ಅಮೆರಿಕಾದ ಶ್ವೇತ ಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ; ಚೀನಾ, ಕೊವಿಡ್, ಹವಾಮಾನ, ರಕ್ಷಣಾ ವಿಚಾರಗಳ ಚರ್ಚೆ

ಕ್ವಾಡ್ ನಾಯಕರ ಸಭೆಯಲ್ಲಿ ಹವಾಮಾನ ಬದಲಾವಣೆ, ಕೊವಿಡ್ ನಿಯಂತ್ರಣ, ಕೊರೊನಾ ಲಸಿಕೆಯ ಉತ್ಪಾದನೆ ಹಾಗೂ ಹಂಚಿಕೆ, ಸೈಬರ್ ಭದ್ರತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ.

ಅಮೆರಿಕಾದ ಶ್ವೇತ ಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ; ಚೀನಾ, ಕೊವಿಡ್, ಹವಾಮಾನ, ರಕ್ಷಣಾ ವಿಚಾರಗಳ ಚರ್ಚೆ
ಕ್ವಾಡ್​​ ಸಭೆಯಲ್ಲಿ ಭಾಗವಹಿಸಲಿರುವ ನಾಯಕರು
Follow us
S Chandramohan
| Updated By: ganapathi bhat

Updated on:Sep 24, 2021 | 10:59 PM

ದೆಹಲಿ: ಅಮೆರಿಕಾದ ಶ್ವೇತ ಭವನದಲ್ಲಿ ಇಂದು ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯಲಿದೆ. ಬದಲಾದ ಜಿಯೋ ಪೊಲಿಟಿಕಲ್ ಪರಿಸ್ಥಿತಿಯನ್ನು ನಿಭಾಯಿಸಲು ಕ್ವಾಡ್ ರಾಷ್ಟ್ರಗಳ ನಾಯಕರು ತಮ್ಮದೇ ಅದ ರಣತಂತ್ರ ರೂಪಿಸಬೇಕಾಗಿದೆ. ಜೊತೆಗೆ ಕ್ವಾಡ್ ಕೂಟದ ನಾಲ್ಕು ರಾಷ್ಟ್ರಗಳ ಕೆಲ ಸಮಸ್ಯೆಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಅಮೆರಿಕಾದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಶ್ವೇತ ಭವನದಲ್ಲಿ ಇಂದು ಪವರ್ ಪ್ಯಾಕ್ ಸಭೆಗಳು ನಡೆಯುತ್ತಿವೆ. ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಹಾಗೂ ಪ್ರಧಾನಿ ಮೋದಿ ನಡುವಿನ ದ್ವಿಪಕ್ಷೀಯ ಸಭೆಯ ಬಳಿಕ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯಲಿದೆ. ಕ್ವಾಡ್ರಲಾಟರಲ್ ಸೆಕ್ಯೂರಿಟಿ ಡೈಲಾಗ್​ನ ಸಂಕ್ಷಿಪ್ತ ರೂಪವೇ ಕ್ವಾಡ್‌. ಈ ಕ್ವಾಡ್ ಕೂಟದಲ್ಲಿ ಭಾರತ, ಅಮೆರಿಕಾ, ಜಪಾನ್ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ನಾಲ್ಕು ರಾಷ್ಟ್ರಗಳಿವೆ. ಈ ನಾಲ್ಕು ರಾಷ್ಟ್ರಗಳ ನಾಯಕರು ಶ್ವೇತ ಭವನದಲ್ಲಿ ಭಾರತೀಯ ಕಾಲಮಾನ ಇಂದು ರಾತ್ರಿ 11.30ಕ್ಕೆ ಭೇಟಿಯಾಗಿ ಸಭೆ ನಡೆಸಲಿದ್ದಾರೆ. ಕಳೆದ ವರ್ಷ ಕ್ವಾಡ್ ರಾಷ್ಟ್ರಗಳ ನಾಯಕರು ಕೊರೊನಾದ ಕಾರಣದಿಂದ ಪರಸ್ಪರ ಭೇಟಿಯಾಗಲು ಸಾಧ್ಯವಾಗದೇ, ವರ್ಚ್ಯುಯಲ್ ಆಗಿ ಸಭೆ ನಡೆಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್ ಹಾಗೂ ಜಪಾನ್ ಪ್ರಧಾನಿ ಯೋಶಿಹಿಧೆ ಸುಗಾ ಕ್ವಾಡ್ ರಾಷ್ಟ್ರಗಳ ನಾಯಕರು ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಲಿದ್ದಾರೆ. 2007 ರಲ್ಲಿ ಕ್ವಾಡ್ ರಚನೆಯಾದರೂ, ಇದರ ಬಗ್ಗೆ ನಾಲ್ಕು ದೇಶಗಳು 2017ರ ಬಳಿಕ ಹೆಚ್ಚಿನ ಮಹತ್ವ ನೀಡುತ್ತಿವೆ. ಏಕೆಂದರೆ, ದಕ್ಷಿಣ ಚೀನಾ ಸಮುದ್ರ, ಫೆಸಿಫಿಕ್ ಸಮುದ್ರ ಹಾಗೂ ಭಾರತದ ಸಮುದ್ರ ವಲಯದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾಗುತ್ತಿದೆ.

ಚೀನಾ ಪ್ರಾಬಲ್ಯ ಮಟ್ಟ ಹಾಕಲು ಕ್ವಾಡ್ ರಚನೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪ್ರಾಬಲ್ಯ ತಡೆಯಲು ಕ್ವಾಡ್ ಕೂಟ ರಚನೆಯಾಗಿದೆ. ಜೋ ಬೈಡೆನ್ ಅಮೆರಿಕಾದ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ಇದು. ಕಳೆದ ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಚೀನಾ ಜೊತೆಗೆ ಅಥವಾ ಬೇರೆ ಯಾವುದೇ ದೇಶದ ಜೊತೆಗೆ ಶೀತಲ ಸಮರ ಮುಂದುವರಿಸಲು ಬಯಸಲ್ಲ ಎಂದು ಹೇಳಿದ್ದಾರೆ. ಆದರೆ, ಚೀನಾದ ಪ್ರತಿಕೂಲ ಆರ್ಥಿಕ ಕ್ರಮಗಳು ಹಾಗೂ ಚೀನಾದ ಮಿಲಿಟರಿ ಅತಿಕ್ರಮಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಅಮೆರಿಕಾ ಈಗ ಕ್ವಾಡ್ ಮೂಲಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ ಜೋ ಬೈಡೆನ್ ಅವಧಿಯಲ್ಲಿ ಅಮೆರಿಕಾದ ವಿದೇಶಾಂಗ ನೀತಿ, ಮಿಲಿಟರಿ ನೀತಿಯೂ ಹೇಗಿರಲಿದೆ ಎಂಬುದರ ಬಗ್ಗೆ ಈಗ ಜಗತ್ತು ಎದುರು ನೋಡುತ್ತಿದೆ. ಇದರ ಬಗ್ಗೆ ಇಡೀ ಜಗತ್ತು ಗಮನ ಕೇಂದ್ರೀಕರಿಸಿದೆ.

ಕ್ವಾಡ್ ಸಭೆಯೂ ಚೀನಾ ಕೇಂದ್ರೀಕೃತವಾಗಿರಲಿದೆ. ಏಕೆಂದರೆ, ಜಗತ್ತಿನಲ್ಲಿ ಎರಡನೇ ಮಹಾಯುದ್ಧ ದೊಡ್ಡ ತಿರುವು ನೀಡಿದ ಯುದ್ಧ. ಜಗತ್ತಿನಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು ಹಿಂದೆ ಸರಿದು, ಜಗತ್ತಿನ ವಿವಿಧ ದೇಶಗಳಿಗೆ ಸ್ವಾತಂತ್ರ್ಯ ನೀಡಿದ್ದವು. ದೇಶಗಳ ಸಾರ್ವಭೌಮತ್ವ ಪಡೆದು ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗಲೇ, ಕಮ್ಯೂನಿಸ್ಟ್ ರಾಷ್ಟ್ರ ಚೀನಾ ತನ್ನ ಆಕ್ರಮಣಕಾರಿ ಧೋರಣೆಯಿಂದ ಬೇರೆ ಬೇರೆ ದೇಶಗಳ ಸಾರ್ವಭೌಮತ್ವಕ್ಕೆ ಸವಾಲು ಹಾಕತೊಡಗಿತು. ಚೀನಾದ ಆಕ್ರಮಣಕಾರಿ ಧೋರಣೆಯ ಸಂತ್ರಸ್ತ ರಾಷ್ಟ್ರಗಳ ಪೈಕಿ ಭಾರತವು ಒಂದು. ಚೀನಾ ದೇಶವು ತನ್ನ ನೆರೆಹೊರೆಯ 17 ದೇಶಗಳೊಂದಿಗೆ ಗಡಿ ವಿವಾದ ಹೊಂದಿರುವುದೇ ಅದರ ಆಕ್ರಮಣಕಾರಿ ಧೋರಣೆಗೆ ಸಾಕ್ಷಿಯಾಗಿದೆ. ಇಂಡೋ ಫೆಸಿಪಿಕ್ ವಲಯದಲ್ಲಿ ಚೀನಾ ದೇಶವು ಭೂಮಿ ಅತಿಕ್ರಮಣ ಹಾಗೂ ಸಮುದ್ರದಲ್ಲಿ ಅತಿಕ್ರಮಣ ಧೋರಣೆ ಅನುಸರಿಸುತ್ತಿದೆ. ಇಂಡೋ- ಫೆಸಿಫಿಕ್ ವಲಯದಲ್ಲಿ ಅಮೆರಿಕಾದ ಭೂಭಾಗ ಇಲ್ಲ. ಆದರೆ, ಇಂಡೋ ಫೆಸಿಫಿಕ್ ವಲಯದಲ್ಲಿ ಜಿಯೋ ಸ್ಟ್ರಾಟಜಿಕ್ ಕಾರಣಗಳಿಗಾಗಿ ಅಮೆರಿಕಾ ಬಾರಿ ಪ್ರಮಾಣದ ಹೂಡಿಕೆ ಮಾಡಿದೆ. ಈ ಕಾರಣಕ್ಕಾಗಿ ಅಮೆರಿಕಾ ದೇಶವು ದಕ್ಷಿಣ ಚೀನಾ ಸಮುದ್ರದಲ್ಲಿ ಸಾಕಷ್ಟು ನೌಕಾಪಡೆಯ ಕಾರ್ಯಾಚರಣೆಗಳನ್ನು ನಡೆಸಿದೆ. ಆದರೆ, ಚೀನಾ ದೇಶವು ದಕ್ಷಿಣ ಚೀನಾ ಸಮುದ್ರದ ಮೇಲೆ ತನಗೆ ಮಾತ್ರ ಹಕ್ಕಿದೆ ಎಂದು ಪ್ರತಿಪಾದಿಸುತ್ತಿದೆ.

ಕೋಲ್ಡ್ ವಾರ್ ಸಮಯದಲ್ಲಿ ಅಮೆರಿಕಾ ಹಾಗೂ ರಷ್ಯಾ ದೇಶಗಳು ಹಣಕಾಸು, ಮಿಲಿಟರಿ ನೆರವು ನೀಡುವ ಮೂಲಕ ತಮ್ಮ ಮಿತ್ರರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದವು. ಆದರೆ, ಚೀನಾ ತನ್ನ ನೀತಿಯನ್ನು ಒಪ್ಪದ ರಾಷ್ಟ್ರವನ್ನು ಶಿಕ್ಷಿಸುತ್ತೆ. ಇದಕ್ಕೆ ಆಸ್ಟ್ರೇಲಿಯಾವೇ ಉದಾಹರಣೆ. ಜೊತೆಗೆ ರಾಷ್ಟ್ರಗಳಿಗೆ ಸಾಲ ಕೊಟ್ಟು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿ, ಹಣ ಹಿಂತಿರುಗಿಸದ ರಾಷ್ಟ್ರದ ಭೂಭಾಗವನ್ನ ಕಬಳಿಸಿಬಿಡುತ್ತೆ. ಇದಕ್ಕೆ ಶ್ರೀಲಂಕಾ ದೇಶವೇ ಉತ್ತಮ ಉದಾಹರಣೆ. ಈಗ ಸಾಲ ಹಿಂತಿರುಗಿಸದ ಶ್ರೀಲಂಕಾದ ಬಂದರು ಪ್ರದೇಶವನ್ನು ಚೀನಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಆಸ್ಟ್ರೇಲಿಯಾ- ಚೀನಾ ಸಂಬಂಧ ಮೊದಲು ಚೆನ್ನಾಗಿಯೇ ಇತ್ತು. ಯಾವಾಗ ಆಸ್ಟ್ರೇಲಿಯಾ, ಕೊರೊನಾ ವೈರಸ್ ಮೂಲ ಚೀನಾ, ಇದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆಯಾಗಬೇಕೆಂದು ಹೇಳಿ, ಚೀನಾದ ವಿರುದ್ಧ ತಿರುಗಿಬಿದ್ದಿತ್ತೋ ಆಗಲೇ ಸಂಬಂಧ ಹದಗೆಟ್ಟಿತು. ಆಸ್ಟ್ರೇಲಿಯಾದಿಂದ ಚೀನಾಕ್ಕೆ ಅಮದು ಸ್ಥಗಿತಗೊಳಿಸಿದೆ. ಚೀನಾ ಸರ್ವಾಧಿಕಾರಿ, ಭೂಮಿ ವಿಸ್ತಾರವಾದ, ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಮಟ್ಟ ಹಾಕಲು ಕ್ವಾಡ್ ರಾಷ್ಟ್ರಗಳ ಕೂಟದಲ್ಲಿ ಚರ್ಚೆಯಾಗಲಿದೆ.

ಚೀನಾದಿಂದ ತಾಲಿಬಾನ್, ಉತ್ತರ ಕೊರಿಯಾಗೆ ಬೆಂಬಲ ಚೀನಾ ದೇಶ, ತಾಲಿಬಾನ್ ಉಗ್ರಗಾಮಿ ಸಂಘಟನೆ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ರಾಷ್ಟ್ರಗಳನ್ನು ಬೆಂಬಲಿಸುತ್ತಿದೆ. ಜೊತೆಗೆ ಭಯೋತ್ಪಾದಕರಿಗೆ ಆಶ್ರಯ, ಪೋತ್ಸಾಹ ನೀಡುವ ಪಾಕಿಸ್ತಾನವನ್ನು ಚೀನಾವೇ ಬೆಂಬಲಿಸುತ್ತಿದೆ. ಪಾಕಿಸ್ತಾನದ ಆರ್ಥಿಕತೆಯು ನಡೆಯುತ್ತಿರುವುದೇ ಚೀನಾದ ಬೆಂಬಲದಿಂದ. ಇದನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗವಾಗಿಯೇ ಅನೇಕ ಬಾರಿ ಒಪ್ಪಿಕೊಂಡಿದ್ದಾರೆ. ಉತ್ತರ ಕೊರಿಯಾದ ಅಂತಾರಾಷ್ಟ್ರೀಯ ನಿರ್ಬಂಧ ವಿಧಿಸದಂತೆ, ಅನೇಕ ಬಾರಿ ಚೀನಾ ತಡೆದಿದೆ.

ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಕ್ವಾಡ್ ನಾಯಕರ ಸಭೆಯಲ್ಲಿ ಹವಾಮಾನ ಬದಲಾವಣೆ, ಕೊವಿಡ್ ನಿಯಂತ್ರಣ, ಕೊರೊನಾ ಲಸಿಕೆಯ ಉತ್ಪಾದನೆ ಹಾಗೂ ಹಂಚಿಕೆ, ಸೈಬರ್ ಭದ್ರತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ. ಕಳೆದ ಕ್ವಾಡ್ ನಾಯಕರ ಸಭೆಯಲ್ಲಿ 2022ರ ಅಂತ್ಯದ ವೇಳೆಗೆ ನೂರು ಕೋಟಿ ಡೋಸ್ ಕೊರೊನಾ ಲಸಿಕೆಯನ್ನು ಉತ್ಪಾದಿಸಿ ಹಂಚಿಕೆ ಮಾಡಬೇಕೆಂಬ ಬಗ್ಗೆ ಚರ್ಚೆಯಾಗಿತ್ತು. ಹೀಗಾಗಿ ಇಂದು ರಾತ್ರಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಭಾರತದಲ್ಲಿ ಕೊರೊನಾ ಲಸಿಕೆಗಳ ಉತ್ಪಾದನೆಗೆ ಅಮೆರಿಕಾದ ಸಹಕಾರ, ಬೆಂಬಲವನ್ನು ಭಾರತ ನಿರೀಕ್ಷೆ ಮಾಡುತ್ತಿದೆ. ವಿಶೇಷವಾಗಿ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಅಮೆರಿಕಾದ ನೋವಾವ್ಯಾಕ್ಸ್ ಲಸಿಕೆಯನ್ನು ಭಾರತದಲ್ಲಿ ಕೋವಾವ್ಯಾಕ್ಸ್ ಹೆಸರಿನಲ್ಲಿ ಉತ್ಪಾದಿಸುತ್ತಿದೆ. ಇದರ ಕಚ್ಚಾವಸ್ತುಗಳನ್ನು ಅಮೆರಿಕಾ ಪೂರೈಕೆ ಮಾಡುವುದರ ಬಗ್ಗೆ ಚರ್ಚೆಯಾಗಲಿದೆ. ಇದೇ ರೀತಿ ಹೈದರಾಬಾದ್‌ನ ಬಯೋಲಾಜಿಕಲ್ ಇ ಕಂಪನಿಯು ಅಮೆರಿಕಾದ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಇದೆಲ್ಲದರ ಬಗ್ಗೆ ಅಮೆರಿಕಾದ ಸಹಕಾರ, ನೆರವನ್ನು ಭಾರತ ನಿರೀಕ್ಷಿಸುತ್ತಿದೆ.

ಕ್ವಾಡ್ ಶೃಂಗಸಭೆಗೂ ಮುನ್ನ ಭಾರತವನ್ನು ಅಕಾಸ್ ಕೂಟದಿಂದ ಹೊರಗಿಟ್ಟಿರುವುದನ್ನು ಭಾರತ ಹಾಗೂ ಜಪಾನ್ ದೇಶಗಳೆರೆಡೂ ಸ್ವಾಗತಿಸಿವೆ. ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ದೇಶಗಳು ಸೇರಿ ಅಕಾಸ್ ಎನ್ನುವ ತ್ರಿಪಕ್ಷೀಯ ಕೂಟವನ್ನು ರಚಿಸಿಕೊಂಡಿವೆ. ಇದಕ್ಕೆ ಭಾರತವು ಹೆಚ್ಚಿನ ಮಹತ್ವ ಕೊಟ್ಟಿಲ್ಲ. ಭಾರತ ಕ್ವಾಡ್ ನಲ್ಲಿ ಈಗಾಗಲೇ ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಕೂಟ ರಚಿಸಿಕೊಂಡಿದೆ. ಜೊತೆಗೆ ರಕ್ಷಣಾ ಸಾಮಗ್ರಿಗಳ ಅಮದು ಮಾಡಿಕೊಳ್ಳಲು ಹೆಚ್ಚಿನದಾಗಿ ರಷ್ಯಾ, ಫ್ರಾನ್ಸ್, ಇಸ್ರೇಲ್ ನಂಥ ದೇಶಗಳನ್ನು ಅವಲಂಬಿಸಿದೆ. ಅಕಾಸ್ ಕೂಟ ರಚನೆಯಿಂದ ಆಸ್ಟ್ರೇಲಿಯಾಕ್ಕೆ ಹೆಚ್ಚಿನ ಅನುಕೂಲಗಳಿವೆ. ಆಸ್ಟ್ರೇಲಿಯಾ ಪರಮಾಣು ಜಲಂತಾರ್ಗಾಮಿ ನೌಕೆಗಳನ್ನು ಹೊಂದಲಿದೆ. ಸಮುದ್ರದಲ್ಲಿ ದೂರದ ಪ್ರದೇಶದವರೆಗೂ ಪೆಟ್ರೋಲಿಂಗ್ ನಡೆಸಲು ಆಸ್ಟ್ರೇಲಿಯಾಕ್ಕೆ ಅವಕಾಶ ಸಿಗಲಿದೆ. ಇದರಿಂದ ಚೀನಾದ ನೌಕಾಪಡೆಯ ವಿರುದ್ಧ ಮೇಲುಗೈ ಸಾಧಿಸಲು ಆಸ್ಟ್ರೇಲಿಯಾಕ್ಕೆ ಅವಕಾಶ ಸಿಗುತ್ತೆ. ಆದರೇ, ಅಕಾಸ್ ರಚನೆಯ ಬಳಿಕ ಆಸ್ಟ್ರೇಲಿಯಾ ದೇಶವು ಫ್ರಾನ್ಸ್ ನಿಂದ ನ್ಯೂಕ್ಲಿಯರ್ ಜಲಾಂತಾರ್ಗಾಮಿ ನೌಕೆ ಖರೀದಿಯ ಡೀಲ್ ಅನ್ನು ರದ್ದುಪಡಿಸಿದೆ. ಅಮೆರಿಕಾದಿಂದ ನ್ಯೂಕ್ಲಿಯರ್ ಜಲಾಂತರ್ಗಾಮಿ ನೌಕೆ ಖರೀದಿಗೆ ನಿರ್ಧರಿಸಿದೆ. ಇದರಿಂದಾಗಿ ಅಮೆರಿಕಾದ ಜೋ ಬೈಡೆನ್ ಸರ್ಕಾರವು ತಮ್ಮ ಬೆನ್ನಿಗೆ ಚೂರಿ ಇರಿದಿದೆ ಎಂದು ಫ್ರಾನ್ಸ್ ದೇಶ, ಅಮೆರಿಕಾದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಫ್ರಾನ್ಸ್ ಹಾಗೂ ಅಮೆರಿಕಾ ನಡುವಿನ ಈ ಟೆನ್ಷನ್ ಈಗ ಶಮನವಾಗಿದೆ, ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ನೇರವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಜೊತೆಗೆ ಮಾತನಾಡಿ ಟೆನ್ಷನ್ ಶಮನಗೊಳಿಸಿದ್ದಾರೆ.

ಅಮೆರಿಕಾ-ಇಂಗ್ಲೆಂಡ್, ಆಸ್ಟ್ರೇಲಿಯಾದ ತ್ರಿಪಕ್ಷೀಯ ಅಕಾಸ್ ಕೂಟವನ್ನು ಭಾರತ ಹಾಗೂ ಜಪಾನ್ ಸ್ವಾಗತಿಸಿರುವುದು ಏಕೆಂದರೇ, ಮುಂದಿನ 50 ವರ್ಷಗಳಲ್ಲಿ ನೌಕಾಶಕ್ತಿಯ ಪಥವೇ ಬದಲಾವಣೆ ಆಗಲಿದೆ. ಚೀನಾ ದೊಡ್ಡ ಮಟ್ಟದಲ್ಲಿ ನೌಕಾಶಕ್ತಿಯನ್ನು ಬೆಳೆಸುತ್ತಿರುವುದರಿಂದ ಏಷ್ಯಾದಲ್ಲಿ ಅಕಾಸ್ ಕೂಟವನ್ನು ಭಾರತ ಹಾಗೂ ಜಪಾನ್ ಸ್ವಾಗತಿಸಿವೆ ಎಂದು ಅಮೆರಿಕಾದ ಜಾರ್ಜ್ ಡಬ್ಲ್ಯು ಬುಷ್ ಆಡಳಿತದಲ್ಲಿ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ಸೀನಿಯರ್ ಡೈರೆಕ್ಟರ್ ಆಗಿದ್ದ ಮೈಕೆಲ್ ಗ್ರೀನ್ ಹೇಳಿದ್ದಾರೆ. ಚೀನಾ ಅಕಾಸ್ ಮೈತ್ರಿಕೂಟದ ವಿರುದ್ಧವಾಗಿಯೇ ಮಾತನಾಡಿದೆ.

ಈಗ ಅಮೆರಿಕಾದ ಜೋ ಬೈಡೆನ್ ಆಡಳಿತ ಹಾಗೂ ಶ್ರೀಮಂತ ದೇಶಗಳು ಬಡರಾಷ್ಟ್ರಗಳಿಗೆ ಕೊರೊನಾ ಲಸಿಕೆಯನ್ನು ಸರಿಯಾಗಿ ನೀಡುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಜೋ ಬೈಡೆನ್ ಸರ್ಕಾರವು ಫೈಜರ್ ಕಂಪನಿಯ ನೂರು ಕೋಟಿ ಡೋಸ್ ಗಳನ್ನು ಖರೀದಿಸಿ ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ನೀಡಲು ನಿರ್ಧರಿಸಿದೆ.

ಇಂದು ರಾತ್ರಿ 11.30ಕ್ಕೆ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ಭಾರತೀಯ ಕಾಲಮಾನ ಇಂದು ರಾತ್ರಿ 11.30ಕ್ಕೆ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯಲಿದ್ದು, ಸಭೆ ಬಳಿಕ ಶ್ವೇತಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರಿಗೆ ಭೋಜನಕೂಟ ಏರ್ಪಡಿಸಲಾಗಿದೆ. ಭೋಜನಕೂಟ ಮುಗಿಸಿಕೊಂಡು ಭಾರತದ ಪ್ರಧಾನಿ ಮೋದಿ ವಾಷಿಂಗಟನ್ ಡಿ.ಸಿ.ಯಿಂದ ನ್ಯೂಯಾರ್ಕ್ ನತ್ತ ಪ್ರಯಾಣ ಬೆಳೆಸುವರು. ಶನಿವಾರ ಭಾರತೀಯ ಕಾಲಮಾನ ಸಂಜೆ 6.30ಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮೋದಿ ಭಾಷಣ ಮಾಡುವರು. ಬಳಿಕ ನ್ಯೂಯಾರ್ಕ್ ನಿಂದ ಭಾರತದತ್ತ ಪ್ರಯಾಣ ಬೆಳೆಸುವರು .

ವಿಶೇಷ ವರದಿ: ಎಸ್.ಚಂದ್ರಮೋಹನ್, ನ್ಯಾಷನಲ್ ಬ್ಯೂರೋ, ಟಿವಿ9 ಕನ್ನಡ

ಇದನ್ನೂ ಓದಿ: ಒಬಾಮ, ಟ್ರಂಪ್ ಬಳಿಕ ಜೋ ಬೈಡೆನ್ ಜತೆ ಮಾತುಕತೆ; ಪ್ರಧಾನಿ ಮೋದಿ ಭೇಟಿ ಆಗುತ್ತಿರುವ ಅಮೆರಿಕಾದ ಮೂರನೇ ಅಧ್ಯಕ್ಷ

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ತಾಲಿಬಾನ್ ಕ್ರೌರ್ಯ; ಪಾಕ್ ವಿರುದ್ಧ ತಿರುಗಿಬಿದ್ದ ಅಮೆರಿಕಾ: ಸಂಪೂರ್ಣ ವಿವರ ಇಲ್ಲಿದೆ

Published On - 8:56 pm, Fri, 24 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ