ಸ್ವಚ್ಛತಾ ಕಾಮಗಾರಿ ಪರಿಶೀಲನೆಗೆ ಉಟ್ಟ ಸೀರೆಯಲ್ಲೇ ಮ್ಯಾನ್​ಹೋಲ್​ಗೆ ಇಳಿದ ಪಾಲಿಕೆ ಅಧಿಕಾರಿ: ವಿಡಿಯೋ ವೈರಲ್

| Updated By: Digi Tech Desk

Updated on: Jun 11, 2021 | 12:30 PM

ಮ್ಯಾನ್​ಹೋಲ್​ಗೆ ಮರದ ಏಣಿಯೊಂದನ್ನು ಇರಿಸಿ ಉಟ್ಟ ಸೀರೆಯಲ್ಲೇ ಕೆಳಕ್ಕಿಳಿದ ಸುವಿಧಾ, ಒಳಗೆ ಏನೇನು ಕೆಲಸ ನಡೆಯುತ್ತಿದೆ ಎಂದು ಫೋಟೋ ತೆಗೆದು, ಅಲ್ಲಿದ್ದ ಕಾರ್ಮಿಕರ ಬಳಿ ಮಾತನಾಡಿ ಬಳಿಕ ಹೊರಬಂದಿದ್ದಾರೆ.

ಸ್ವಚ್ಛತಾ ಕಾಮಗಾರಿ ಪರಿಶೀಲನೆಗೆ ಉಟ್ಟ ಸೀರೆಯಲ್ಲೇ ಮ್ಯಾನ್​ಹೋಲ್​ಗೆ ಇಳಿದ ಪಾಲಿಕೆ ಅಧಿಕಾರಿ: ವಿಡಿಯೋ ವೈರಲ್
ಮ್ಯಾನ್​ಹೋಲ್​ಗೆ ಇಳಿದ ಮಹಿಳಾ ಅಧಿಕಾರಿ
Follow us on

ಮುಂಬೈ: ಸ್ವಚ್ಛತಾ ಕಾಮಗಾರಿಯ ವೇಳೆ ಕಾರ್ಮಿಕರನ್ನು ಮ್ಯಾನ್​ಹೋಲ್​ಗೆ ದಬಾಯಿಸಿ ಇಳಿಸುವ ಅಧಿಕಾರಿಗಳನ್ನು, ಹಣದ ಆಮಿಷ ತೋರಿಸಿ ಇಳಿಸುವ ಅಧಿಕಾರಿಗಳನ್ನು ಸಾಧಾರಣವಾಗಿ ನೋಡಿರುತ್ತೀರಿ ಅಥವಾ ಕಡೇಪಕ್ಷ ಅಂತಹ ಘಟನೆಗಳ ಬಗ್ಗೆ ವರದಿಗಳನ್ನು ಓದಿರುತ್ತೀರಿ. ಆದರೆ, ಇಲ್ಲೊಬ್ಬರು ಅಧಿಕಾರಿ ಇದಕ್ಕೆ ಅಪವಾದವೆಂಬಂತೆ ನಡೆದುಕೊಂಡಿದ್ದು, ಅವರ ವಿಡಿಯೋ ವೈರಲ್ ಆಗುತ್ತಿದೆ. ಮ್ಯಾನ್​ಹೋಲ್​ನಲ್ಲಿ ಸ್ವಚ್ಛತಾ ಕೆಲಸ ನಡೆಯುತ್ತಿದ್ದ ವೇಳೆ ಅಲ್ಲಿಗೆ ಬಂದ ಮಹಿಳಾ ಅಧಿಕಾರಿ ಸ್ವತಃ ಮ್ಯಾನ್​ಹೋಲ್ ಒಳಕ್ಕೆ ಇಳಿದಿದ್ದಾರೆ. ಉಟ್ಟ ಸೀರೆಯಲ್ಲೇ ಕೆಳಕ್ಕಿಳಿದ ಅವರು ಕಾರ್ಮಿಕರೊಂದಿಗೆ ಕೆಲ ಹೊತ್ತು ಮಾತನಾಡಿ, ಸ್ವಚ್ಛತಾ ಕೆಲಸ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಈಗ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಘಟನೆ ಮಹಾರಾಷ್ಟ್ರದ ಭಿವಾಂಡಿ, ನಿಜಾಮ್​ಪುರ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಪಾಲಿಕೆ ವ್ಯಾಪ್ತಿಯ ಸ್ವಚ್ಛತಾ ಕಾರ್ಯಗಳನ್ನು ನೋಡಿಕೊಳ್ಳುವ ಅಧಿಕಾರಿ ಸುವಿಧಾ ಚವಣ್ ಮ್ಯಾನ್​ಹೋಲ್​ಗೆ ಇಳಿದು ಸುದ್ದಿಯಾಗಿದ್ದಾರೆ. ಮ್ಯಾನ್​ಹೋಲ್​ಗೆ ಮರದ ಏಣಿಯೊಂದನ್ನು ಇರಿಸಿ ಉಟ್ಟ ಸೀರೆಯಲ್ಲೇ ಕೆಳಕ್ಕಿಳಿದ ಸುವಿಧಾ, ಒಳಗೆ ಏನೇನು ಕೆಲಸ ನಡೆಯುತ್ತಿದೆ ಎಂದು ಫೋಟೋ ತೆಗೆದು, ಅಲ್ಲಿದ್ದ ಕಾರ್ಮಿಕರ ಬಳಿ ಮಾತನಾಡಿ ಬಳಿಕ ಹೊರಬಂದಿದ್ದಾರೆ.

ಈ ಮಹಿಳಾ ಅಧಿಕಾರಿಯು ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳ ಬಗ್ಗೆ ಹೀಗೆಯೇ ನಿಗಾ ವಹಿಸುತ್ತಿದ್ದು, ಮುಂಗಾರು ಪ್ರಾರಂಭವಾಗುತ್ತಿರುವುದರಿಂದ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಇವರು ಇಷ್ಟೊಂದು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಅಧಿಕಾರಿಗಳು ಇರಬೇಕು ಎಂದು ಹೇಳುತ್ತಿದ್ದಾರೆ.

ಸುವಿಧಾ ಚವಣ್ ಅವರಿಗೆ ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯದ ಉಸ್ತುವಾರಿ ವಹಿಸಲಾಗಿದ್ದು, ಮಳೆಗಾಲ ಶುರುವಾದ ನಂತರ ಚರಂಡಿ ಕಟ್ಟುವುದು, ಒಳಚರಂಡಿ ಮುಚ್ಚಿಕೊಳ್ಳುವುದು ಸೇರಿದಂತೆ ಯಾವ ಅವ್ಯವಸ್ಥೆಗಳೂ ಜರುಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ತಾವೇ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮ್ಯಾನ್​ಹೋಲ್​ಗೆ ಇಳಿದು ಸ್ವಚ್ಛತಾ ಕಾರ್ಯ ಪರಿಶೀಲಿಸಿದ ಅಧಿಕಾರಿ

ಅವರು ಸೀರೆಯುಟ್ಟು ಮ್ಯಾನ್​ಹೋಲ್​ಗೆ ಇಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದಂತೆಯೇ ಜನರು ಸುವಿಧಾ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ. ಜತೆಗೆ, ಇಂತಹ ಅಧಿಕಾರಿಗಳಿದ್ದರೆ ಕಾರ್ಮಿಕರ ಸಮಸ್ಯೆ ಹಾಗೂ ಜನರ ಸಮಸ್ಯೆ ಎರಡಕ್ಕೂ ಸುಲಭ ಪರಿಹಾರ ಒದಗಿಸುವುದು ಸಾಧ್ಯ. ಇವರನ್ನು ನೋಡಿ ಎಲ್ಲಾ ಅಧಿಕಾರಿಗಳು ಕಲಿಯಬೇಕಾಗಿದ್ದು ಬಹಳ ಇದೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ:
ಮಂಡ್ಯ; ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಅಸ್ವಸ್ಥರಾಗಿದ್ದ ಮೂವರು ಕಾರ್ಮಿಕರ ಸಾವು 

ರಾಮನಗರದಲ್ಲಿ ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಅಶ್ವತ್ಥ್ ನಾರಾಯಣ

Published On - 12:08 pm, Fri, 11 June 21