ಒಬಾಮ, ಟ್ರಂಪ್ ಬಳಿಕ ಜೋ ಬೈಡೆನ್ ಜತೆ ಮಾತುಕತೆ; ಪ್ರಧಾನಿ ಮೋದಿ ಭೇಟಿ ಆಗುತ್ತಿರುವ ಅಮೆರಿಕಾದ ಮೂರನೇ ಅಧ್ಯಕ್ಷ

ಬರಾಕ್ ಒಬಾಮಾ ಹಾಗೂ ಡೊನಾಲ್ಡ್ ಟ್ರಂಪ್ ಇಬ್ಬರೂ ಬೇರೆ ಬೇರೆ ಪಕ್ಷಗಳಿಗೆ ಸೇರಿದವರು. ಆದರೆ, ಇಬ್ಬರೊಂದಿಗೂ ಪ್ರಧಾನಿ ಮೋದಿ ಉತ್ತಮ ಸಂಬಂಧ ಸಾಧಿಸಿದ್ದರು. ಈಗ ಮೂರನೇ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ಮೋದಿ ಸ್ನೇಹದ ಹಸ್ತ ಚಾಚಿದ್ದಾರೆ.

ಒಬಾಮ, ಟ್ರಂಪ್ ಬಳಿಕ ಜೋ ಬೈಡೆನ್ ಜತೆ ಮಾತುಕತೆ; ಪ್ರಧಾನಿ ಮೋದಿ ಭೇಟಿ ಆಗುತ್ತಿರುವ ಅಮೆರಿಕಾದ ಮೂರನೇ ಅಧ್ಯಕ್ಷ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಪ್ರಧಾನಿ ನರೇಂದ್ರ ಮೋದಿ
S Chandramohan

| Edited By: ganapathi bhat

Sep 24, 2021 | 7:01 PM

ದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕಾದ ಮೂರನೇ ಅಧ್ಯಕ್ಷರ ಜೊತೆಗೆ ರಾಜತಾಂತ್ರಿಕವಾಗಿ ವ್ಯವಹರಿಸುವ ಅವಕಾಶ ಸಿಕ್ಕಿದೆ. ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಬಳಿಕ ಈಗ ಜೋ ಬೈಡೆನ್​ವರೆಗೂ ಮೂವರು ಅಮೆರಿಕಾದ ಅಧ್ಯಕ್ಷರ ಜೊತೆಗೆ ಮೋದಿ ಸ್ನೇಹದ ಹಸ್ತ ಚಾಚಿದ್ದಾರೆ. ಬರಾಕ್ ಒಬಾಮಾ ಹಾಗೂ ಡೊನಾಲ್ಡ್ ಟ್ರಂಪ್ ಜೊತೆಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದ ಮೋದಿ, ಈಗ ಜೋ ಬೈಡೆನ್ ಜೊತೆಗೆ ಎಂಥಾ ಭಾಂಧವ್ಯ ಹೊಂದುತ್ತಾರೆ ಎಂಬ ಬಗ್ಗೆ ಕುತೂಹಲ ಇದೆ.

ನಮ್ಮ ದೇಶದ ರಾಜಕಾರಣದಲ್ಲಿ ಯಾರೂ ಶಾಶ್ವತ ವೈರಿಗಳು ಇಲ್ಲ. ಶಾಶ್ವತ ಮಿತ್ರರೂ ಇಲ್ಲ ಎಂಬ ಮಾತಿದೆ. ಇದು ಅಂತಾರಾಷ್ಟ್ರೀಯ ರಾಜಕಾರಣಕ್ಕೂ ಅನ್ವಯಿಸುತ್ತದೆ. ಒಂದು ಕಾಲದಲ್ಲಿ ಬದ್ದವೈರಿಗಳಾಗಿದ್ದ ಕ್ಯೂಬಾ ಹಾಗೂ ಆಮೆರಿಕಾ ದೇಶಗಳೇ ಈಗ ಪರಸ್ಪರ ಸ್ನೇಹದ ಹಸ್ತ ಚಾಚಿವೆ. ಸ್ನೇಹಿತರಾಗಿದ್ದ ಚೀನಾ ಹಾಗೂ ಆಸ್ಟ್ರೇಲಿಯಾ ದೇಶಗಳು ಈಗ ವೈರಿಗಳಾಗಿವೆ. ಅಂತಾರಾಷ್ಟ್ರೀಯ ನಾಯಕರ ನಡುವೆಯೂ ಶಾಶ್ವತ ವೈರತ್ವ ಇಲ್ಲ. ಶಾಶ್ವತ ಮಿತ್ರತ್ವವೂ ಇಲ್ಲ. ಅಧಿಕಾರಕ್ಕೆ ಬಂದವರ ಜೊತೆಗೆ ತಮ್ಮ ದೇಶದ ಪ್ರತಿನಿಧಿಗಳಾಗಿ ವ್ಯವಹಾರವನ್ನು ನಡೆಸಲೇಬೇಕಾಗುತ್ತೆ. ಭಾರತದ ಪ್ರಧಾನಿ ನರೇಂದ್ರ ಮೋದಿ 2014 ರಿಂದ ಭಾರತದ ಪ್ರಧಾನಿಯಾಗಿರುವುದರಿಂದ ಈಗ ಮೂರನೇ ಆಮೆರಿಕಾದ ಅಧ್ಯಕ್ಷರ ಜೊತೆಗೆ ದ್ವಿಪಕ್ಷೀಯ ಭಾಂಧವ್ಯ ವೃದ್ದಿ ಹಾಗೂ ಕ್ವಾಡ್ ನಾಯಕರ ಸಭೆಯನ್ನು ನಡೆಸುತ್ತಿದ್ದಾರೆ.

ಬರಾಕ್ ಒಬಾಮಾ ಹಾಗೂ ಡೊನಾಲ್ಡ್ ಟ್ರಂಪ್ ಇಬ್ಬರೂ ಬೇರೆ ಬೇರೆ ಪಕ್ಷಗಳಿಗೆ ಸೇರಿದವರು. ಆದರೆ, ಇಬ್ಬರೊಂದಿಗೂ ಪ್ರಧಾನಿ ಮೋದಿ ಉತ್ತಮ ಸಂಬಂಧ ಸಾಧಿಸಿದ್ದರು. ಈಗ ಮೂರನೇ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ಮೋದಿ ಸ್ನೇಹದ ಹಸ್ತ ಚಾಚಿದ್ದಾರೆ.

ಬರಾಕ್ ಒಬಾಮಾಗೆ ಮೋದಿ ಚಹಾ ಅತಿಥ್ಯ ಬರಾಕ್ ಒಬಾಮಾ , 2015 ರ ಜನವರಿ 26ರ ಗಣರಾಜ್ಯೋತ್ಸವ ಅತಿಥಿಯಾಗಿ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದರು. ಆಗ ದೆಹಲಿಯ ಹೈದರಾಬಾದ್ ಹೌಸ್​ನಲ್ಲಿ ಪ್ರಧಾನಿ ಮೋದಿಯೇ ಬರಾಕ್ ಒಬಾಮಾಗೆ ಚಹಾ ಮಾಡಿಕೊಟ್ಟಿದ್ದರು. ಇಬ್ಬರೂ ಹೈದರಾಬಾದ್ ಹೌಸ್​ನ ಹುಲ್ಲುಹಾಸಿನ ಮೇಲೆ ವಾಕ್ ಮಾಡುತ್ತಾ ಮಾತುಕತೆ ನಡೆಸಿದ್ದರು. ಈ ಮೂಲಕ ಬರಾಕ್ ಒಬಾಮಾ ಜೊತೆಗೆ ತಮಗೆ ಉತ್ತಮ ಬಾಂಧವ್ಯ ಇದೆ ಎನ್ನುವುದನ್ನು ಭಾರತ ಹಾಗೂ ಜಗತ್ತಿಗೆ ತೋರಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ನಡೆಸಿದ್ದರು. ಬರಾಕ್ ಒಬಾಮಾ ಪ್ರಧಾನಿ ಮೋದಿ ಅವರನ್ನ ನನ್ನ ಸ್ನೇಹಿತ ಎಂದೇ ಕರೆಯುತ್ತಿದ್ದರು.

ಡೊನಾಲ್ಡ್ ಟ್ರಂಪ್ ಜೊತೆಗೆ ಉತ್ತಮ ಭಾಂಧವ್ಯ 2020ರ ಡಿಸೆಂಬರ್​ನಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಆಮೆರಿಕಾಕ್ಕೆ ಭೇಟಿ ನೀಡಿದ್ದರು. ಆಗಿನ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಿಪಬ್ಲಿಕನ್ ಪಕ್ಷಕ್ಕೆ ಸೇರಿದವರು. 2019 ರ ಸೆಪ್ಟೆಂಬರ್ 23 ರಂದು ಆಮೆರಿಕಾದ ಹೂಸ್ಟನ್ ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಮೋದಿ ಕೈ ಕೈ ಹಿಡಿದು ವಾಕ್ ಮಾಡುತ್ತಾ, ಸ್ಟೇಡಿಯಯನಲ್ಲಿ ಸೇರಿದ್ದ ಜನರತ್ತ ಕೈ ಬೀಸಿದ್ದರು. ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂದು ಪ್ರಧಾನಿ ಮೋದಿ ಹೇಳಿದ್ದರು. 2020ರ ಆಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಟ್ರಂಪ್ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ. ಅಮೆರಿಕಾದಲ್ಲಿರುವ ಭಾರತೀಯ ಮೂಲದ ನಾಗರಿಕರು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವನ್ನು ಬೆಂಬಲಿಸಬೇಕೆಂದು ಪರೋಕ್ಷ ಸಂದೇಶ ರವಾನಿಸಿದ್ದರು. ಭಾರತದ ಪ್ರಧಾನಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಿದ್ದಾರೆ ಎಂಬ ಟೀಕೆಗಳು ಆಗ ವ್ಯಕ್ತವಾಗಿದ್ದವು.

ಟ್ರಂಪ್ ಪರ ಮೋದಿ ಪ್ರಚಾರ ನಡೆಸಿದ್ದು, ಜೋ ಬೈಡೆನ್ ವಿರುದ್ಧ ನಡೆಸಿದ ಪ್ರಚಾರವೇ ಆಗಿತ್ತು. ಅಮೆರಿಕಾದಲ್ಲಿ ಮತ್ತೆ ಟ್ರಂಪ್ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸದಲ್ಲಿ ಮೋದಿ ನಡೆಸಿದ ಪ್ರಚಾರವೂ ಕೈ ಕೊಟ್ಟಿತ್ತು. ಈಗ ಜೋ ಬೈಡೆನ್ ಆಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೈಡೆನ್ ವಿರುದ್ಧ ಪ್ರಚಾರ ನಡೆಸಿದ ಮೋದಿ ಈಗ ಬೈಡೆನ್ ಜೊತೆಗೆ ಸ್ನೇಹದ ಹಸ್ತ ಚಾಚುವುದು ಎರಡು ದೇಶಗಳ ಹಿತಾಸಕ್ತಿ ದೃಷ್ಟಿಯಿಂದ ಅಗತ್ಯವಾಗಿದೆ. ಭಾರತಕ್ಕೆ ಅಮೆರಿಕಾ ಬೇಕು. ಅದೇ ರೀತಿ ಅಮೆರಿಕಾಕ್ಕೂ ಭಾರತದ ಸ್ನೇಹ, ಭಾಂಧವ್ಯ ಬೇಕಾಗಿದೆ.

ಆದರೆ, 2019 ರಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿಯನ್ನು ನೋಡಲು ಸ್ಟೇಡಿಯಂನಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಡೋನಾಲ್ಡ್ ಟ್ರಂಪ್ ಕೂಡ ಮೋದಿಯನ್ನು ಹೊಗಳುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಮೋದಿ ಯಾವುದೇ ರಾಕ್ ಸ್ಟಾರ್​ಗೂ ಕಡಿಮೆ ಇಲ್ಲ ಎಂದಿದ್ದರು. ಇದರ ನೆನಪು ಈಗಲೂ ಭಾರತ ಹಾಗೂ ಅಮೆರಿಕಾದ ಜನರಿಗೆ ಇದೆ.

ಇಷ್ಟಕ್ಕೆ ಡೊನಾಲ್ಡ್ ಟ್ರಂಪ್ ಹೊಗಳಿಕೆ ನಿಂತಿರಲಿಲ್ಲ. ಪ್ರಧಾನಿ ಮೋದಿ ಅವರನ್ನು ಫಾದರ್ ಆಫ್ ನೇಷನ್ ಎಂದು ಕೂಡ ಕರೆದಿದ್ದರು. ಡೊನಾಲ್ಡ್ ಟ್ರಂಪ್‌ ಹೊಗಳಿಕೆ ಹಾಗೂ ಮೋದಿಯನ್ನು ಭಾರತದ ರಾಷ್ಟ್ರಪಿತ ಎಂದು ಕರೆದಿದ್ದು ಟೀಕೆಗೂ ಗುರಿಯಾಗಿತ್ತು. ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಒಳ್ಳೆಯ ಪ್ರೆಂಡ್ ಶಿಫ್ ಇತ್ತು. ಇದನ್ನು ಇಬ್ಬರೂ ನಾಯಕರು ಸಾರ್ವಜನಿಕವಾಗಿಯೇ ತೋರಿಸಿದ್ದರು. ಆದರೆ, ಆಗ್ಗಾಗ್ಗೆ ಡೊನಾಲ್ಡ್ ಟ್ರಂಪ್, ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಹೇಳಿದ್ದರು. ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರ ಮೂಗು ತೂರಿಸುವುದು ಭಾರತದ ನಿಲುವಿಗೆ ವಿರುದ್ಧವಾದದ್ದು. ಜೊತೆಗೆ ಭಾರತ ಅಮೆರಿಕಾದ ಬೈಕ್, ವಸ್ತುಗಳಿಗೆ ದುಬಾರಿ ತೆರಿಗೆ ವಿಧಿಸುತ್ತೆ ಎಂದು ಕೂಡ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಭಾರತೀಯ ಟೆಕ್ಕಿಗಳಿಗೆ ಎಚ್‌1ಬಿ ವೀಸಾ ನೀಡಿಕೆಗೆ ನಿರ್ಬಂಧಗಳನ್ನು ವಿಧಿಸಿದ್ದರು. ಹೀಗೆ ಕೆಲವು ಬಾರಿ ಡೋನಾಲ್ಡ್ ಟ್ರಂಪ್ ಭಾರತದ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದು ಉಂಟು. ಭಾರತದ ಹಿತಾಸಕ್ತಿಗೆ ಧಕ್ಕೆಯಾಗುವ ಕ್ರಮಗಳನ್ನು ಡೊನಾಲ್ಡ್ ಟ್ರಂಪ್ ಸರ್ಕಾರ ತೆಗೆದುಕೊಂಡಿತ್ತು.

ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ಇಬ್ಬರೂ ಬಲಪಂಥೀಯರು. ಇಬ್ಬರ ನಡುವೆ ಉತ್ತಮ ಸಂಬಂಧ ಇದ್ದರೂ, ಟ್ರಂಪ್ ಕಾಲದಲ್ಲೇ ಅಮೆರಿಕಾವು ಭಾರತಕ್ಕೆ ನೀಡಿದ್ದ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರದ ಸ್ಥಾನಮಾನವನ್ನು ಹಿಂತೆಗೆದುಕೊಂಡಿತ್ತು. ಇದರಿಂದ ಭಾರತಕ್ಕೆ ಅಮೆರಿಕಾದಿಂದ ಸಿಗುತ್ತಿದ್ದ ನೆರವು ಸ್ಥಗಿತವಾಗಿತ್ತು.

ಜೋ ಬೈಡೆನ್​ರಿಂದ ಭಾರತದ ನಡೆಗೆ ಆಕ್ಷೇಪ ಜೋ ಬೈಡೆನ್ ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದವರು. ಬರಾಕ್ ಒಬಾಮಾ ಆಮೆರಿಕಾದ ಅಧ್ಯಕ್ಷರಾಗಿದ್ದಾಗ, ಜೋ ಬೈಡೆನ್ ಆಮೆರಿಕಾದ ಉಪಾಧ್ಯಕ್ಷರಾಗಿದ್ದರು. ಆಗಲೂ ಜೋ ಬೈಡೆನ್ ಹಾಗೂ ಮೋದಿ ಭೇಟಿಯಾಗಿದ್ದರು. ಆದರೆ, ಜೋ ಬೈಡೆನ್ ಅವರ ಡೆಮಾಕ್ರಟಿಕ್ ಪಕ್ಷವು ಭಾರತದ ಕೆಲ ನಡೆಗೆ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದೆ. ಕಾಶ್ಮೀರದಲ್ಲಿ ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿದ್ದನ್ನು ಜೋ ಬೈಡೆನ್, ಕಮಲಾ ಹ್ಯಾರಿಸ್ ಆಕ್ಷೇಪಿಸಿದ್ದರು. ಡೆಮಾಕ್ರಟಿಕ್ ಪಕ್ಷವು ಉದಾರವಾದಿ ಚಿಂತನೆಯನ್ನು ಹೊಂದಿರುವ ಪಕ್ಷ. ಹೀಗಾಗಿ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ತತ್ವ, ಮೌಲ್ಯಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಆಕ್ಷೇಪಿಸಿದ್ದರು. ಇದಕ್ಕೆ ಭಾರತವು ವಿರೋಧ ವ್ಯಕ್ತಪಡಿಸಿತ್ತು. ಆದರೆ, ಈಗ ಇದೇ ಜೋ ಬೈಡೆನ್ ಹಾಗೂ ಕಮಲಾ ಹ್ಯಾರಿಸ್ ಸರ್ಕಾರದ ಜೊತೆಗೆ ಮೋದಿ ಸರ್ಕಾರವು ಸ್ನೇಹದ ಹಸ್ತವನ್ನು ಚಾಚಲೇಬೇಕಾಗಿದೆ. ಹಳೆಯದನ್ನು ಮರೆತು ಭವಿಷ್ಯದತ್ತ ಹೆಜ್ಜೆ ಹಾಕಲೇಬೇಕು. ಹೀಗಾಗಿಯೇ ಮೋದಿಗೆ ಶ್ವೇತ ಭವನದಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅತಿಥ್ಯ ನೀಡಿದ್ದಾರೆ. ಮೋದಿ ಕೂಡ ಕಮಲಾ ಹ್ಯಾರಿಸ್ ಆಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಸ್ಪೂರ್ತಿ ನೀಡಿದೆ ಎಂದು ಕೊಂಡಾಡಿದ್ದಾರೆ. ಭಾರತ- ಅಮೆರಿಕಾ ಭಾಂಧವ್ಯದಲ್ಲಿ ಜೋ ಬೈಡೆನ್ ಹಾಗೂ ಮೋದಿ ಹೊಸ ಅಧ್ಯಾಯ ಬರೆಯುತ್ತಾರಾ ಎಂಬ ಕುತೂಹಲ ಇದೆ.

ವಿಶೇಷ ವರದಿ: ಎಸ್. ಚಂದ್ರಮೋಹನ್, ನ್ಯಾಷನಲ್ ಬ್ಯೂರೊ ಮುಖ್ಯಸ್ಥರು, ಟಿವಿ9 ಕನ್ನಡ

ಇದನ್ನೂ ಓದಿ: PM Modi US Visit: ಕಮಲಾ ಹ್ಯಾರಿಸ್​ಗೆ ಭಾವನಾತ್ಮಕ ಉಡುಗೊರೆ ನೀಡಿದ ಪ್ರಧಾನಿ ಮೋದಿ; ತಾತ ಗೋಪಾಲನ್​ರನ್ನು ನೆನಪಿಸಿದ ಗಿಫ್ಟ್​

ಇದನ್ನೂ ಓದಿ: ಮೋದಿ ಅಮೆರಿಕಕ್ಕೆ ಹೋದರೂ ಬಿಡದ ರಾಕೇಶ್ ಟಿಕಾಯತ್​; ಪ್ರಧಾನಿ ವಿರುದ್ಧ ಜೋ ಬೈಡನ್​ ಬಳಿಯೇ ದೂರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada