ಆಮ್ ಆದ್ಮಿ ಪಕ್ಷ (Aam Aadmy Party) ಲೋಕಸಭೆ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಪ್ರಬಲ ಪಕ್ಷವೋ ಗೊತ್ತಿಲ್ಲ, ಆದರೆ ಆ ಪಕ್ಷವನ್ನು ನಿರ್ಲಕ್ಷ್ಯ ಮಾಡುವಂತೆ ಇಲ್ಲ. ಅದರಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ ಕಾಂಗ್ರೆಸ್ಗೆ ಪರ್ಯಾಯವಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿವೆ. ಅದರಲ್ಲೂ ಪಂಜಾಬ್ನಲ್ಲಿ ಆಡಳಿತ ರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕೆಲವೇ ದಿನಗಳಲ್ಲಿ ಪಂಜಾಬ್ನಲ್ಲಿ ಆಪ್ ಸರ್ಕಾರ ರಚನೆ ಮಾಡಲಿದೆ. ಭಗವಂತ್ ಮಾನ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಪಂಜಾಬ್ ಗೆಲುವಿನ ಬೆನ್ನಲ್ಲೇ ಮಾಧ್ಯಮವೊಂದರೊಂದಿಗೆ ಮಾತನಾಡಿದ ಆಪ್ ಮುಖಂಡ ಅಕ್ಷಯ್ ಮರಾಠೆ, ನಮ್ಮ ಪಕ್ಷ ಪಂಜಾಬ್ನಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಈಗ ಇನ್ನೆರಡು ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದು, ಅಲ್ಲಿಯೂ ಕೂಡ ಅಧಿಕಾರಕ್ಕೆ ಬರಲು ಈಗಿನಿಂದಲೇ ಪ್ರಯತ್ನಗಳು ಶುರುವಾಗಿದೆ ಎಂದು ಹೇಳಿದ್ದಾರೆ. ಅಂದಹಾಗೇ, ಆಮ್ ಆದ್ಮಿ ಪಕ್ಷ ಕಣ್ಣಿಟ್ಟಿರುವ ಎರಡು ರಾಜ್ಯಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶ. ಗುಜರಾತ್ನಲ್ಲಿ 2022ರ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದ್ದು, ಹಿಮಾಚಲ ಪ್ರದೇಶದಲ್ಲಿ ನವೆಂಬರ್ ಅಷ್ಟೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ.
ಎನ್ಡಿಟಿವಿ ಮಾಧ್ಯಮದೊಂದಿಗೆ ಮಾತನಾಡಿದ ಆಪ್ ಮುಖಂಡ ಅಕ್ಷಯ್ ಮರಾಠೆ, ಗುಜರಾತ್ ಮತ್ತು ಹಿಮಾಚಲಯ ಪ್ರದೇಶಗಳ ಚುನಾವಣೆಯ ಮೇಲೆ ನಾವು ತುಂಬ ಗಮನನೆಟ್ಟಿದ್ದೇವೆ. ಅಲ್ಲಿಗೆ ನಮ್ಮ ಕಾರ್ಯಕರ್ತರನ್ನು ಕಳಿಸುವ ಸಿದ್ಧತೆಗಳು ನಡೆಯುತ್ತಿವೆ. ಅದೆಷ್ಟೋ ದಶಕಗಳಿಂದ ಭಾರತದ ಜನರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೇ ಪಕ್ಷಗಳನ್ನು ಆಯ್ಕೆ ಮಾಡುತ್ತ ಬಂದರು. ಆದರೆ ಇವೆರಡೂ ಪಕ್ಷಗಳು ಸಾಮಾನ್ಯ ಜನರಿಗಾಗಿ ಏನೇನೂ ಕೆಲಸ ಮಾಡಲಿಲ್ಲ. ಇದೇ ಮೊದಲ ಬಾರಿಗೆ ಜನರು ಪರ್ಯಾಯ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಅದಕ್ಕೆ ಸಾಕ್ಷಿ ಪಂಜಾಬ್ನಲ್ಲಿ ಆಪ್ ಗೆಲುವು ಎಂದು ವಿಶ್ಲೇಷಣೆ ಮಾಡಿದರು.
ನಮ್ಮನ್ನು ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಪರಿಗಣಿಸುವುದಿಲ್ಲ. ರಾಜಕೀಯ ದಿಗ್ಗಜರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಈಗ ನೋಡಿ, ದಿಗ್ಗಜ ಪಕ್ಷವೆನಿಸಿದ್ದ ಕಾಂಗ್ರೆಸ್ನ್ನು ಸೋಲಿಸಿದ್ದೇವೆ. ಬಿಜೆಪಿಯೂ ನಮಗೆ ಸ್ಪರ್ಧೆ ಕೊಡಲು ಸಾಧ್ಯವಾಗಲಿಲ್ಲ. ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸಿದ ಆಪ್ ಸರ್ಕಾರದ ಕೆಲಸವನ್ನು ಜನರು ನೋಡಿದ್ದಾರೆ. ನಾವು ಮಾನವೀಯತೆಯ ಆಧಾರದ ಮೇಲೆ ಜನ ಸೇವೆ ಮಾಡುತ್ತಿದ್ದೇವೆ. ಹಾಗಾಗಿ ಈಗ ಪಂಜಾಬ್ನಲ್ಲಿಯೂ ಅಧಿಕಾರ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ ಹಿಮಾಚಲ ಪ್ರದೇಶದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅನೂಪ್ ಕೇಸರಿ ಕೂಡ ಇದೇ ಮಾತುಗಳನ್ನಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕೂಡ ಆಪ್ ಅಧಿಕಾರಕ್ಕೆ ಬರುತ್ತದೆ. ಪಂಜಾಬ್ನಲ್ಲಿ ಇತಿಹಾಸ ಸೃಷ್ಟಿಸಿದಂತೆ, ಹಿಮಾಚಲ ಪ್ರದೇಶದಲ್ಲೂ ಇತಿಹಾಸ ಸೃಷ್ಟಿ ಮಾಡುತ್ತದೆ. ಜನರು ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ತುಂಬ ಬೇಸರಗೊಂಡಿದ್ದಾರೆ ಎಂದು ಅನೂಪ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಆದರೆ ಬಿಜೆಪಿ ಇದಕ್ಕೆ ತಿರುಗೇಟು ನೀಡಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೇ ಮತ್ತೆ ಅಧಿಕಾರ ಹಿಡಿಯಲಿದೆ ಎಂಬ ಭರವಸೆಯನ್ನು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ರಣಧೀರ್ ಶರ್ಮಾ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೋಲಿಗೆ ಮಾಧ್ಯಮಗಳು ಕಾರಣವೆಂದ ಮಾಯಾವತಿ; ಟಿವಿ ಡಿಬೇಟ್ಗಳನ್ನು ಬಹಿಷ್ಕರಿಸಿದ ಬಹುಜನ ಸಮಾಜ ಪಕ್ಷ