ತಿರುಪತಿ: ತಿರುಮಲ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯವನ್ನು ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 19ರಿಂದ ರಾತ್ರಿ 11ಗಂಟೆವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಹಿಂದೆ ದೇವಸ್ಥಾನದಲ್ಲಿ ರಾತ್ರಿ 10 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಅದನ್ನೀಗ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಹೆಚ್ಚು ಮಾಡಿದೆ. ಇನ್ನುಮುಂದೆ ಯಾತ್ರಾರ್ಥಿಗಳು ರಾತ್ರಿ 11-11.30ರವರೆಗೂ ದೇವರ ದರ್ಶನ ಪಡೆಯಬಹುದು. ರಾತ್ರಿ 12ಗಂಟೆಗೆ ದೇಗುಲದ ಬಾಗಿಲು ಮುಚ್ಚಲಿದ್ದು, ಅದಕ್ಕೂ ಮುನ್ನ ಸಮಾರೋಪ ಕಾರ್ಯಕ್ರಮ ಏಕಾಂತ ಸೇವೆ ನಡೆಯಲಿದೆ.
ತಿರುಮಲ ದೇವಸ್ಥಾನಕ್ಕೆ ಪ್ರತಿನಿತ್ಯ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದಿನವೊಂದಕ್ಕೆ ಸರಾಸರಿ 25 ಸಾವಿರ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ದರ್ಶನ ಸಮಯವನ್ನು ವಿಸ್ತರಿಸುವ ಅನಿವಾರ್ಯತೆಯೂ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಶನಿವಾರ ಒಂದೇ ದಿನ 29,621 ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಆಗಮಿಸಿದ್ದರು. ತಿರುಮಲ ಶನಿವಾರದ ನಿಮಿತ್ತ ದೇವಸ್ಥಾನ ಹೆಚ್ಚುವರಿಯಾಗಿ 800 ಟೈಂ ಸ್ಲಾಟೆಡ್ ಸರ್ವ ದರ್ಶನ ಟೋಕನ್ ಬಿಡುಗಡೆ ಮಾಡಿದ್ದರಿಂದ ಅಂದು ಅಷ್ಟುಪ್ರಮಾಣದ ಜನರು ಆಗಮಿಸಿದ್ದರು ಎನ್ನಲಾಗಿದೆ.
ಇನ್ನು ಈ ಬಗ್ಗೆ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದು, ಉಚಿತ ದರ್ಶನ ಟೋಕನ್ಗಳ ಸಂಖ್ಯೆಯನ್ನು ಶೀಘ್ರದಲ್ಲೇ ಏರಿಸಲಾಗುವುದು ಎಂದಿದ್ದಾರೆ. ಹಾಗೇ 300 ರೂ.ಬೆಲೆಯ ಟಿಕೆಟ್ಗಳ ಅಕ್ಟೋಬರ್ ಕೋಟಾವನ್ನು ಅಕ್ಟೋಬರ್ 23ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಭಕ್ತರು ಟಿಟಿಡಿ ವೆಬ್ಸೈಟ್ನಲ್ಲಿ ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದೂ ದೇಗುಲ ಆಡಳಿತ ಮಂಡಳಿ ತಿಳಿಸಿದೆ. ಸರ್ವದರ್ಶನ ಟೋಕನ್ಗಳು ಆನ್ಲೈನ್ನಲ್ಲಿ ಅಕ್ಟೋಬರ್ 24ರ ಬೆಳಗ್ಗೆ 9ಗಂಟೆಯಿಂದ ಲಭ್ಯವಾಗಲಿವೆ. ಒಂದು ದಿನದಲ್ಲಿ ಉಚಿತ ದರ್ಶನಕ್ಕೆ 2000 ಟೋಕನ್ಗಳನ್ನು ಮಾತ್ರ ಮೀಸಲಿಡಲಾಗಿತ್ತು. ಅದನ್ನೀಗ 8000ಕ್ಕೆ ಏರಿಸಲು ಟಿಟಿಡಿ ನಿರ್ಧರಿಸಿದೆ.
ವಿವಾಹಿತ ಗ್ರಾಮ ಲೆಕ್ಕಿಗನೊಂದಿಗೆ ತಹಶೀಲ್ದಾರ್ ಮದುವೆ; ಚಿಕ್ಕಮಗಳೂರು ಡಿಸಿಯಿಂದ ಗೀತಾಗೆ ನೋಟಿಸ್
Published On - 1:09 pm, Tue, 21 September 21