Monsoon session ನಾಳೆ ಸಂಸತ್ ಮುಂಗಾರು ಅಧಿವೇಶನ: ಕೇಂದ್ರ ಸರ್ಕಾರದಿಂದ ಸರ್ವಪಕ್ಷಗಳ ಸಭೆ, ಮೋದಿ ಗೈರು

ಸಂಸತ್​ನಲ್ಲಿ ನಡೆಯಲಿರುವ ಅಧಿವೇಶನ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಇದಕ್ಕೆ ಪ್ರಧಾನಿಯವರು ಗೈರು ಹಾಜರಾಗಿದ್ದಾರೆ. ಇದು ಅಸಂಸದೀಯ ಅಲ್ಲವೇ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

Monsoon session ನಾಳೆ ಸಂಸತ್ ಮುಂಗಾರು ಅಧಿವೇಶನ: ಕೇಂದ್ರ ಸರ್ಕಾರದಿಂದ ಸರ್ವಪಕ್ಷಗಳ ಸಭೆ, ಮೋದಿ ಗೈರು
ಸರ್ವಪಕ್ಷಗಳ ಸಭೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 17, 2022 | 2:01 PM

ದೆಹಲಿ: ಸೋಮವಾರ ಸಂಸತ್ ಮುಂಗಾರು ಅಧಿವೇಶನ (Monsoon session) ಆರಂಭವಾಗಲಿದ್ದು ಕೇಂದ್ರ ಸರ್ಕಾರ ಭಾನುವಾರ ಸರ್ವಪಕ್ಷಗಳ ಸಭೆ (All-party meet) ಕರೆದಿದೆ. ಮುಂಗಾರು ಅಧಿವೇಶನದ  ವೇಳೆ ಸದನದಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸುವಂತೆ ಕಾರ್ಯತಂತ್ರ ರೂಪಿಸುವುದಕ್ಕಾಗಿ ಈ ಸಭೆ ಕರೆಯಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಈ ಸಭೆ ಕರೆದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಪೀಯೂಷ್ ಗೋಯಲ್, ಎಐಎಡಿಎಂಕೆ ಸಂಸದ ಎಂ ತಂಬಿದುರೈ, ವೈಎಸ್ಆರ್ ಸಿಪಿ ಸಂಸದ ವಿಜಯಸಾಯಿ ರೆಡ್ಡಿ, ಟಿಎಂಸಿ ಸಂಸದ ಸುದೀಪ್ ಬಂದೋಪಾಧ್ಯಾಯ್, ಅಪ್ನಾ ದಳ್ ಸಂಸದೆ ಅನುಪ್ರಿಯಾ ಪಟೇಲ್, ಕಾಂಗ್ರೆಸ್ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್, ರಾಷ್ಟ್ರೀಯ ಲೋಕ ದಳ್ ಸಂಸದರಾದ ಜಯಂತ್ ಚೌಧರಿ ಮತ್ತು ಡಿಎಂಕೆ ಸಂಸದ ತಿರುಚಿ ಸಿವ ಮತ್ತು ಇತರರು ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗೈರಾಗಿದ್ದು, ಇದನ್ನು ವಿಪಕ್ಷ ಕಾಂಗ್ರೆಸ್ ಪ್ರಶ್ನಿಸಿದೆ. ಸಂಸತ್​ನಲ್ಲಿ ನಡೆಯಲಿರುವ ಅಧಿವೇಶನ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಇದಕ್ಕೆ ಪ್ರಧಾನಿಯವರು ಗೈರು ಹಾಜರಾಗಿದ್ದಾರೆ. ಇಂದು ಅಸಂಸದೀಯ ಅಲ್ಲವೇ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳು ಚರ್ಚಿಸಲು ಬಯಸುವ ವಿಷಯಗಳನ್ನು ಚರ್ಚಿಸುವುದು ಸಭೆಯ ಕಾರ್ಯಸೂಚಿಯಾಗಿದೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆ ಈ ಸಂಸತ್ ಅಧಿವೇಶನದಲ್ಲಿ ನಡೆಯಲಿದ್ದು, ಹಾಗಾಗಿ ಈ ಮುಂಗಾರು ಅಧಿವೇಶನ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 24ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರವಧಿ ಕೊನೆಗೊಳ್ಳಲಿದ್ದು, ಆಗಸ್ಟ್ 10ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರವಧಿ ಪೂರ್ಣಗೊಳ್ಳಲಿದೆ. ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವುದಕ್ಕಾಗಿ ವಿಪಕ್ಷಗಳು ನಾಳೆ ಸಭೆ ಸೇರಲಿದೆ. ಬಿಜೆಪಿ ಶನಿವಾರ ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ದನ್ಖರ್ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಎನ್​​ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಅಧಿವೇಶನದಲ್ಲಿ ವಿಪಕ್ಷಗಳು ಅಗ್ನಿಪಥ್ ಯೋಜನೆ, ನಿರುದ್ಯೋಗ, ಹಣದುಬ್ಬರ ಸೇರಿದಂತೆ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನಿಸಲಿವೆ. ಅದೇ ವೇಳೆ ಕೇಂದ್ರ ಸರ್ಕಾರ ಹಲವಾರು ಕಾಯ್ದೆಗಳನ್ನು ಅಧಿವೇಶನದಲ್ಲಿ ಮಂಡನೆಯಾಗಲಿದೆ. ಶನಿವಾರ ಸಂಜೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನ ಸುಗಮವಾಗಿ ನಡೆಸಲು ಎಲ್ಲ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿವೆ.

ಬಾಕಿ ಉಳಿದಿರುವ ಮಸೂದೆಗಳು

ಇಂಡಿಯನ್ ಅಂಟಾರ್ಟಿಕಾ ಮಸೂದೆ 2022 ಲೋಕಸಭೆಯಲ್ಲಿ ಬಾಕಿ ಇದೆ. ಅಂತರ್ ರಾಜ್ಯ ನದಿ ನೀರು ವಿವಾದ (ತಿದ್ದುಪಡಿ) ಮಸೂದೆ 2019 ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ಮುಂದಿನ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳು (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆ 2022 ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ರಾಜ್ಯಸಭೆಯಲ್ಲಿ ಅನುಮೋದನೆಗೆ ಬಾಕಿ ಇದೆ. ಅರಣ್ಯ ಜೀವಿ (ರಕ್ಷಣೆ) ತಿದ್ದುಪಡಿ ಮಸೂದೆ 2021, ಆಂಟಿ ಮೆರಿಟೈಮ್ ಪೈರಸಿ ಮಸೂದೆ 2019, ರಾಷ್ಟ್ರೀಯ ಡೋಪಿಂಗ್ ವಿರೋಧಿ ಮಸೂದೆ 2021 ಲೋಕಸಭೆಯಲ್ಲಿ ಬಾಕಿ ಇದೆ.

ಸಂವಿಧಾನದ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ) ಆದೇಶಗಳು (ಎರಡನೇ ತಿದ್ದುಪಡಿ) ಮಸೂದೆ 2022 (ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ಜಿಲ್ಲೆಗಳ ಹೆಸರು ಬದಲಾವಣೆ) ಮಾರ್ಚ್ 2022ರಲ್ಲಿ ಲೋಕಸಭೆಯಲ್ಲಿ ಮಂಡನೆ ಆಗಿತ್ತು.

ಮಂಡನೆಯಾಗಲಿರುವ ಹೊಸ ಮಸೂದೆಗಳು

ಮುಂಗಾರು ಅಧಿವೇಶನದಲ್ಲಿ ಹೊಸದಾಗಿ ಪರಿಚಯಿಸಲಾಗುವ ಹೊಸ ಮಸೂದೆಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ, 2022 ಕೂಡಾ ಒಂದು. ಕೌಟುಂಬಿಕ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆ, 2022 ಕೂಡ ಹೊಸ ಮಸೂದೆ ಆಗಿದ್ದು, ಗುರುವಾರ ಮುದ್ರಣಕ್ಕೆ ಕಳುಹಿಸಲಾಗಿದೆ.

ಸರ್ಕಾರದ ಕಾರ್ಯಸೂಚಿಯಲ್ಲಿರುವ ಇತರ ಮಸೂದೆಗಳು- ಸಂವಿಧಾನ (ಪರಿಶಿಷ್ಟ ಬುಡಕಟ್ಟುಗಳು) ಆದೇಶ (ತಿದ್ದುಪಡಿ) ಮಸೂದೆ, 2019 (ಅಸ್ಸಾಂ ರಾಜ್ಯಕ್ಕೆ ಸಂಬಂಧಿಸಿದಂತೆ), ಮಧ್ಯಸ್ಥಿಕೆ ಮಸೂದೆ, 2021 (ಶ್ರೀ ಸುಶೀಲ್ ಕುಮಾರ್ ಮೋದಿ ಅವರ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿಯೊಂದಿಗೆ), ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ, 2019 ಮತ್ತು ಅನಿವಾಸಿ ಭಾರತೀಯರ ವಿವಾಹ ನೋಂದಣಿ ಮಸೂದೆ, 2019.

Published On - 1:16 pm, Sun, 17 July 22