ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ

ಶೂಟಿಂಗ್​ ಬಿಡುವಿನಲ್ಲಿ ಪ್ರೀತಿ ಜಿಂಟಾ ಎದುರು ಬೈಕ್ ಸ್ಟಂಟ್​ ಮಾಡಲು ಸೈಫ್ ಅಲಿ ಖಾನ್​​ ಮುಂದಾಗಿದ್ದರು. ನಂತರ ನಡೆದಿದ್ದು ಅಪಾಯಕಾರಿ ಘಟನೆ.

ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ
ಪ್ರೀತಿ ಜಿಂಟಾ, ಸೈಫ್ ಅಲಿ ಖಾನ್
TV9kannada Web Team

| Edited By: Madan Kumar

Mar 12, 2022 | 11:10 AM

ಸೈಫ್​ ಅಲಿ ಖಾನ್​ (Saif Ali Khan) ಅವರು ಪ್ರೀತಿ ಜಿಂಟಾ ಜೊತೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಅನೇಕ ಸಿನಿಮಾಗಳಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ. ‘ದಿಲ್​ ಚಾಹ್ತಾ ಹೈ’, ‘ಕ್ಯಾ ಕೆಹ್ನಾ’, ‘ಕಲ್​ ಹೋ ನಾ ಹೋ’ ಸಿನಿಮಾಗಳಲ್ಲಿ ಇಬ್ಬರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡರು. ಅದು ತೆರೆ ಮೇಲಿನ ಕಹಾನಿ. ಆದರೆ ತೆರೆ ಹಿಂದೆ ನಡೆದ ಘಟನೆಗಳ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ಅಂಥ ಒಂದು ಘಟನೆ ಚಿತ್ರೀಕರಣದ ಸಮಯದಲ್ಲಿ ನಡೆದಿತ್ತು. ‘ಕ್ಯಾ ಕೆಹ್ನಾ’ (Kya Kehna) ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ನಡೆದ ಸಂಗತಿ ಬಗ್ಗೆ ನಂತರದ ದಿನಗಳಲ್ಲಿ ಸ್ವತಃ ಸೈಫ್​ ಅಲಿ ಖಾನ್​ ಬಾಯಿ ಬಿಟ್ಟಿದ್ದರು. ಪ್ರೀತಿ ಜಿಂಟಾ (Preity Zinta) ಅವರನ್ನು ಇಂಪ್ರೆಸ್​ ಮಾಡಲು ಹೋಗಿ ಸೈಫ್​ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಅವರಿಗೆ ಗಂಭೀರ ಗಾಯಗಳಾಗಿದ್ದವು. ತಲೆಗೆ ಹೊಲಿಗೆ ಹಾಕಲಾಗಿತ್ತು. ಈ ಹಿಂದೆ ‘ಕಾಫಿ ವಿಥ್​ ಕರಣ್​’ ಶೋನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸೈಫ್​ ಅವರು ಈ ಘಟನೆಯನ್ನು ನೆನಪಿಸಿಕೊಂಡಿದ್ದರು.

ಸೈಫ್​ ಅಲಿ ಖಾನ್​ ಅವರು ಬೈಕ್​ ಸ್ಟಂಟ್​ ಮಾಡುವುದರಲ್ಲಿ ನಿಪುಣರಾಗಿದ್ದರು. ಆ ಕೌಶಲವನ್ನೇ ಇಟ್ಟುಕೊಂಡು ಪ್ರೀತಿ ಜಿಂಟಾ ಅವರನ್ನು ಇಂಪ್ರೆಸ್​ ಮಾಡಬೇಕು ಎಂಬುದು ಸೈಫ್​ ಉದ್ದೇಶ ಆಗಿತ್ತು. ಶೂಟಿಂಗ್​ ಬಿಡುವಿನಲ್ಲಿ ಪ್ರೀತಿ ಜಿಂಟಾ ಎದುರು ಬೈಕ್ ಸ್ಟಂಟ್​ ಮಾಡಲು ಸೈಫ್​ ಮುಂದಾದರು. ನಂತರ ನಡೆದಿದ್ದು ಅಪಾಯಕಾರಿ ಘಟನೆ.

‘ನಾನು ಪ್ರೀತಿ ಜಿಂಟಾ ಅವರನ್ನು ಇಂಪ್ರೆಸ್​ ಮಾಡಬೇಕು ಅಂತ ನಿರ್ಧರಿಸಿದೆ. ಮೊದಲ ಬಾರಿ ಓಕೆ, ಏನೂ ತೊಂದರೆ ಆಗಲಿಲ್ಲ. ಹಾಗಾಗಿ ಇನ್ನಷ್ಟು ಜೋಶ್​ ಬಂತು. ಎರಡನೇ ಬಾರಿ ಬೈಕ್​ ಸ್ಟಂಟ್​ ಮಾಡಲು ಹೋದೆ. ನನ್ನ ಬೈಕ್​ ಸ್ಕಿಡ್​ ಆಗಿ ನಾನು ಹಾರಿ ಬಿದ್ದೆ. ಅಲ್ಲೊಂದು ಕಲ್ಲು ಬಂಡೆ ಇತ್ತು. ಅಂದಾಜು 30 ಬಾರಿ ಪಲ್ಟಿ ಹೊಡೆದ ಬಳಿಕ ಆ ಬಂಡೆಗೆ ಹೋಗಿ ಗುದ್ದಿದೆ. ನನಗೆ ಗಾಯ ಆಗಿ ರಕ್ತ ಸುರಿಯಲು ಶುರುವಾಯಿತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹಲವು ಹೊಲಿಗೆ ಹಾಕಿದರು’ ಎಂದು ಸೈಫ್​ ವಿವರಿಸಿದ್ದರು. ಆ ಘಟನೆಯಲ್ಲಿ ಸೈಫ್​ ಗಂಭೀರವಾಗಿ ಗಾಯಗೊಂಡಿದ್ದು ನೋಡಿ ಅವರು ಸತ್ತೇ ಹೋದ್ರು ಅಂತ ಪ್ರೀತಿ ಜಿಂಟಾ ಭಾವಿಸಿದ್ದರಂತೆ. ಆದರೆ ಅದೃಷ್ಟವಶಾತ್​ ಸೈಫ್​ ಪ್ರಾಣಕ್ಕೆ ಏನೂ ಅಪಾಯ ಆಗಲಿಲ್ಲ.

1993ರಿಂದಲೂ ಸೈಫ್​ ಅಲಿ ಖಾನ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 1991ರಲ್ಲಿ ನಟಿ ಅಮೃತಾ ಸಿಂಗ್ ಜೊತೆ ಅವರ ಮೊದಲ ಮದುವೆ ನೆರವೇರಿತು. ಸೈಫ್​ ಅಲಿ ಖಾನ್​ ಅವರು ಪ್ರೀತಿ ಜಿಂಟಾ ಅವರನ್ನು ಇಂಪ್ರೆಸ್​ ಮಾಡಲು ಹೋಗಿ ಪೆಟ್ಟು ಮಾಡಿಕೊಂಡಿದ್ದು 1999ರ ಸಮಯದಲ್ಲಿ. ಮೊದಲ ಪತ್ನಿ ಅಮೃತಾಗೆ 2004ರಲ್ಲಿ ಸೈಫ್​ ವಿಚ್ಛೇದನ ನೀಡಿದರು. ಆ ದಂಪತಿಗೆ ಇಬ್ಬರು ಮಕ್ಕಳು. ಮಗಳು ಸಾರಾ ಆಲಿ ಖಾನ್​ ಈಗಾಗಲೇ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಪುತ್ರ ಇಬ್ರಾಹಿಂ ಅಲಿ ಖಾನ್​ ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಲು ಕಾಯುತ್ತಿದ್ದಾರೆ.

2012ರಲ್ಲಿ ನಟಿ ಕರೀನಾ ಕಪೂರ್​ ಖಾನ್​ ಜೊತೆ ಸೈಫ್​ ಅಲಿ ಖಾನ್​ ಎರಡನೇ ಮದುವೆ ಆದರು. ಈ ಜೋಡಿಗೆ ತೈಮೂರ್​ ಅಲಿ ಖಾನ್​ ಮತ್ತು ಜೇಹ್​ ಅಲಿ ಖಾನ್​ ಎಂಬಿಬ್ಬರು ಗಂಡು ಮಕ್ಕಳು ಇದ್ದಾರೆ. ಸದ್ಯ ಹಲವು ಸಿನಿಮಾಗಳಲ್ಲಿ ಸೈಫ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಜತೆ ಪಲಕ್​ ತಿವಾರಿ ಡೇಟಿಂಗ್​; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ

6ನೇ ಕ್ಲಾಸ್​ ಪರೀಕ್ಷೆಯಲ್ಲಿ ಸೈಫ್​-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್​ ಫೋಟೋ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada