ದೆಹಲಿ: ಕೇಂದ್ರ ಸರ್ಕಾರದ ವಿವಾದಿತ ನೂತನ ಕೃಷಿ ಕಾಯ್ದೆಯನ್ನು ಪ್ರಶ್ನಿಸಿ ಭಾರತೀಯ ಕಿಸಾನ್ ಯೂನಿಯನ್ (BKU) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕಾರ್ಪೊರೇಟ್ ಕುಳಗಳ ಹಿಡಿತಕ್ಕೆ ರೈತರನ್ನು ಸಿಲುಕಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದರಿಂದ ರೈತರಿಗೆ ಹಾನಿಯಾಗಲಿದ್ದು ನಾವು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಿದ್ದೇವೆ ಎಂದು BKU ಮಾಹಿತಿ ನೀಡಿರುವುದಾಗಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇಂದ್ರ ಸರ್ಕಾರ ಈ ಕಾಯ್ದೆಗಳ ಮೂಲಕ ಕೃಷಿಯನ್ನು ವಾಣಿಜ್ಯೀಕರಣ ಮಾಡಲು ಹೊರಟಿದೆ. ಇದರಿಂದ ರೈತರ ಬಲ ಕುಗ್ಗಲಿದ್ದು, ಕಾರ್ಪೊರೇಟ್ ಕಂಪೆನಿಗಳ ಅಡಿಯಾಳಾಗುವ ಅಪಾಯವಿದೆ. ಆದ್ದರಿಂದ ಸರ್ವೋಚ್ಛ ನ್ಯಾಯಾಲಯ ಈ ಕೂಡಲೇ ಮಧ್ಯ ಪ್ರವೇಶಿಸಿ ರೈತರಿಗೆ ಅನ್ಯಾಯವಾಗದಂತೆ ಕಾಪಾಡಬೇಕು ಎಂದು ಮನವಿ ಮಾಡಿದೆ.
ವಕೀಲ ಎ.ಪಿ.ಸಿಂಗ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ಏಕಾಏಕಿ ಕಾಯ್ದೆ ತರಲು ಹೊರಟ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಲಾಗಿದೆ. ರೈತರನ್ನು ಗಣನೆಗೆ ತೆಗೆದುಕೊಳ್ಳದೇ ಮನಸ್ಸಿಗೆ ಬಂದಂತೆ ನೀತಿ, ನಿಯಮ ರೂಪಿಸಲಾಗದು. ನಮ್ಮೊಂದಿಗೆ ಇನ್ನೂ ಹಲವು ಕೃಷಿ ಸಂಘಗಳು ಬೆಂಬಲಕ್ಕೆ ಇವೆ. ನಾವು ಹೋರಾಟ ಕೈ ಬಿಡುವುದಿಲ್ಲ ಎಂದು BKU ಹೇಳಿದೆ.
ಮಾತುಕತೆ ಪ್ರಸ್ತಾವನೆಯನ್ನು ತಿರಸ್ಕರಿಸಿದ ರೈತರು
ಈ ನಡುವೆ ಕೇಂದ್ರ ಸರ್ಕಾರ ಇನ್ನೊಂದು ಸುತ್ತಿನ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಕಾಯ್ದೆಗಳಲ್ಲಿ ಕೆಲ ಬದಲಾವಣೆ ತರುವುದಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ಆದರೆ, ಮಾತುಕತೆಯ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರೈತರು ಕಾಯ್ದೆಯನ್ನು ಸಂಪೂರ್ಣ ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ.
Delhi Chalo ಸಿಂಘು ಗಡಿ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಸೋಂಕು