ವಿದ್ಯಾರ್ಥಿನಿ ಆತ್ಮಹತ್ಯೆ: ತಮಿಳುನಾಡಿನ ಕಲ್ಲಾಕುರಿಚಿ ಉದ್ವಿಗ್ನ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 17, 2022 | 3:37 PM

ಶಿಕ್ಷಕರ ಮೇಲೆ ಕಿರುಕುಳದ ಆರೋಪ ಮಾಡಿದ್ದ ವಿದ್ಯಾರ್ಥಿನಿ ಜುಲೈ 12ರಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿದ್ಯಾರ್ಥಿನಿ ಆತ್ಮಹತ್ಯೆ: ತಮಿಳುನಾಡಿನ ಕಲ್ಲಾಕುರಿಚಿ ಉದ್ವಿಗ್ನ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ತಮಿಳುನಾಡಿನ ಕಲ್ಲಾಕುರಿಚಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಖಂಡಿಸಿ ಜನರು ಪ್ರತಿಭಟನೆ ನಡೆಸಿದರು.
Follow us on

ಚೆನ್ನೈ: ತಮಿಳುನಾಡಿನ ಕಲ್ಲಾಕುರಿಚಿ ನಗರದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಶಾಲಾ ಬಸ್​ಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಮೇಲೆ ಕಿರುಕುಳದ ಆರೋಪ ಮಾಡಿದ್ದ ವಿದ್ಯಾರ್ಥಿನಿ ಜುಲೈ 13ರಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. #JusticeForSrimathi ಮತ್ತು #Nothingpersonal ಹ್ಯಾಷ್​ಟ್ಯಾಗ್​ಗಳು ವೈರಲ್ ಆಗಿವೆ. ನೂರಾರು ಜನರು ಪ್ರತಿಭಟನೆಯ ಚಿತ್ರ ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆತ್ಮಹತ್ಯೆ ಖಂಡಿಸಿ ಪೋಷಕರು, ಸಂಬಂಧಿಕರು ಮತ್ತು ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿತು. ಕಲ್ಲಾಕುರಿಚಿ-ಸೇಲಂ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಶಾಲೆ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. 4ನೇ ದಿನವಾದ ಇಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆ ಮಾಡಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಕಲ್ಲು ತೂರಾಟ ಹಾಗೂ ಲಾಠಿ ಪ್ರಹಾರ ನಡೆಸಿ ಚದುರಿಸಲು ಯತ್ನಿಸಿದರು. ಇದೇ ವೇಳೆ ವಿದ್ಯಾರ್ಥಿನಿ ಓದುತ್ತಿದ್ದ ಶಾಲೆಗೆ ನುಗ್ಗಿದ ಪ್ರತಿಭಟನಾಕಾರರು ಬಸ್ ಸೇರಿದಂತೆ ಅಲ್ಲಿದ್ದ ವಾಹನಗಳನ್ನು ಜಖಂಗೊಳಿಸಿದರು.

ಶಾಲೆಯ ಬಸ್​ಗಳಿಗೆ ಟ್ರ್ಯಾಕ್ಟರ್​ಗಳಿಂದ ಗುದ್ದಿಸಿ ಜಖಂಗೊಳಿಸಿದ್ದಲ್ಲದೆ, ಬೆಂಕಿ ಹಚ್ಚಿದರು. ಶಾಲೆಯ ಆಸ್ತಿಪಾಸ್ತಿಯನ್ನು ಹಾಳುಗೆಡವಿದರು. ಕೆಲವರು ಬಸ್​ಗಳನ್ನು ಉರುಳಿಸಿದರು. ಶಾಲೆಯ ಆವರಣಕ್ಕೆ ನುಗ್ಗಿದ್ದ ಹಲವರು ಗಾಜುಗಳನ್ನು ಒಡೆದು ಹಾಕಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ವಾಹನವನ್ನೂ ಹಿಂದಕ್ಕೆ ಕಳಿಸಿದರು.

 

 

 

ಪರಿಸ್ಥಿತಿ ಕೈಮೀರಿದ್ದನ್ನು ಮನಗಂಡ ಪೊಲೀಸರು ಇದೀಗ ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಿದ್ದಾರೆ. ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಮಿಳುನಾಡಿನ ಡಿಜಿಪಿ ಸಿ.ಶೈಲೇಂದ್ರ ಬಾಬು ಎಚ್ಚರಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದರು. ಆದರೆ ಉದ್ವಿಗ್ನತೆ ಹೆಚ್ಚಾದಂತೆ ಪರಿಸ್ಥಿತಿ ಕೈಮೀರಿತು ಎಂದು ಪೊಲೀಸರು ಹೇಳಿದ್ದಾರೆ.

Published On - 3:26 pm, Sun, 17 July 22