ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಟಿಕಾಯತ್ ಸೂತ್ರ; 1 ಗ್ರಾಮ, 1 ಟ್ರ್ಯಾಕ್ಟರ್, 10 ದಿನಗಳ ಕಾಲ 15 ಮಂದಿ ಪ್ರತಿಭಟನೆಯಲ್ಲಿ ಭಾಗಿ
Farmers Protest: ರೈತರ ಪ್ರತಿಭಟನೆಗೆ ಶಕ್ತಿ ತುಂಬಲು ಮತ್ತು ಹೋರಾಟವನ್ನು ಮುಂದುವರಿಸಲು 1 ಗ್ರಾಮ, 1- ಟ್ರ್ಯಾಕ್ಟರ್, 15 ಮಂದಿ,10 ದಿನಗಳ ಸೂತ್ರವನ್ನು ಪಾಲಿಸಲು ರೈತರಿಗೆ ಕರೆ ನೀಡಿದ್ದಾರೆ ರಾಕೇಶ್ ಟಿಕಾಯತ್.
ಆಗ್ರಾ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 100 ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಶನಿವಾರ ದೆಹಲಿ ಗಡಿಭಾಗದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ (BKU) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ರೈತರು 1V-1T-15M-10D ಸೂತ್ರವನ್ನು ಪಾಲಿಸಲು ರೈತರಿಗೆ ಕರೆ ನೀಡಿದ್ದಾರೆ. ಅಂದರೆ 1 ಗ್ರಾಮ, 1- ಟ್ರ್ಯಾಕ್ಟರ್, 15 ಮಂದಿ 10 ದಿನಗಳ ಕಾಲ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು. ರೈತರ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲು ಎಲ್ಲ ಜಿಲ್ಲೆಗಳು ಈ ಸೂತ್ರವನ್ನು ಪಾಲಿಸಬೇಕು. ಈ ಸೂತ್ರವು ನಮ್ಮ ಹೋರಾಟವನ್ನು ವರ್ಷಗಳ ಕಾಲ ಮುಂದುವರಿಯಲು ಸಹಾಯ ಮಾಡುತ್ತದೆ ಎಂದು ಟಿಕಾಯತ್ ಹೇಳಿದ್ದಾರೆ.
ಈ ಸೂತ್ರ ಪಾಲಿಸುವುದಾದರೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲು ಸಹಕಾರಿಯಾಗುತ್ತದೆ. ರೈತರು ಪ್ರತಿಭಟನೆಯಲ್ಲಿ ಭಾಗಿಯಾದ ನಂತರ ಗ್ರಾಮಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎಂದು ಬಿಕೆಯು ನೇತಾರ ಧರ್ಮೇಂದ್ರ ಮಲಿಕ್ ಹೇಳಿದ್ದಾರೆ. ಕೃಷಿ ಕಾಯ್ದೆ ಬಗ್ಗೆ ಮಾತುಕತೆ ನಡೆಸಿ ತಿದ್ದುಪಡಿ ಮಾಡುವಂತೆ ರೈತ ಹೋರಾಟಗಾರರು ಪದೇ ಪದೇ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ ಸರ್ಕಾರ ಅದಕ್ಕೆ ಕಿವಿಗೊಡುತ್ತಿಲ್ಲ ಎಂದಿದ್ದಾರೆ ಮಲಿಕ್.
ರೈತರ ಹೋರಾಟಕ್ಕೆ ಪುಷ್ಠಿ ನೀಡಿಲು ಮತ್ತು ಹೋರಾಟವನ್ನು ಮುಂದುವರಿಸುವುದಕ್ಕಾಗಿ ಟಿಕಾಯತ್ ಹೊಸ ಸೂತ್ರವನ್ನು ಮುಂದಿಟ್ಟಿದ್ದಾರೆ. ಈ ಸೂತ್ರದ ಪ್ರಕಾರ ಪ್ರತಿ ಗ್ರಾಮದಿಂದ 15 ಮಂದಿ 10 ದಿನಗಳ ಕಾಲ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಇದಾದನಂತರ ಮತ್ತೆ 15 ಮಂದಿ ಹತ್ತು ದಿನಗಳ ಕಾಲ ಪ್ರತಿಭಟನೆಯಲ್ಲಿರಬೇಕು. ಹೀಗೆ ಮೊದಲು ಪ್ರತಿಭಟನೆಯಲ್ಲಿ ಭಾಗವಹಿಸಿದವರು ತಮ್ಮ ಕೃಷಿ ಕೆಲಸಗಳಿಗಾಗಿ ಊರಿಗೆ ಮರಳಬಹುದು. ರೈತರ ಹೋರಾಟ ವರ್ಷಗಳ ಕಾಲ ಮುಂದುವರಿಸಲು ಈ ಸೂತ್ರ ಸಹಕಾರಿಯಾಗಿದೆ ಎಂದು ಬಿಕೆಯು ರಾಜ್ಯಾಧ್ಯಕ್ಷ ರಜ್ ವೀರ್ ಸಿಂಗ್ ಜಾಧೌನ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯದೇ ಇದ್ದರೆ ರೈತರು 40 ಲಕ್ಷ ಟ್ರ್ಯಾಕ್ಟರ್ ಗಳನ್ನು ದೆಹಲಿಗೆ ತಂದು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಕಿಸಾನ್ ಮಹಾಪಂಚಾಯತ್ ಗಳಲ್ಲಿ ಮಾತನಾಡಿದ್ದ ಟಿಕಾಯತ್ ಹೇಳಿದ್ದರು. ಕೃಷಿ ಕಾಯ್ದೆ ಹಿಂಪಡೆಯುವ ತನಕ ಹೋರಾಟ ಮುಂದುವರಿಯಲಿದೆ.
ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟ 2021 ಮಾರ್ಚ್ 6ನೇ ತಾರೀಖಿಗೆ 100 ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಮುಜಾಫರ್ ನಗರದಲ್ಲಿ ಶನಿವಾರ ರೈತರನ್ನುದೇಶಿಸಿ ಮಾತನಾಡಿದ ಟಿಕಾಯತ್, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಟ್ರಾಕ್ಟರ್ ಮೆರವಣಿಗೆಗೆ ಚಾಲನೆ ನೀಡಿದ ಟಿಕಾಯತ್, ತಾನು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯದಾದ್ಯಂತ ಸಂಚರಿಸಿ ಮಾರ್ಚ್ 27ಕ್ಕೆ ರೈತರ ಪ್ರತಿಭಟನೆ ನಡೆಯುತ್ತಿರುವ ಗಾಜಿಯಾಬಾದ್ ಗೆ ತಲುಪಲಿದ್ದೇನೆ ಎಂದಿದ್ದಾರೆ. ಆದಾಗ್ಯೂ , ಕೇಂದ್ರದ ಕೃಷಿ ಕಾನೂನುಗಳು ರೈತರಿಗೆ ಸಹಕಾರಿಯಾಗಲಿವೆ ಎಂದು ಕೇಂದ್ರ ಸಚಿವ ಮುಜಾಫರ್ ನಗರದ ಸಂಸದ ಸಂಜೀವ್ ಬಲ್ಯಾನ್ ಹೇಳಿದ್ದಾರೆ.
ರೈತರಿಂದ ಷಟ್ಪಥ ತಡೆ ಶನಿವಾರ ಸಂಜೆ ರೈತರು ಚಂಢೀಗಡದಲ್ಲಿ ಕುಂಡ್ಲಿ-ಮನೇಸರ್- ಪಲ್ವಾಲ್ ಎಕ್ಸ್ಪ್ರೆಸ್ ವೇ (KMP) ಷಟ್ಪಥಕ್ಕೆ ತಡೆಯೊಡ್ಡಿದ್ದಾರೆ. ದೆಹಲಿ ಗಡಿಭಾಗದಂತೆ ಕೆಎಂಪಿಯನ್ನು ನಾವು ಸಂಪೂರ್ಣವಾಗಿ ಬಂದ್ ಮಾಡಲಿದ್ದೇವೆ. ಇವತ್ತು 5 ಗಂಟೆಗಳ ಕಾಲ ತಡೆಯೊಡ್ಡಿದ್ದು ಕೇವಲ ಟ್ರೇಲರ್ ಅಷ್ಟೇ ಎಂದು ಟಿಕಾಯತ್ ಹೇಳಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ರೈತರು ಕುಂಡ್ಲಿ-ಮನೇಸರ್- ಪಲ್ವಾಲ್ ಎಕ್ಸ್ಪ್ರೆಸ್ ವೇ ತಡೆಯೊಡ್ಡಿ ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: Farmers Protest: ದೇಶವ್ಯಾಪಿ ರೈತ ಹೋರಾಟ, 40 ಲಕ್ಷ ಟ್ರ್ಯಾಕ್ಟರ್ಗಳ ಚಳುವಳಿ: ರಾಕೇಶ್ ಟಿಕಾಯತ್
Chakka Jam: ಟ್ರಾಫಿಕ್ ಜಾಮ್ ಗೊತ್ತು.. ರೈತರ ಪ್ರತಿಭಟನೆ ವೇಳೆ ಕೇಳಿಬಂದ ಚಕ್ಕಾ ಜಾಮ್ ಯಾವುದು?