ಶಸ್ತ್ರಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯರಿಗೆ ಅನುಮತಿ; ಅಲೋಪಥಿ ವೈದ್ಯರ ಮುಷ್ಕರ ಅಂತ್ಯ
ಕೇಂದ್ರದ ನಿರ್ಧಾರವನ್ನು ವಿರೋಧಿಸಿರುವ IMA, ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ನೀಡಿರುವ ಅನುಮತಿಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದೆ. IMA ಕರೆನೀಡಿರುವ ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಬೆಂಬಲ ಸೂಚಿಸಿವೆ.
ಬೆಂಗಳೂರು: ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಅಲೋಪಥಿ ವೈದ್ಯರು ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹೊರರೋಗಿ ವಿಭಾಗದ (OPD) ಸೇವೆ ನೀಡದೆ ಮುಷ್ಕರ ನಡೆಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿವೆ.
ಭಾರತೀಯ ವೈದ್ಯಕೀಯ ಸಂಘ (IMA) ನೇತೃತ್ವದಲ್ಲಿ ಈ ಮುಷ್ಕರ ನಡೆಯುತ್ತಿದೆ. ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಕಳೆದ ತಿಂಗಳು ಅನುಮತಿ ನೀಡಿತ್ತು. ಈ ಸಂಬಂಧ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧಿಸೂಚನೆ ಹೊರಡಿಸಿತ್ತು. ಈ ಮೂಲಕ ತರಬೇತಿ ಪಡೆದ ಸ್ನಾತಕೋತ್ತರ ಪದವೀಧರ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ ಎಂದು ತಿಳಿಸಲಾಗಿತ್ತು.
ಈ ನಿರ್ಧಾರವನ್ನು ವಿರೋಧಿಸಿರುವ IMA, ಕೇಂದ್ರವು ಆಯುರ್ವೇದ ವೈದ್ಯರಿಗೆ ನೀಡಿರುವ ಅನುಮತಿಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದೆ. IMA ಕರೆ ನೀಡಿರುವ ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಬೆಂಬಲ ಸೂಚಿಸಿವೆ.
ಒಂದೆಡೆ ಸಾರಿಗೆ ನೌಕರರ ಬಂದ್, ಮತ್ತೊಂದೆಡೆ ವೈದ್ಯಕೀಯ ಸೇವೆಗಳ ಮುಷ್ಕರ. ಸರ್ಕಾರಿ ಆಸ್ಪತ್ರೆಗಳನ್ನು ಬಳಸುವ ಬಡ ಮತ್ತು ಮಧ್ಯಮ ವರ್ಗಕ್ಕೆ ಆಸ್ಪತ್ರೆ ಇದೆ, ಬಸ್ ಇಲ್ಲ. ಖಾಸಗಿ ಆಸ್ಪತ್ರೆ ಬಳಸುವ ಶ್ರೀಮಂತ ವರ್ಗದ ಜನರಿಗೆ ಸಾರಿಗೆ ಅನುಕೂಲ ಇದೆ, ವೈದ್ಯಕೀಯ ಸೇವೆ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ.
IMA ರಾಜ್ಯ ಪ್ರಧಾನ ಕಾರ್ಯದರ್ಶಿ ಏನು ಹೇಳಿದ್ದಾರೆ? ಈ ಬಗ್ಗೆ, IMA ರಾಜ್ಯ ಪ್ರಧಾನ ಕಾರ್ಯದರ್ಶಿ, ಡಾ. ಎಸ್.ಎಂ. ಪ್ರಸಾದ್ ಟಿವಿ9 ಡಿಜಿಟಲ್ ತಂಡದೊಂದಿಗೆ ಮಾತನಾಡಿದ್ದಾರೆ. ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದ ಸೇವೆಯನ್ನು ಮಾತ್ರ ನೀಡದೆ ಮುಷ್ಕರ ನಡೆಸಿದ್ದೇವೆ.
ಅದೂ ಕೂಡ ಬೆಳಗ್ಗೆ 6ರಿಂದ ಸಂಜೆ 6ರವರೆಗೆ. ಉಳಿದಂತೆ, ತುರ್ತುಚಿಕಿತ್ಸೆ, ಒಳರೋಗಿ ವಿಭಾಗ, ಆಂಬುಲೆನ್ಸ್, ಕೊವಿಡ್ ಚಿಕಿತ್ಸೆ, ಔಷಧ ಅಂಗಡಿ ಸೇವೆಗಳಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದಿದ್ದಾರೆ. ಬೆಳಗ್ಗೆ ಆರು ಗಂಟೆಯ ಮೊದಲು ಮತ್ತು ಸಂಜೆ ಆರರ ಬಳಿಕ ಒಪಿಡಿ ವಿಭಾಗವು ಸೇವೆಗೆ ಲಭ್ಯವಿರಲಿದೆ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ರಾಜ್ಯ ಸರ್ಕಾರದಿಂದ Green Signal
ಈ ಮುಷ್ಕರದಿಂದ ಯಾರಿಗೆ ಸಮಸ್ಯೆ ಹೆಚ್ಚು? ವೈದ್ಯರ ಮುಷ್ಕರದಿಂದ ಸಾವರ್ಜನಿಕರ ಮೇಲೆ ಆಗಿರಬಹುದಾದ ಸಮಸ್ಯೆಯ ಪ್ರಮಾಣಗಳ ಬಗ್ಗೆ ಡಾ. ಪ್ರಸಾದ್ ಮಾತನಾಡಿದ್ದಾರೆ. ಹಳ್ಳಿ ಪ್ರದೇಶದಲ್ಲಿ ಶೇ. 60ರಿಂದ 80ರಷ್ಟು ಜನರಿಗೆ ಸ್ವಲ್ಪ ತೊಡಕು ಉಂಟಾಗಿರಬಹುದು. ಟೆಲಿಮೆಡಿಸಿನ್, ಅಂತರ್ಜಾಲ ವ್ಯವಸ್ಥೆಯ ಮೂಲಕ ಔಷಧ, ಸೆಲ್ಫ್ ಮೆಡಿಸಿನ್ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ನಗರ ಪ್ರದೇಶದ ಜನರಿಗೆ ಈ ಮುಷ್ಕರದಿಂದ ಹೆಚ್ಚು ಸಮಸ್ಯೆ ಆಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಕಾಳಜಿ ವಹಿಸಿಕೊಂಡೇ ಈ ಮುಷ್ಕರ ನಡೆಸಿರುವುದಾಗಿ ತಿಳಿಸಿದ ಡಾ. ಪ್ರಸಾದ್, ಜನರಿಗೆ ಮತ್ತುಸರ್ಕಾರಕ್ಕೆ ಅಲೋಪಥಿ ವೈದ್ಯರ ಅಭಿಪ್ರಾಯವನ್ನು ಮನವರಿಕೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದಿದ್ದಾರೆ. ಜನರ ಬಗ್ಗೆ ನಮಗೆ ಕಾಳಜಿ ಇದೆ. ನಮ್ಮ ಧ್ವನಿ ಸರ್ಕಾರ ಮತ್ತು ಈ ನಿರ್ಧಾರ ಕೈಗೊಂಡಿರುವ ತಜ್ಞರ ಸಲಹಾ ಮಂಡಳಿಯನ್ನು ಮುಟ್ಟಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ: ಔಷಧಕ್ಕೆಂದು ಸದ್ದಿಲ್ಲದೆ ಮಾಯವಾಗ್ತಿದೆ ಪಕ್ಷಿ ಸಂಕುಲ
ಅಲೋಪಥಿ ವೈದ್ಯರ ವಿರೋಧ ಯಾಕೆ? ಕೇಂದ್ರದ ಅನುಮತಿಯಂತೆ ಆಯುರ್ವೇದ ವೈದ್ಯರು ಇನ್ನು ಮೂರು ವರ್ಷಗಳಲ್ಲಿ ಪದವಿ ಪಡೆದು ಶಸ್ತ್ರಚಿಕಿತ್ಸೆ ನಡೆಸಲು ಅರ್ಹರಾಗುತ್ತಾರೆ. ಆಯುರ್ವೇದ ವೈದ್ಯಕೀಯ ಪದ್ದತಿಯಲ್ಲಿ ಆಂಟಿಬಯೋಟಿಕ್ಸ್ ಔಷಧ ಸೇವೆ ಲಭ್ಯವಿಲ್ಲ.
ಹಾಗಾಗಿ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬಹುದೇ ವಿನಃ ಅದರಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಆಯುರ್ವೇದದ ಮೂಲಕ ಪರಿಹರಿಸಲಾಗುವುದಿಲ್ಲ. ಅದಕ್ಕಾಗಿ ಮತ್ತೆ ಅಲೋಪಥಿಯನ್ನು ಅವಲಂಬಿಸಬೇಕಾಗುತ್ತದೆ. ಅನಸ್ತೇಷಿಯಾ ಕೂಡ ಆಯುರ್ವೇದದಲ್ಲಿ ಇಲ್ಲ. ಆಗ ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಆಯುರ್ವೇದ ಪದ್ಧತಿಯನ್ನು ಅಭ್ಯಸಿಸಿದವರು ತಮ್ಮ ವಿಧಾನದಲ್ಲಿ ಚಿಕಿತ್ಸ ನೀಡಲಿ. ವೈದ್ಯಕೀಯ ಪದ್ಧತಿಗಳ ಮಿಶ್ರಣ ಸರಿಯಲ್ಲ ಎಂದು ಡಾ. ಪ್ರಸಾದ್ ಹೇಳಿದ್ದಾರೆ. ಆರೋಗ್ಯ ಮತ್ತು ಬದುಕುವ ಹಕ್ಕು ಎಲ್ಲರಿಗೂ ಇದೆ. ಎಲ್ಲರಿಗೂ ಸರಿಯಾದ ಚಿಕಿತ್ಸೆ ಲಭ್ಯವಾಗಬೇಕು ಎಂದು ಹೇಳಿದ್ದಾರೆ.
ಆಯುರ್ವೇದ ವೈದ್ಯರು ತಾವು ಶಸ್ತ್ರಚಿಕಿತ್ಸೆಯ ಬಗ್ಗೆ ಸ್ನಾತಕೋತ್ತರ ಪದವಿ ಪಡೆದು ಹಳ್ಳಿಗಳಲ್ಲಿ ಚಿಕಿತ್ಸೆ ನೀಡುತ್ತೇವೆ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಹಳ್ಳಿ ಜನರಿಗೆ ಆಯುರ್ವೇದ ಶಸ್ತ್ರಚಿಕಿತ್ಸೆಯ ಪ್ರಯೋಗ ಎಂಬ ಮಾತೇಕೆ.
ಹೀಗಾದಾಗ ವೈದ್ಯಕೀಯ ವೃತ್ತಿಯು ಭ್ರಷ್ಟವಾಗುತ್ತದೆ. ಹಳ್ಳಿಗಳಲ್ಲಿ ಸ್ವಯಂಘೋಷಿತ ವೈದ್ಯರು ಹುಟ್ಟಿಕೊಳ್ಳುವ ಅಪಾಯ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರ್ಕಾರ, ವೈದ್ಯಕೀಯ ಸಲಹಾ ಮಂಡಳಿಯ ಸದಸ್ಯರು ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಮುಷ್ಕರದ ಆಶಯವನ್ನು ಮನವರಿಕೆ ಮಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಆಡಳಿತ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಹೃದಯ ಸಂಬಂಧಿ ರೋಗದಿಂದ ಜನ ಹೆಚ್ಚು ಸಾವನ್ನಪ್ಪುತ್ತಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ
Published On - 7:12 pm, Fri, 11 December 20