ಇಂದು ಉತ್ತರ ಪ್ರದೇಶದಲ್ಲಿ ವಿಜಯ ಯಾತ್ರೆ ನಡೆಸಲಿರುವ ಆಪ್; ಒಂದೂ ಕ್ಷೇತ್ರ ಗೆಲ್ಲದೆ ಇದ್ರೂ ಮೆರವಣಿಗೆ !
ಉತ್ತರ ಪ್ರದೇಶದಲ್ಲಿ ಆಪ್ ಸೋತಿರಬಹುದು. ಆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹಳ್ಳಿಗಳ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಕಾರ್ಯದಲ್ಲಿ ತೊಡಗುತ್ತೇವೆ. ತಕ್ಷಣವೇ ಕೆಲಸ ಶುರು ಮಾಡಿಕೊಳ್ಳುತ್ತೇವೆ ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.
ಲಖನೌ: ಉತ್ತರ ಪ್ರದೇಶದಲ್ಲಿ (Uttar Pradesh Assembly Election) ಒಂದೂ ಕ್ಷೇತ್ರದಲ್ಲಿ ಗೆಲ್ಲದ ಆಮ್ ಆದ್ಮಿ ಪಕ್ಷ (Aam Aadmi Party) ಇಂದು ಅಲ್ಲಿ ವಿಜಯಯಾತ್ರೆ (Victory Rally)ನಡೆಸಲಿದೆ. ಮಾರ್ಚ್ 12ರಂದು ಉತ್ತರಪ್ರದೇಶದಾದ್ಯಂತ ಆಪ್ ಪಕ್ಷದ ಗೆಲುವಿನ ಮೆರವಣಿಗೆ ನಡೆಯಲಿದೆ ಎಂದು ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಆಪ್ ಒಂದೂ ಕ್ಷೇತ್ರ ಗೆಲ್ಲದೆ ಇದ್ದರೂ, ಪಂಜಾಬ್ನಲ್ಲಿ ಸ್ಪಷ್ಟ ಬಹುಮತದಿಂದ ಗೆದ್ದುಕೊಂಡಿದೆ. ಪಂಜಾಬ್ನ್ನು ತೆಕ್ಕೆಗೆ ಎಳೆದುಕೊಂಡ ವಿಜಯವನ್ನು ಸಂಭ್ರಮಿಸಲು ಉತ್ತರ ಪ್ರದೇಶದಲ್ಲಿ ವಿಜಯಯಾತ್ರೆ ನಡೆಸಲಿದೆ. ಆಪ್ ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ಪಕ್ಷ ಎಂಬುದನ್ನು ಜನರು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಪಂಜಾಬ್ ಗೆಲುವೇ ಸಾಕ್ಷಿ. ರಾಜಕೀಯವನ್ನು ಸ್ವಚ್ಛಗೊಳಿಸಲು ಜನರು ಪೊರಕೆಯನ್ನು (ಆಪ್ ಚಿಹ್ನೆ) ಬಳಸಲು ಇಚ್ಛಿಸುತ್ತಿದ್ದಾರೆ ಎಂದೂ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಆಪ್ ಸೋತಿರಬಹುದು. ಆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹಳ್ಳಿಗಳ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಕಾರ್ಯದಲ್ಲಿ ತೊಡಗುತ್ತೇವೆ. ತಕ್ಷಣವೇ ಕೆಲಸ ಶುರು ಮಾಡಿಕೊಳ್ಳುತ್ತೇವೆ. ಲಖನೌದಲ್ಲಿ ಮಾರ್ಚ್ 23 ಮತ್ತು 24ರಂದು ಪುನರವಲೋಕನ ಸಭೆ ನಡೆಸುತ್ತೇವೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಪ್ ಸೋಲಲು ಕಾರಣವೇನು ಎಂಬ ಬಗ್ಗೆ ಈ ಸಭೆಯಲ್ಲಿ ಪರಾಮರ್ಶಿಸಲಾಗುವುದು ಎಂದೂ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸಿದ್ದರೂ ಕೂಡ ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲಲಿಲ್ಲ. ಈ ಬಗ್ಗೆ ಮಾತನಾಡಿದ ಸಂಜಯ್ ಸಿಂಗ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನೇರ ಹಣಾಹಣಿ, ಸ್ಪರ್ಧೆ ಏರ್ಪಟ್ಟಿತ್ತು. ಹಾಗಾಗಿ ಆಪ್ ಸೇರಿ ಇನ್ಯಾವುದೇ ರಾಜಕೀಯ ಪಕ್ಷಗಳಿಗೂ ಅಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪ್ರೀತಿ ಜಿಂಟಾ ಮುಂದೆ ಸೈಫ್ ಅಲಿ ಖಾನ್ ಸ್ಟಂಟ್ ಎಡವಟ್ಟು; ಸತ್ತು ಹೋದ್ರು ಅಂತ ಭಾವಿಸಿದ್ದ ನಟಿ
Published On - 8:50 am, Sat, 12 March 22