ಅನಿಲ್ ಆಂಟನಿಯನ್ನು ಬಿಜೆಪಿಯವರು ಕರಿಬೇವಿನ ಎಲೆಯಂತೆ ಬಳಸಿ ಬಿಸಾಡುತ್ತಾರೆ: ಸಹೋದರ ಅಜಿತ್ ಆಂಟನಿ
ಅಲ್ಲಿ ಅವನಿಗೆ ಒಳ್ಳೆಯದಾಗುತ್ತದೆ ಎಂದು ಭಾವಿಸಿ ಅವನು ಅಲ್ಲಿ ಹೋಗಿರಬಹುದು. ಆದರೆ, ಅವರು (ಬಿಜೆಪಿ) ಅವರನ್ನು ಕರಿಬೇವಿನ ಎಲೆಯಂತೆ ಎಸೆಯುತ್ತಾರೆ ಎಂದು ನಾನು ಮತ್ತೆ ಮತ್ತೆ ಹೇಳುತ್ತೇನೆ ಎಂದ ಅಜಿತ್ ಆಂಟನಿ
ತಿರುವನಂತಪುರಂ: ಅನಿಲ್ ಆಂಟನಿ (Anil Antony) ಅವರು ಕಾಂಗ್ರೆಸ್ ಜೊತೆಗಿನ ಎಲ್ಲಾ ಸಂಬಂಧವನ್ನು ಮುರಿದುಕೊಂಡು ಬಿಜೆಪಿ (BJP) ಸೇರಿದ ಒಂದು ದಿನದ ನಂತರ, ಎಕೆ ಆಂಟನಿ (AK Antony) ಅವರ ಕಿರಿಯ ಪುತ್ರ ಅಜಿತ್ ಆಂಟನಿ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸಹೋದರನದ್ದು ಹಠಾತ್ ನಿರ್ಧಾರವಾಗಿದ್ದು ಬಿಜೆಪಿ ಅವರನ್ನು ತಾತ್ಕಾಲಿಕವಾಗಿ ಬಳಸಿ ಅದರ ನಂತರ ಕರಿಬೇವಿನ ಎಲೆಯಂತೆ ಹೊರಬಿಸಾಡುತ್ತದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಆಂಟನಿ, ಅನಿಲ್ ಆಂಟನಿ ಅವರು ತಮ್ಮ ನಿರ್ಧಾರದ ಬಗ್ಗೆ ಕುಟುಂಬಕ್ಕೆ ಕಿಂಚಿತ್ತೂ ಸುಳಿವು ನೀಡಿಲ್ಲ. ಗುರುವಾರದ ಬೆಳವಣಿಗೆಯ ಬಗ್ಗೆ ಚಾನೆಲ್‌ಗಳಲ್ಲಿ ಫ್ಲ್ಯಾಶ್ ಸುದ್ದಿ ನೋಡಿ ಅವರೆಲ್ಲರಿಗೂ ಆಘಾತವಾಗಿದೆ. ದೆಹಲಿಯಲ್ಲಿರುವ ತಮ್ಮ ಪ್ರಧಾನ ಕಚೇರಿಯಲ್ಲಿ ಅನಿಲ್ ಆಂಟನಿ ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಿದ್ದನ್ನು ನೋಡಿದ ನಂತರ ಅಪ್ಪ ತುಂಬಾ ಬೇಸರಗೊಂಡಿದ್ದಾರೆ ಎಂದು ಅವರು ಹೇಳಿದರು.
ಪಪ್ಪ (ಎಕೆ ಆಂಟನಿ) ಮನೆಯ ಮೂಲೆಯೊಂದರಲ್ಲಿ ಅತ್ಯಂತ ನೋವಿನಿಂದ ಕುಳಿತಿರುವುದನ್ನು ಕಂಡೆ. ನನ್ನ ಜೀವನದಲ್ಲಿ ಈ ರೀತಿಯ ದುರ್ಬಲರಾಗಿರುವುದನ್ನು ನಾನು ನೋಡಿಲ್ಲ, ಅವರು ಕಣ್ಣೀರು ಹಾಕಲಿಲ್ಲ, ಅಷ್ಟೇ ಎಂದು ಅಜಿತ್ ಆಂಟನಿ ಹೇಳಿದರು. ತನ್ನ ಸಹೋದರ ಬಿಜೆಪಿಗೆ ಸೇರಲು ತನ್ನದೇ ಆದ ಕಾರಣಗಳನ್ನು ಹೊಂದಿರುತ್ತಾನೆ. ಕಾಂಗ್ರೆಸ್ ಪಕ್ಷದ ಅಪರಿಚಿತ ಕಾರ್ಯಕರ್ತರಿಂದ ಆತನಿಗೆ ಹಲವಾರು ನಿಂದನೀಯ ಕರೆಗಳು ಬರುತ್ತಿದ್ದವು, ಅದು ನೋವುಂಟು ಮಾಡಿರಬಹುದು ಎಂದು ಅಜಿತ್ ಹೇಳಿದ್ದಾರೆ.
ಅವರು ಕೋಪದಿಂದ (ಕಾಂಗ್ರೆಸ್) ಪಕ್ಷದಿಂದ ದೂರ ಉಳಿಯುತ್ತಾರೆ ಎಂದು ನಾನು ಭಾವಿಸಿದೆ, ಆದರೆ ಅವರು ಬಿಜೆಪಿಗೆ ಹೋಗುತ್ತಾರೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ನಿರ್ಧಾರವು ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ ಎಂದು ಅನಿಲ್ ಕಿರಿಯ ಸಹೋದರ ಹೇಳಿದರು. ಬಿಜೆಪಿಗೆ ಸೇರ್ಪಡೆಗೊಳ್ಳುವ ಅನಿಲ್ ಅವರ ನಿರ್ಧಾರವನ್ನು ತುಂಬಾ ಹಠಾತ್ ಪ್ರವೃತ್ತಿ ಎಂದು ಬಣ್ಣಿಸಿದ ಅಜಿತ್ ಆಂಟನಿ ಅವರು ತಮ್ಮ ತಪ್ಪುಗಳನ್ನು ಸರಿಪಡಿಸಿದ ನಂತರ ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರೆ ಎಂದು ನಾನು ನಂಬುವುದಾಗಿ ಹೇಳಿದ್ದಾರೆ.
ಅವರ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದು ಎಂದು ಭಾವಿಸಿದರೆ ಅವರು ಬಿಜೆಪಿಯಲ್ಲೇ ಮುಂದುವರಿಯಬಹುದು ಎಂದು ಅಜಿತ್ ಆಂಟನಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಲ್ಲಿ ಅವನಿಗೆ ಒಳ್ಳೆಯದಾಗುತ್ತದೆ ಎಂದು ಭಾವಿಸಿ ಅವನು ಅಲ್ಲಿ ಹೋಗಿರಬಹುದು. ಆದರೆ, ಅವರು (ಬಿಜೆಪಿ) ಅವರನ್ನು ಕರಿಬೇವಿನ ಎಲೆಯಂತೆ ಎಸೆಯುತ್ತಾರೆ ಎಂದು ನಾನು ಮತ್ತೆ ಮತ್ತೆ ಹೇಳುತ್ತೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಿಂಡನ್ಬರ್ಗ್ ವರದಿ ವಿಚಾರ; ಅದಾನಿಯನ್ನು ಗುರಿಯಾಗಿಸುವಂತೆ ಕಾಣುತ್ತಿದೆ: ಶರದ್ ಪವಾರ್
ಕೆಲ ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಅಲ್ಫೋನ್ಸ್ ಕಣ್ಣಂತಾನಂ ಮತ್ತು ಟಾಮ್ ವಡಕ್ಕನ್ ಅವರಂತಹ ನಾಯಕರನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅಜಿತ್ ಆಂಟನಿ, ಬಿಜೆಪಿ ಎಲ್ಲರನ್ನೂ ತಾತ್ಕಾಲಿಕವಾಗಿ ಬಳಸಿಕೊಳ್ಳುತ್ತದೆ ಮತ್ತು ಬಳಸಿದ ಕರಿಬೇವಿನ ಎಲೆಗಳಂತೆ ಹೊರಹಾಕುತ್ತದೆ ಎಂದು ಹೇಳಿದರು.
ಗುರುವಾರ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಅನಿಲ್ ಆಂಟನಿ ಬಿಜೆಪಿ ಸೇರಿದ್ದರು. ಅನಿಲ್ ಆಂಟನಿ ಬಿಜೆಪಿ ಸೇರಿರುವ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸದ ಎಕೆ ಆಂಟನಿ ಮಗನದ್ದು “ತಪ್ಪು” ನಿರ್ಧಾರ ಎಂದು ಹೇಳಿದ್ದರು. ಬಿಜೆಪಿ ಸೇರುವ ಅನಿಲ್ ಅವರ ನಿರ್ಧಾರದಿಂದ ನನಗೆ ತೀವ್ರ ನೋವಾಗಿದೆ. ಇದು ತಪ್ಪು ನಿರ್ಧಾರ ಎಂದಿದ್ದಾರೆ ಅವರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ