‘ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ನನಗೆ ಕರೆ ಮಾಡಲಿಲ್ಲ.. ಬಹುಶಃ ತುಂಬ ಕೆಲಸ ಇರಬೇಕು’ -ಮಮತಾ ಬ್ಯಾನರ್ಜಿ
ಈಗಷ್ಟೇ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಮಮತಾ ಬ್ಯಾನರ್ಜಿ, 2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಮಾತುಗಳನ್ನೂ ಈಗಲೇ ಆಡುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ನಮ್ಮ ಜನರನ್ನು ಈಗಿನಿಂದಲೇ ಉತ್ತೇಜಿಸಬೇಕು ಎಂದು ಹೇಳಿದ್ದಾರೆ.
ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭರ್ಜರಿಯಾಗಿ, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಮೂರನೇ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರುವ ಸಿದ್ಧತೆ ನಡೆಸಿರುವ ಮಮತಾ ಬ್ಯಾನರ್ಜಿ ನಾಳೆ ಪ್ರಮಾಣವಚನ ಸ್ವೀಕಾರ ಮಾಡಲಾಗಿದ್ದಾರೆ. ಹಾಗೇ ಸದ್ಯದ ಮಟ್ಟಿಗೆ ಕೊವಿಡ್ 19 ವಿರುದ್ಧ ಹೋರಾಡುವುದೊಂದೇ ನನ್ನ ಆದ್ಯತೆ ಎಂದು ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಹಾಗೇ, ದೇಶಾದ್ಯಂತ ಎಲ್ಲರಿಗೂ ಕೇಂದ್ರ ಸರ್ಕಾರ ಉಚಿತವಾಗಿ ಕೊರೊನಾ ಲಸಿಕೆ ಹಾಕಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಮಮತಾ ಬ್ಯಾನರ್ಜಿಯವರು ತಮ್ಮ ರಾಜೀನಾಮೆಯನ್ನು ಈಗಾಗಲೇ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೆ ಸಲ್ಲಿಸಿದ್ದು, ನಾಳೆ (ಮೇ 5)ರಂದು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಾ ಮಾಡಲಿದ್ದಾರೆ. ಅದರ ಸಿದ್ಧತೆ ಈಗಾಗಲೇ ಶುರುವಾಗಿದೆ. ಹಾಗೇ, ಇಂದು ಬೆಳಗ್ಗೆ ಮಮತಾ ಬ್ಯಾನರ್ಜಿಯವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಎಲ್ಲರನ್ನೂ ತೃಣಮೂಲ ಭವನದಲ್ಲಿ ಭೇಟಿಯಾದರು. ಹಾಗೇ, ಕೊವಿಡ್ 19 ಬಿಕ್ಕಟ್ಟು ಹೆಚ್ಚಾಗಿ ಇರುವುದರಿಂದ ಮೇ 5ರಂದು ನಾನೊಬ್ಬಳೇ ಪ್ರಮಾಣವಚನ ಸ್ವೀಕರಿಸುತ್ತೇನೆ. ಉಳಿದ ಶಾಸಕರು, ಸಚಿವರು ಮುಂಬರುವ ದಿನಗಳಲ್ಲಿ, ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣು ಈಗಷ್ಟೇ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಮಮತಾ ಬ್ಯಾನರ್ಜಿ, 2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಮಾತುಗಳನ್ನೂ ಈಗಲೇ ಆಡುತ್ತಿದ್ದಾರೆ. ನಾನು ಮೊದಲಿನಿಂದಲೂ ಹೋರಾಟಗಳನ್ನು ಮಾಡುತ್ತಲೇ ಬಂದವಳು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ನಮ್ಮ ಜನರನ್ನು ಈಗಿನಿಂದಲೇ ಉತ್ತೇಜಿಸಬೇಕು. ಆದರೆ ಸದ್ಯದ ಮಟ್ಟಿಗೆ ಕೊವಿಡ್ 19 ವಿರುದ್ಧ ಸೆಣೆಸಬೇಕಾಗಿದೆ ಎಂದು ಹೇಳಿದರು.
ಪ್ರಧಾನಿ ಕರೆ ಮಾಡ್ಲಿಲ್ಲ ! ನಾನು ಗೆದ್ದರೂ ಪ್ರಧಾನಿ ನರೇಂದ್ರ ಮೋದಿಯವರು ನನಗೆ ಕರೆ ಮಾಡಲಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಾನು ಪಶ್ಚಿಮಬಂಗಾಳದಲ್ಲಿ ಜಯ ಸಾಧಿಸುತ್ತಿದ್ದಂತೆ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ನವೀನ್ ಪಟ್ನಾಯಕ್, ರಾಜಕೀಯ ಮುಖಂಡರಾದ ಅಖಿಲೇಶ್ ಯಾದವ್, ರಜನೀಕಾಂತ್, ತೇಜಸ್ವಿ ಯಾದವ್ ಇತರರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಪಿಎಂ ಮೋದಿ ನನಗೆ ಕರೆ ಮಾಡಲಿಲ್ಲ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಬಹುಶಃ ಅವರು ಬ್ಯೂಸಿ ಇರುತ್ತಾರೆ ಎಂದು ಹೇಳಿದ್ದಾರೆ. ಹಾಗೇ, ನಾನು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಕೂಡ ಸಹಕಾರ ನೀಡಿದ್ದೇನೆ.. ಇನ್ನು ಮುಂದೆಯೂ ಕೊಡುತ್ತೇನೆ. ಆದರೆ ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂಬುದನ್ನು ಅವರೂ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಇದನ್ನು ಓದಿ: ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆಗೆ ಕೊರೊನಾ; ಸ್ನೇಹಿತರಿಂದ ಮಾಹಿತಿ ಬಹಿರಂಗ
ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆಕ್ಸಿಜನ್ ಕೊಡ್ಬೇಡಿ ಅಂದಿದ್ರಂತೆ, ಇದ್ಯಾವ ಕಥೆ | ಸಿದ್ದರಾಮಯ್ಯ