ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ದೆಹಲಿ ಬಳಿಯ ಟಿಕ್ರಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಲು ಸಾವಿರಾರು ರೈತ ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆಗಮಿಸಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹೊತ್ತಲ್ಲಿ ಸಾವಿರಾರು ಮಹಿಳೆಯರು ರೈತ ಪ್ರತಿಭಟನೆಗೆ ಬಲ ತುಂಬಿದ್ದು, ಕೃಷಿ ಕಾಯ್ದೆ ಹಿಂಪಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮೂರು ‘ಕಪ್ಪು ಕಾನೂನು’ಗಳನ್ನು ಹಿಂಪಡೆಯಬೇಕು ಎಂದು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಟಿಕ್ರಿ ಗಡಿಭಾಗದಲ್ಲಿ ಪ್ರತಿಭಟನೆನಿರತ ರೈತ ಮಹಿಳೆಯೊಬ್ಬರು ಹೇಳಿದ್ದಾರೆ. ಗಾಜೀಪುರ್ ಮತ್ತು ಸಿಂಘು ಗಡಿಯಲ್ಲಿಯೂ ರೈತ ಮಹಿಳೆಯರು ಪ್ರತಿಭಟನೆ ನಿರತರಾಗಿದ್ದಾರೆ.
ಸಾಮಾಜಿಕ,ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಲಯದಲ್ಲಿ ಮಹಿಳೆಯರ ಸಾಧನೆಯನ್ನು ಕೊಂಡಾಡುವ ಸಲುವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ.
ಮಹಿಳಾ ದಿನಾಚರಣೆ ಪ್ರಯುಕ್ತ ಈ ವೇದಿಕೆಯನ್ನು ಮಹಿಳೆಯರೇ ನಿರ್ವಹಿಸುತ್ತಾರೆ. ಇಲ್ಲಿ ಮಾತನಾಡುವವರೂ ಮಹಿಳೆಯರೇ ಆಗಿರುತ್ತಾರೆ. ಸಿಂಘು ಗಡಿಯಲ್ಲಿ ಸಣ್ಣದೊಂದು ಮೆರವಣಿಗೆ ನಡೆಯಲಿದೆ. ವಿವಿಧ ಪ್ರತಿಭಟನಾ ಸ್ಥಳಗಳಲ್ಲಿ ಹೆಚ್ಚಿನ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ಸದಸ್ಯೆ, ರೈತ ನಾಯಕಿ ಕವಿತಾ ಕುರುಗ್ರಾಂಥಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಸೋಮವಾರ ಟಿಕ್ರಿ ಗಡಿಯಲ್ಲಿ 15,000 ಮತ್ತು ಸಿಂಘು ಗಡಿಯಲ್ಲಿ 4,000ಮಹಿಳಾ ಪ್ರತಿಭಟನೆಕಾರರು ಬಂದು ಸೇರುವ ನಿರೀಕ್ಷೆ ಇದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಕೇಂದ್ರ ಸರ್ಕಾರದ ಕೃಷಿ ಕಾನೂನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಾವಿರಾರು ರೈತರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಿಂದ ಪ್ರತಿಭಟನೆ ನಿರತರಾಗಿದ್ದಾರೆ. ನವೆಂಬರ್ 26ರಂದು ಆರಂಭವಾದ ರೈತರ ಹೋರಾಟ 100 ದಿನಗಳನ್ನು ಪೂರೈಸಿದ್ದು, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯುವ ತನಕ ಹೋರಾಟ ಮುಂದುವರಿಸುತ್ತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
18 ತಿಂಗಳುಗಳ ಕಾಲ ಈ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ್ದು, ರೈತರ ಜತೆ ಇಲ್ಲಿಯವರೆಗೆ 11 ಸುತ್ತು ಮಾತುಕತೆ ನಡೆಸಿದೆ. ಆದಾಗ್ಯೂ, ಕಾಯ್ದೆ ಹಿಂಪಡೆಯದೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಮಹಿಳೆಯರು ಪುರುಷರಿಗಿಂತ ಕಡಿಮೆ ಅಲ್ಲ – ಟಿಕಾಯತ್ ಟ್ವೀಟ್
‘Woman, No Less Than A Man, Can Qualify for More Onerous Occupations In Life’
Today, On International Women’s Day, a salute to all the women who have come up to the forefront in the ongoing farmers’ protest. #WeSaluteWomenFarmers @AHindinews @PTI_News @news24tvchannel pic.twitter.com/ynFcahburM
— Rakesh Tikait (@RakeshTikaitBKU) March 8, 2021
ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ. ಅವರು ಜೀವನದ ಕಠಿಣ ಕಾರ್ಯಗಳನ್ನು ಮಾಡಲು ಅರ್ಹತೆಯುಳ್ಳವರು. ಇವತ್ತು ಅಂತರರಾಷ್ಟ್ರೀಯ ಮಹಿಳಾ ದಿನ. ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ಮುಂದೆ ಬಂದ ಎಲ್ಲ ಮಹಿಳೆಯರಿಗೂ ಸಲಾಂ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಟ್ವೀಟ್ ಮಾಡಿದ್ದಾರೆ.
ರೈತ ಪ್ರತಿಭಟನೆಗೆ ಬಲ ತುಂಬಲು ಟಿಕಾಯತ್ ಸೂತ್ರ
ರೈತರ ಹೋರಾಟಕ್ಕೆ ಪುಷ್ಠಿ ನೀಡಿಲು ಮತ್ತು ಹೋರಾಟವನ್ನು ಮುಂದುವರಿಸುವುದಕ್ಕಾಗಿ ಟಿಕಾಯತ್ ಹೊಸ ಸೂತ್ರವನ್ನು ಮುಂದಿಟ್ಟಿದ್ದಾರೆ. ಈ ಸೂತ್ರದ ಪ್ರಕಾರ ಪ್ರತಿ ಗ್ರಾಮದಿಂದ 15 ಮಂದಿ 10 ದಿನಗಳ ಕಾಲ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಇದಾದನಂತರ ಮತ್ತೆ 15 ಮಂದಿ ಹತ್ತು ದಿನಗಳ ಕಾಲ ಪ್ರತಿಭಟನೆಯಲ್ಲಿರಬೇಕು. ಹೀಗೆ ಮೊದಲು ಪ್ರತಿಭಟನೆಯಲ್ಲಿ ಭಾಗವಹಿಸಿದವರು ತಮ್ಮ ಕೃಷಿ ಕೆಲಸಗಳಿಗಾಗಿ ಊರಿಗೆ ಮರಳಬಹುದು.