ತನ್ನ ಗೌಪ್ಯತಾ ನೀತಿಯನ್ನು ಬದಲಾಯಿಸುತ್ತಿರುವ ಬೆನ್ನಲ್ಲೇ ಟೆಲಿಗ್ರಾಮ್ ಬಳಕೆದಾರರ ಸಂಖ್ಯೆ 50 ಕೋಟಿಯ ಗಡಿ ದಾಟಿದೆ. ಕಳೆದ ಕೆಲ ದಿನಗಳಲ್ಲಿ 25 ಕೋಟಿ ಹೊಸ ಗ್ರಾಹಕರನ್ನು ಸೆಳೆದಿರುವ ಟೆಲಿಗ್ರಾಮ್ ಜನವರಿ ಮೊದಲ ವಾರದಲ್ಲಿ 50 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿರುವುದಾಗಿ ಹೇಳಿಕೆ ನೀಡಿದೆ.
ಭಾರತದಲ್ಲಿ ಎಷ್ಟು ಹೊಸ ಬಳಕೆದಾರರು ಲಭಿಸಿದ್ದಾರೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿಲ್ಲವಾದರೂ, ಏಷ್ಯಾದಲ್ಲಿ ಶೇ 38, ಯುರೋಪಿನಲ್ಲಿ ಶೇ 27, ಲ್ಯಾಟಿನ್ ಅಮೆರಿಕಾದಲ್ಲಿ ಶೇ 21, ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ದೇಶಗಳಲ್ಲಿ ಶೇ 8ರಷ್ಟು ನೂತನ ಬಳಕೆದಾರರು ಟೆಲಿಗ್ರಾಮ್ನತ್ತ ಮುಖಮಾಡಿದ್ದಾರೆ ಎಂದು ವರದಿಯಾಗಿದೆ.
ಕಳೆದ 72 ಗಂಟೆಯಲ್ಲಿ ಹೊಸದಾಗಿ 25 ಕೋಟಿ ಗ್ರಾಹಕರು ಟೆಲಿಗ್ರಾಮ್ ಬಳಕೆ ಆರಂಭಿಸಿದ್ದಾರೆ. ಕೆಲ ದತ್ತಾಂಶಗಳ ಪ್ರಕಾರ ಜನವರಿ 6ರಿಂದ 10ರ ನಡುವೆ ಭಾರತದಲ್ಲಿ 15 ಲಕ್ಷ ಜನ ಟೆಲಿಗ್ರಾಮ್ ಡೌನ್ಲೋಡ್ ಮಾಡಿರುವುದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೆಲಿಗ್ರಾಮ್ ಸಿಇಒ ಮತ್ತು ಸಂಸ್ಥಾಪಕ ಪವೇಲ್ ದುರೋವ್, ಜಾಗತಿಕ ಮಟ್ಟದಲ್ಲಿ ಟೆಲಿಗ್ರಾಮ್ ಬಳಕೆದಾರರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಉಚಿತ ಸೌಲಭ್ಯಕ್ಕಾಗಿ ಜನರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಗೌಪ್ಯತೆಯನ್ನು ಉಳಿಸಿಕೊಳ್ಳುವುದು ಬಳಕೆದಾರರ ಹಕ್ಕು. ಟೆಲಿಗ್ರಾಮ್ ಅದನ್ನು ಗೌರವಿಸಲಿದೆ ಮತ್ತು ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಜಾಹೀರಾತು ಅಥವಾ ಇನ್ಯಾವುದೇ ರೀತಿಯ ವಾಣಿಜ್ಯ ಉದ್ದೇಶಗಳಿಗಾಗಲೀ, ಲಾಭಕ್ಕಾಗಲೀ ನಾವು ನಮ್ಮ ಬಳಕೆದಾರರ ಮಾಹಿತಿಯನ್ನು ಹರಾಜಿಗಿಡುವುದಿಲ್ಲ. ಗ್ರಾಹಕರ ಸುರಕ್ಷತೆಯೇ ನಮ್ಮ ಆದ್ಯತೆ ಎನ್ನುವುದು ಸ್ಪಷ್ಟ. 2013ರ ಆಗಸ್ಟ್ನಲ್ಲಿ ನಮ್ಮ ಸೇವೆ ಆರಂಭವಾಗಿದ್ದು, ಅಂದಿನಿಂದ ಇಂದಿನ ತನಕ ಒಂದೇ ಒಂದು ಬೈಟ್ ಡೇಟಾ ಕೂಡಾ ಸೋರಿಕೆಯಾಗದಂತೆ ಜಾಗ್ರತೆ ವಹಿಸಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.
ವಿಶ್ವದಲ್ಲಿ ಭಾರತವು ಅತಿ ಹೆಚ್ಚು ಮೊಬೈಲ್ ಡೇಟಾ ಬಳಸುವ ದೇಶವಾಗಿದ್ದು, 2019ರ ಅಧ್ಯಯನದ ಪ್ರಕಾರ ಭಾರತೀಯರು ತಿಂಗಳಿಗೆ ಸರಾಸರಿ 12ಜಿಬಿ ಡೇಟಾ ಬಳಸುತ್ತಿದ್ದಾರೆ. ಈ ಸರಾಸರಿ ಪ್ರಮಾಣವು 2025ರ ವೇಳೆಗೆ 25ಜಿಬಿ ಡೇಟಾಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ತಿಳಿಸಿವೆ.
ಭಾರತದಲ್ಲಿ ಕುಸಿದ ವಾಟ್ಸ್ಆ್ಯಪ್: ಶೇ.9,483 ರಷ್ಟು ಹೆಚ್ಚಿದ ಸಿಗ್ನಲ್ ಆ್ಯಪ್ ಬಳಕೆ
Published On - 5:47 pm, Wed, 13 January 21