ಭಾರತ-ಚೀನಾ ಸೇನಾ ಕಮಾಂಡರ್ಗಳ ನಡುವೆ 16ನೇ ಸುತ್ತಿನ ಮಾತುಕತೆ
ಪ್ರಸ್ತುತ ಲಡಾಖ್ನಲ್ಲಿ ಸುಮಾರು ಭಾರತ ಸರ್ಕಾರವು ಸುಮಾರು 60,000 ಸೈನಿಕರನ್ನು ನಿಯೋಜಿಸಿದೆ ಎಂದು ರಕ್ಷಣಾ ವಿಶ್ಲೇಷಕರು ಹೇಳಿದ್ದಾರೆ.
ದೆಹಲಿ: ಭಾರತ ಮತ್ತು ಚೀನಾ (Indian Army and PLA) ಸೇನಾಪಡೆಗಳು ಕಮಾಂಡರ್ಗಳ ಮಟ್ಟದ 16ನೇ ಸುತ್ತಿನ ಮಾತುಕತೆ ಭಾನುವಾರ ಚುಶುಲ್-ಮೊಲ್ಡೊ ಗಡಿಯಲ್ಲಿ ಭಾನುವಾರ ನಡೆಯಿತು. ಗಡಿಯ ಭಾರತದ ಪ್ರದೇಶದಲ್ಲಿ ಮಾತುಕತೆಗೆ ಸ್ಥಳ ನಿಗದಿಯಾಗಿತ್ತು. ಪೂರ್ವ ಲಡಾಖ್ನ (Eastren Ladakh) ವಾಸ್ತವ ನಿಯಂತ್ರಣ ರೇಖೆಯ (Line of Actual Control – LAC) ಪ್ರದೇಶದಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ಸೇನಾಧಿಕಾರಿಗಳು ಚರ್ಚಿಸಿದರು. ನಾಲ್ಕು ತಿಂಗಳ ನಂತರ ಸೇನಾಧಿಕಾರಿಗಳ ಮಟ್ಟದ ಮಾತುಕತೆ ಮತ್ತೆ ಆರಂಭವಾಗಿದೆ. ಕಳೆದ ಮಾರ್ಚ್ 11ರಂದು ಎರಡೂ ದೇಶಗಳ ಕಮಾಂಡರ್ಗಳ ನಡುವೆ ಮಾತುಕತೆ ನಡೆದಿತ್ತು.
ಇಂದಿನ ಮಾತುಕತೆಯಲ್ಲಿ ಡೆಪ್ಸಾಂಗ್ ಬಲ್ಜ್ ಮತ್ತು ಡೆಮ್ಚೊಕ್ ಮತ್ತು ಡೆಮ್ಚೊಕ್ ವಲಯದಿಂದ ಚೀನಾ ಸೇನೆ ಹಿಂದಕ್ಕೆ ಹೋಗಬೇಕು ಎಂದು ಭಾರತದ ಅಧಿಕಾರಿಗಳು ಸಭೆಯಲ್ಲಿ ಒತ್ತಾಯಿಸಲಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ಜುಲೈ 7ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಅವರ ಚೀನಾದ ಸಹವರ್ತಿ ವಾಂಗ್ ಯಿ ಅವರ ನಡುವೆ ನಡೆದಿದ್ದ ಮಾತುಕತೆಯಲ್ಲಿಯೂ ಲಡಾಖ್ ವಿಚಾರವೇ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಜಿ20 ದೇಶಗಳ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರ ಸಮಾವೇಶದ ವೇಳೆ ಪೂರ್ವ ಲಡಾಖ್ನಲ್ಲಿ ಒಪ್ಪಂದದ ಅಂಶಗಳನ್ನು ಚೀನಾ ಪಾಲಿಸಬೇಕು ಎಂದು ಜೈಶಂಕರ್ ಆಗ್ರಹಿಸಿದ್ದರು.
‘ಪೂರ್ವ ಲಡಾಖ್ನಲ್ಲಿ ಶಾಂತಿ ಸ್ಥಾಪನೆಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಚೀನಾ ಒಪ್ಪಂದದ ಷರತ್ತುಗಳನ್ನು ಪಾಲಿಸಬೇಕು. ವಿದೇಶಾಂಗ ವ್ಯವಹಾರಗಳ ಸಚಿವರ ನಡುವೆ ನಡೆದ ಮಾತುಕತೆಯಲ್ಲಿ ಆಗಿರುವ ಒಪ್ಪಂದಗಳನ್ನು ಚೀನಾ ಪಾಲಿಸಬೇಕು. ಈ ಮೂಲಕ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಲು ನೆರವಾಗಬೇಕು’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯು ಸುದ್ದಿಗೋಷ್ಠಿಯಲ್ಲಿ ತಿಳಿಸಿತ್ತು.
ಮೇ 5, 2020ರ ರಾತ್ರಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ನಂತರ ಲಡಾಖ್ ವಿದ್ಯಮಾನಗಳು ಇಡೀ ಜಗತ್ತಿನ ಗಮನ ಸೆಳೆದಿದ್ದವು. ಎರಡೂ ದೇಶಗಳು ಸೇನಾ ನಿಯೋಜನೆ ಹೆಚ್ಚಿಸಿದ್ದವು. ನಂತರದ ದಿನಗಳಲ್ಲಿ ಎರಡೂ ದೇಶಗಳ ಸೇನಾ ಕಮಾಂಡರ್ಗಳು ಹಲವು ಬಾರಿ ಸಭೆ ಸೇರಿ ಮಾತುಕತೆ ನಡೆಸಿದ್ದರು. ಇದರ ಫಲವಾಗಿ ಎರಡೂ ದೇಶಗಳು ಸೇನಾ ನಿಯೋಜನೆಯನ್ನು ಕಡಿಮೆ ಮಾಡಿದ್ದವು. ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಿಂದ ಸೇನೆಯನ್ನು ಹಿಂದಕರಕೆ ಕರೆಸಿಕೊಳ್ಳಲಾಯಿತು.
ಪ್ರಸ್ತುತ ಲಡಾಖ್ನಲ್ಲಿ ಸುಮಾರು ಭಾರತ ಸರ್ಕಾರವು ಸುಮಾರು 60,000 ಸೈನಿಕರನ್ನು ನಿಯೋಜಿಸಿದೆ ಎಂದು ರಕ್ಷಣಾ ವಿಶ್ಲೇಷಕರು ಹೇಳಿದ್ದಾರೆ. ಗಡಿಯ ಚೀನಾ ವಲಯದಲ್ಲಿ ಹತ್ತಾರು ಬಗೆಯ ಚಟುವಟಿಕೆಗಳು ಮುಂದುವರಿದಿರುವ ಕಾರಣ ಸೇನೆಯನ್ನು ಪೂರ್ಣಪ್ರಮಾಣದಲ್ಲಿ ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಒಪ್ಪುತ್ತಿಲ್ಲ.
Published On - 11:37 am, Sun, 17 July 22