ಲಖನೌ: ಮೂರು ಕೃಷಿ ಕಾನೂನುಗಳ(farm laws) ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (SKM) ಸೋಮವಾರ ಲಖನೌನಲ್ಲಿ ಕಿಸಾನ್ ಮಹಾಪಂಚಾಯತ್ (Kisan Mahapanchayat) ನಡೆಸಿದೆ. ಶುಕ್ರವಾರದಂದು ಕೇಂದ್ರವು ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸುವ ಮೊದಲು ಮಹಾಪಂಚಾಯತ್ ಅನ್ನು ಯೋಜಿಸಲಾಗಿತ್ತು. ಭಾನುವಾರ ನಡೆದ ಸಭೆಯಲ್ಲಿ ರೈತರು ಯೋಜಿತ ರೀತಿಯಲ್ಲಿ ಮಹಾಪಂಚಾಯತ್ ಮುಂದುವರಿಸಲು ನಿರ್ಧರಿಸಿದರು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಜಮಾಯಿಸಿದ್ದು, ಇತರ ವಿಷಯಗಳ ಜೊತೆಗೆ ಕನಿಷ್ಠ ಬೆಂಬಲ ಬೆಲೆಯ (MSP) ಕಾನೂನು ಖಾತರಿಗಾಗಿ ತಮ್ಮ ಬೇಡಿಕೆಯೊಡ್ಡಿದ್ದಾರೆ. ಮಹಾಪಂಚಾಯತ್‌ನಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ (Rakesh Tikait) ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರವೂ ಇನ್ನೂ ಹಲವು ಸಮಸ್ಯೆಗಳು ಇತ್ಯರ್ಥವಾಗಬೇಕಿದೆ. ರೈತರಿಗಾಗಿ ರಾಷ್ಟ್ರವ್ಯಾಪಿ ಚಳವಳಿ ಶಾಂತಿಯುತವಾಗಿ ಮುಂದುವರಿಯಲಿದೆ ಎಂದರು.
“ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ ನಂತರ, ಸರ್ಕಾರವು ರೈತರೊಂದಿಗೆ ಮಾತನಾಡಲು ಬಯಸುವುದಿಲ್ಲ ಎಂದು ತೋರುತ್ತದೆ. ಸರ್ಕಾರವು ಕಾನೂನುಗಳನ್ನು ನಿಜವಾದ ಅರ್ಥದಲ್ಲಿ ಹಿಮ್ಮೆಟ್ಟಿಸಿದೆ ಎಂದು ಸ್ಪಷ್ಟಪಡಿಸಬೇಕು. ನಮ್ಮೊಂದಿಗೆ ಮಾತನಾಡಬೇಕು, ಹಾಗಾದರೆ ಮಾತ್ರ ನಾವು ನಮ್ಮ ಹಳ್ಳಿಗಳಿಗೆ ಮರಳಬಹುದು ಎಂದು ಎಂದು ರಾಕೇಶ್ ಟಿಕಾಯತ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
#liveupdate किसान महापंचायत लखनऊ में किसान साथियों द्वारा किए गये स्वागत की तस्वीरें आप सभी के साथ साझा कर रहा हूं ।#FarmersProtests pic.twitter.com/3IxrSG7YEs
— Rakesh Tikait (@RakeshTikaitBKU) November 22, 2021
ರೈತರ ಇತರೆ ಬೇಡಿಕೆಗಳು
ಭಾನುವಾರ ಎಸ್‌ಕೆಎಂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದು, ರೈತರ ಆರು ಬಾಕಿ ಇರುವ ಬೇಡಿಕೆಗಳನ್ನು ಪರಿಹರಿಸಲು ಮಾತುಕತೆಯನ್ನು ಪುನರಾರಂಭಿಸುವಂತೆ ವಿನಂತಿಸಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿಯ ಜೊತೆಗೆ, ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವಂತೆಯೂ ಅವರು ಒತ್ತಾಯಿಸಿದ್ದಾರೆ. “ಎಂಎಸ್‌ಪಿ, ಬೀಜಗಳು, ಡೈರಿ ಮತ್ತು ಮಾಲಿನ್ಯದ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ” ಎಂದು ರಾಕೇಶ್ ಟಿಕಾಯತ್ ಹೇಳಿದರು.
ರಾಷ್ಟ್ರೀಯ ಕಿಸಾನ್ ಮಂಚ್‌ನ ಅಧ್ಯಕ್ಷ ಶೇಖರ್ ದೀಕ್ಷಿತ್, “ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಯವರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆ ಮಾಡಿದ್ದಾರೆ, ಅಲ್ಲಿ ಬಿಜೆಪಿ ತನ್ನ ಕೈಯಿಂದ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ” ಎಂದು ಹೇಳಿದರು.
ಶುಕ್ರವಾರ ಪ್ರಧಾನಿ ಮೋದಿಯವರ ಘೋಷಣೆಯಿಂದ, ರೈತ ಮುಖಂಡರು ಮೂರು ಕಾನೂನುಗಳನ್ನು ಔಪಚಾರಿಕವಾಗಿ ರದ್ದುಗೊಳಿಸುವವರೆಗೆ ಪ್ರತಿಭಟನಾಕಾರರು ಕದಲುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಸೋಮವಾರ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್, “ಪ್ರಧಾನಿ ಮೋದಿ ಕ್ಷಮೆಯಾಚಿಸಿದ್ದಾರೆ, ಅದರ ಅಗತ್ಯವಿಲ್ಲ, ಅವರು ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಹರಿಸುವ ಅವಶ್ಯಕತೆಯಿದೆ” ಎಂದು ಹೇಳಿದರು. ನೂರಾರು ಪ್ರತಿಭಟನಾಕಾರರು ನವೆಂಬರ್ 2020 ರಿಂದ ದೆಹಲಿಯ ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನು ಹಿಂತೆಗೆದುಕೊಳ್ಳುವ ಮಸೂದೆಗಳನ್ನು ಕೇಂದ್ರ ಬುಧವಾರ ಅನುಮೋದಿಸುವ ಸಾಧ್ಯತೆ: ವರದಿ