ವಿಜಯಪುರ: ಗೋವಾ ಪೊಲೀಸರ ಕಿರುಕುಳಕ್ಕೆ ಬೇಸತ್ತು ವಿಜಯಪುರದ ಮೂವರು ಆತ್ಮಹತ್ಯೆ? ಮಾಡಿಕೊಂಡಿರುವ ಘಟನೆ ಗೋವಾದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಮೂಲದ ಸುಲ್ತಾನಪುರದ ಹುಲಗಪ್ಪ ಅಂಬಿಗೇರ(35), ಪತ್ನಿ ದೇವಮ್ಮ(28) ಗಂಗಪ್ಪ ಅಂಬಿಗೇರ(29) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರದ ಮೂವರ ಕುಟುಂಬವೊಂದು ಗೋವಾದ ಜುವಾರಿ ನಗರದ ಎಂಇಎಸ್ ಕಾಲೇಜಿನ ಆವರಣದಲ್ಲಿನ ಮನೆಯೊಂದರಲ್ಲಿ ಬಾಡಿಗೆಗೆ ಇದ್ದರು. ಈ ಬಾಡಿಗೆ ಮನೆಯ ಮಾಲೀಕ ಶಂಷುದ್ದೀನ್ನ ಮನೆಯಲ್ಲಿದ್ದ ಹಣ ಹಾಗೂ ಚಿನ್ನ ಕದ್ದ ಆರೋಪದಡಿ ವಿಚಾರಣೆ ನಡೆಸುವ ನೆಪದಲ್ಲಿ ಗೋವಾದ ವರ್ನಾ ಪೊಲೀಸರು ಕಿರುಕುಳ ನೀಡಿದ್ದಾರೆ. ಪೊಲೀಸರ ಕಿರುಕುಳಕ್ಕೆ ಬೇಸತ್ತು ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಾ ಪೊಲೀಸರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡಿದ್ದಾರೆ.
ಜೂನ್ 29 ರಂದು ಈ ಘಟನೆ ನಡೆದಿದೆ. ದೇವಮ್ಮ ಅಂಬಿಗೇರರ ಮೇಲೆ ಕಳ್ಳತನ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈ ಕುರಿತು ಮನೆ ಮಾಲೀಕ ಶಂಷುದ್ದೀನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಕಾರಣ ಪೊಲೀಸರು ಕಿರುಕುಳ ನೀಡಿದ್ದರು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.
ಇನ್ನು ಮೃತರ ಬಳಿ ಸಿಕ್ಕ ಡೆತ್ ನೋಟ್ನಲ್ಲಿ ಅವರ ವೈಯುಕ್ತಿಕ ವ್ಯವಹಾರ ಹಾಗೂ ತಮ್ಮ ಮಕ್ಕಳ ಬಗ್ಗೆಯೂ ಉಲ್ಲೇಖವಿದೆ. ಸದ್ಯ ಸುಲ್ತಾನಪುರ ಗ್ರಾಮದ ಕುಟುಂಬಸ್ಥರ ಮನೆಯಲ್ಲಿ ಆಕ್ರಂದನ ಮನೆ ಮಾಡಿದೆ. ಗೋವಾ ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಮೃತರ ಸಂಬಂಧಿಕರು ಒತ್ತಾಯಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತ ಶವ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮಕ್ಕೆ ತಡರಾತ್ರಿ ರವಾನೆಯಾಗಿದೆ. ಗೋವಾ ವರ್ನಾ ಪೊಲೀಸರ ಮೇಲೆ ಕ್ರಮಕ್ಕೆ ಅಖಿಲ ಕರ್ನಾಟಕ ಗೋವಾ ಕನ್ನಡಿಗ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ಮೇಟಿ ಹಾಗೂ ಇತರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಾವಿಗೆ ಹಾರಿ ಕುಟುಂಬದ 6 ಮಂದಿ ಆತ್ಮಹತ್ಯೆ; ಮತ್ತೊಂದೆಡೆ ಬಟ್ಟೆ ಒಗೆಯಲು ಹೋಗಿದ್ದ 4 ಸಹೋದರರು ಕೃಷ್ಣಾ ನದಿ ನೀರುಪಾಲು