ಚಂಡಿಗಢ್: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್(Amarinder Singh) ಇದೀಗ ಕಾಂಗ್ರೆಸ್ ಪಕ್ಷದ ಮೇಲೆಯೇ ಮುನಿಸಿಕೊಂಡಂತೆ ಇದೆ. ತಾವು ಅವಮಾನವನ್ನು ಸಹಿಸಲಾಗದೆ ಮುಖ್ಯಮಂತ್ರಿ ಹುದ್ದೆಯನ್ನು ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದ ಕ್ಯಾಪ್ಟನ್, ಈಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಮತ್ತು ಪಂಜಾಬ್ ಕಾಂಗ್ರೆಸ್ ಪ್ರದೇಶ ಸಮಿತಿ ಮುಖ್ಯಸ್ಥ ನವಜೋತ್ ಸಿಂಗ್ ಮತ್ತು ಇಡೀ ಗಾಂಧಿ ಕುಟುಂಬಕ್ಕೆ ತಿರುಗೇಟು ನೀಡಿದ್ದಾರೆ.
‘ರಾಜಕಾರಣದಲ್ಲಿ ಸಿಟ್ಟಿಗೆ ಅವಕಾಶ ಇಲ್ಲ. ಕೋಪ ಮಾಡಿಕೊಂಡರೆ ನಡೆಯುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ಕಾಂಗ್ರೆಸ್ನಂಥ ಹಳೆಯ ಮತ್ತು ದೊಡ್ಡ ಪಕ್ಷದಲ್ಲಿ ಅವಮಾನ, ಅಗೌರವಕ್ಕೆ ಅವಕಾಶ ಇದೆಯೇ? ನನ್ನಂಥ ಹಿರಿಯ ನಾಯಕನನ್ನು ಕಾಂಗ್ರೆಸ್ ಹೀಗೆ ಅವಮಾನಯುತವಾಗಿ ನಡೆಸಿಕೊಳ್ಳಬಹುದೇ? ನನಗೇ ಹೀಗಾದರೆ, ಕಾರ್ಯಕರ್ತರು ಏನೆಲ್ಲ ಅನುಭವಿಸಬೇಕಾಗಬಹುದು’ ಎಂದು ಇಡೀ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮರಿಂದರ್ ಸಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುಪ್ರಿಯಾ ಶ್ರೀನೇತ್, ರಾಜಕಾರಣದಲ್ಲಿ ಸಿಟ್ಟು, ಅಸೂಯೆ, ವೈರತ್ವ, ವೈಯಕ್ತಿಕ ಟೀಕೆ, ದ್ವೇಷಗಳಿಗೆ ಅವಕಾಶ ಇಲ್ಲ. ಅವರು ಹುದ್ದೆ ಬಿಡುವುದಾದರೆ ಬಿಡಲಿ. ಆ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ. ವಯಸ್ಸಾದವರು ಹೀಗೆ ಸದಾ ಕೋಪಗೊಳ್ಳುತ್ತಾರೆ ಮತ್ತು ಏನೇನನ್ನೋ ಹೇಳುತ್ತಾರೆ. ಹಾಗೇ. ನಾವು ಅಮರಿಂದರ್ ಸಿಂಗ್ ಸಿಟ್ಟು, ವಯಸ್ಸು, ಅನುಭವಕ್ಕೆ ಗೌರವ ಕೊಡುತ್ತೇವೆ. ಕಾಂಗ್ರೆಸ್ ಅವರನ್ನು 9 ವರ್ಷದ 9 ತಿಂಗಳುಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಿದೆ’ ಎಂದು ಹೇಳಿದ್ದರು.
ಪಂಜಾಬ್ನಲ್ಲಿ ವಿಧಾನಸಭೆ ಹತ್ತಿರ ಬರುತ್ತಿರುವಾಗಲೇ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬಹುಕಾಲದ ಜಗಳಕ್ಕೆ ಪರಿಹಾರವಾಗಿ ಅಮರಿಂದರ್ ಸಿಂಗ್ ಅವರೇ ಹುದ್ದೆಯಿಂದ ಕೆಳಗಿಳಿಯುವಂತಾಗಿದೆ. ಇನ್ನು ಸಿಎಂ ಹುದ್ದೆ ಬಿಟ್ಟ ನಂತರವೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನವಜೋತ್ ಸಿಂಗ್ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: 6ರಿಂದ ದ್ವಿತೀಯ ಪಿಯುಸಿವರೆಗೆ ಸಂಪೂರ್ಣ ಹಾಜರಾತಿಗೆ ಅವಕಾಶ, ವಾರದಲ್ಲಿ 5 ದಿನ ತರಗತಿ: ಸಿಎಂ ಬೊಮ್ಮಾಯಿ
ಎನ್ಡಿಎ, ನೌಕಾದಳ ಅಕಾಡೆಮಿ ಪರೀಕ್ಷೆಗೆ ಅವಿವಾಹಿತ ಮಹಿಳೆಯರಿಗೆ ಅವಕಾಶ; ಯುಪಿಎಸ್ಸಿಯಿಂದ ಅರ್ಜಿ ಆಹ್ವಾನ
(There is space for humiliation and insult Congress Says Amarinder Singh)