ದೆಹಲಿ: ದೆಹಲಿಯಲ್ಲಿ 17ರ ಹರೆಯದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳು ಫ್ಲಿಪ್ಕಾರ್ಟ್ ನಲ್ಲಿ (Flipkart) ಆರ್ಡರ್ ಮಾಡಿ ಆ್ಯಸಿಡ್ ಖರೀದಿಸಿದ್ದರು ಎಂದು ತಿಳಿದುಬಂದಿದೆ. ದಾಳಿಗೊಳಗಾದ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸುಪ್ರೀಂಕೋರ್ಟ್ (Supreme Court) ಆ್ಯಸಿಡ್ ಮಾರಾಟ ನಿಷೇಧ ಮಾಡಿದ್ದರೂ ಆನ್ಲೈನ್ ಮೂಲಕ ಆ್ಯಸಿಡ್ ಸುಲಭವಾಗಿ ಖರೀದಿಸಲು ಸಾಧ್ಯ ಎಂಬ ವಿಷಯ ಈ ಪ್ರಕರಣ ಮೂಲಕ ಬೆಳಕಿಗೆ ಬಂದಿದೆ. ಆ್ಯಸಿಡ್ ಸುಲಭವಾಗಿ ದಕ್ಕುವಂತೆ ಮಾಡುವ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಶಾಪಿಂಗ್ ಸೈಟ್ ಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ಕಳುಹಿಸಿದೆ. ನೈಋತ್ಯ ದೆಹಲಿಯ ದ್ವಾರಾಕಾದಲ್ಲಿ ಬುಧವಾರ ವಿದ್ಯಾರ್ಥಿನಿ ಶಾಲೆಗೆ ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಯುವಕರು ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಯುವಕರು ಆ್ಯಸಿಡ್ ಎರಚಿ ಪರಾರಿಯಾಗುತ್ತಿರುವುದು, ವಿದ್ಯಾರ್ಥಿನಿ ನೋವಿನಿಂದ ಕಿರುಚಿ ಓಡುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. 20ರ ಹರೆಯದ ಸಚಿನ್ ಅರೋರಾ ಎಂಬ ಯುವಕ ಸೆಪ್ಟೆಂಪರ್ ತಿಂಗಳಲ್ಲೇ ಈ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. ಆ್ಯಸಿಡ್ ದಾಳಿಗೆ ಸಂಚು ರೂಪಿಸಿತದ್ದು ಕೂಡಾ ಇವನೇ. ಇವನಿಗೆ ಹರ್ಷಿತ್ ಅಗರವಾಲ್ (19) ಮತ್ತು ವಿರೇಂದರ್ ಸಿಂಗ್ (22) ಸಹಾಯ ಮಾಡಿದ್ದರು. ಸಚಿನ್ ಮತ್ತು ಹರ್ಷಿತ್ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ್ದರು. ವಿರೇಂದರ್ ಸಚಿನ್ ನ ಸ್ಕೂಟರ್ ಮತ್ತು ಮೊಬೈಲ್ ಫೋನ್ ನ್ನು ಬೇರೆಡೆಗೆ ಒಯ್ದಿದ್ದ. ಈ ಮೂಲಕ ಈತ ಪೊಲೀಸರ ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ದಾಳಿ ನಡೆದ 12 ಗಂಟೆಗಳಲ್ಲಿ ಮೂವರನ್ನೂ ಬಂಧಿಸಲಾಗಿದೆ. ಈ ಆರೋಪಿಗಳಿ ಆನ್ಲೈನ್ನಲ್ಲಿ ಆ್ಯಸಿಡ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಫ್ಲಿಪ್ ಕಾರ್ಟ್ ಮೂಲಕ ಆ್ಯಸಿಡ್ ಖರೀದಿಸಿದ್ದ ಸಚಿನ್ ಆರೋರಾ ತನ್ನ ಇ ವಾಲೆಟ್ ನಿಂದಲೇ ಹಣ ಪಾವತಿ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರೀತ್ ಹೂಡಾ ಹೇಳಿದ್ದಾರೆ.
ಅಂದಹಾಗೆ ಈ ಬಗ್ಗೆ ಇ-ಕಾಮರ್ಸ್ ಸೈಟ್ ಯಾವುದೇ ಹೇಳಿಕೆ ನೀಡಿಲ್ಲ.
ಆ್ಯಸಿಡ್ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ 2013 ರಲ್ಲಿ ಸುಪ್ರೀಂಕೋರ್ಟ್ ಕೌಂಟರ್‌ನಲ್ಲಿ ಆಸಿಡ್ ಮಾರಾಟವನ್ನು ನಿಷೇಧಿಸಿತ್ತು. ಆ್ಯಸಿಡ್ ಮಾರಾಟ ಮಾಡುವವರಿಗೆ ನ್ಯಾಯಾಲಯ ನಿರ್ಬಂಧಗಳನ್ನು ವಿಧಿಸಿದೆ. ಪರವಾನಗಿ ಹೊಂದಿರುವ ಅಂಗಡಿ ಮಾಲೀಕರು ಮಾತ್ರ ಆ್ಯಸಿಡ್ ಮಾರಾಟ ಮಾಡಬಹುದು, ಅವರು ನೋಂದಾಯಿಸಿಕೊಳ್ಳಬೇಕು ಮತ್ತು ಅವರಿಂದ ಆ್ಯಸಿಡ್ ಖರೀದಿಸುವವರ ರಿಜಿಸ್ಟರ್ ಅನ್ನು ಅವರು ಇಟ್ಟುಕೊಳ್ಳಬೇಕು. ಆ್ಯಸಿಡ್ ಖರೀದಿಸುವವರು ಕಾರಣ ಮತ್ತು ಗುರುತಿನ ಪುರಾವೆಯನ್ನೂ ನೀಡಬೇಕು.
ಇದನ್ನೂ ಓದಿ: ನೀವು ಕುಡಿದರೆ, ನೀವು ಸಾಯುತ್ತೀರಿ;ಕಳ್ಳಭಟ್ಟಿ ದುರಂತ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯೆ
ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಆ್ಯಸಿಡ್ ಖರೀದಿಸುವುದು “ತರಕಾರಿಗಳನ್ನು ಖರೀದಿಸಿದಷ್ಟೇ ಸುಲಭ” ಎಂದು ಹೇಳಿದ್ದಾರೆ. ಆಯೋಗದ ಪುನರಾವರ್ತಿತ ಶಿಫಾರಸುಗಳ ಹೊರತಾಗಿಯೂ, ಆ್ಯಸಿಡ್ ಚಿಲ್ಲರೆ ಮಾರಾಟವನ್ನು ನಿಷೇಧಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆ್ಯಸಿಡ್ ಅನ್ನು ಮಾರುಕಟ್ಟೆಗಳಲ್ಲಿ ಖುಲ್ಲಂಖುಲ್ಲಾ ಮಾರಾಟ ಮಾಡಲಾಗುತ್ತಿದೆ. ಅನಿಯಂತ್ರಿತವಾಗಿ ಮಾರಾಟ ಮಾಡಲಾಗುತ್ತಿದೆ. ವಾಸ್ತವವಾಗಿ, ಆ್ಯಸಿಡ್ ಪಡೆಯುವುದು ತರಕಾರಿಗಳನ್ನು ಖರೀದಿಸುವಷ್ಟೇ ಸುಲಭ! ಸರ್ಕಾರ ಆ್ಯಸಿಡ್ ಚಿಲ್ಲರೆ ಮಾರಾಟವನ್ನು ನಿಷೇಧಿಸಬೇಕು” ಎಂದು ಮಲಿವಾಲ್ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Thu, 15 December 22