ರಾಜಸ್ಥಾನದ (Rajasthan) ಕೋಟಾದಲ್ಲಿ (Kota) ಖಾಸಗಿ ಕೋಚಿಂಗ್ ಇನ್ಸಿಟ್ಯೂಟ್ನಲ್ಲಿ ಕಲಿಯುತ್ತಿದ್ದ ಮೂವರು ಹದಿಹರೆಯದ ವಿದ್ಯಾರ್ಥಿಗಳು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಾಗಿ ಕೋಚಿಂಗ್ ಕೊಡುವ ದೇಶದ ಕೋಚಿಂಗ್ ಸೆಂಟರ್ ಗಳಿರುವ ಕೋಟಾದಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ವರದಿ ಆಗಿರುವುದು ಆಘಾತದ ಸಂಗತಿಯಾಗಿದೆ. ಬಿಹಾರ ಮೂಲದ ಇಬ್ಬರು ವಿದ್ಯಾರ್ಥಿಗಳು ಕೋಟಾದಲ್ಲಿರುವ ಪ್ರತಿಷ್ಠಿತ ಕೋಚಿಂಗ್ ಸೆಂಟರ್ನಲ್ಲಿ ಕಲಿಯುತ್ತಿದ್ದರು ಎಂದು ಕೋಟಾ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಕೇಶಾರ್ ಸಿಂಗ್ ಶೆಖಾವತ್ ಹೇಳಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಪೇಯಿಂಗ್ ಗೆಸ್ಟ್ ರೂಂನಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಒಬ್ಬನಿಗೆ 19 ಮತ್ತು ಮತ್ತೊಬ್ಬನಿಗೆ 18 ವಯಸ್ಸು ಎಂದು ಅವರು ಹೇಳಿದ್ದಾರೆ. ಇವರಿಬ್ಬರು 11 ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಕಳೆದ 6 ತಿಂಗಳಿನಿಂದ ಒಂದೇ ಪಿಜಿಯಲ್ಲಿ ಬೇರೆ ಬೇರೆ ರೂಂಗಳಲ್ಲಿ ವಾಸಿಸುತ್ತಿದ್ದರು.ಅವರು ಸ್ನೇಹಿತರಾಗಿದ್ದರೇ ಅಲ್ಲವೇ ಎಂಬುದರ ಬಗ್ಗೆ ನಾವು ಪತ್ತೆ ಹಚ್ಚುತ್ತಿದ್ದೇವೆ. ಪಿಜಿ ಮಾಲೀಕರು ಪೊಲೀಸ್ ನಿಯಂತ್ರಣಾ ಕೊಠಡಿಗೆ ಕರೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದಿದ್ದಾರೆ ಶೆಖಾವತ್. ಈ ಹುಡುಗರಲ್ಲಿ ಒಬ್ಬ ಬೆಳಗ್ಗೆ ತಮ್ಮ ಕೋಣೆಯಿಂದ ಹೊರಬರದೇ ಇದ್ದಾಗ ಪಿಜಿ ಮಾಲೀಕರು ಬಾಗಿಲು ತಟ್ಟಿದ್ದಾರೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಬಾಗಿಲು ಒಡೆದು ನೋಡಿದರೆ ಹುಡುಗನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಧ್ಯಾಹ್ನ ಇನ್ನೊಬ್ಬ ಹುಡುಗನ ಸಹೋದರಿ ಆತನನ್ನು ಭೇಟಿಯಾಗಲು ಬಂದಿದ್ದಳು. ಆತನೂ ಬಾಗಿಲು ತಟ್ಟಿದಾಗ ತೆರೆಯದೇ ಇದ್ದ ಕಾರಣ ಬಾಗಿಲು ಒಡೆಯಲಾಯಿತು. ಅಲ್ಲಿ ಹುಡುಗ ಫ್ಯಾನ್‌ಗೆ ನೇಣು ಬಿಗಿದಿದ್ದ ಎಂದು ಎಸ್ ಪಿ ಹೇಳಿದ್ದಾರೆ.
ಇಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಸಿಗಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಅವರ ಮೊಬೈಲ್ ಫೋನ್ ಪರಿಶೀಲಿಸುತ್ತಿದೇವೆ. ಇವರಿಬ್ಬರೂ ಕಳೆದ ಮೂರು ವರ್ಷದಿಂದ ಕೋಟಾದಲ್ಲಿ ವಾಸಿಸುತ್ತಿದ್ದು, ರಾತ್ರಿ ಊಟ ಮುಗಿಸಿದ ನಂತರ ನೇಣು ಬಿಗಿದಿರುವ ಸಾಧ್ಯತೆ ಇದೆ. ಇದರಲ್ಲಿ ಒಬ್ಬ ಹುಡುಗ ಆತನ ಸಹೋದರಿಗೆ ರಾತ್ರಿ ಕರೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮಧ್ಯಪ್ರದೇಶದ ಶಿವಪುರಿ ನಿವಾಸಿ, 17ರ ಹರೆಯದ ಹುಡುಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾನೆ. ಚಿಕಿತ್ಸೆ ವೇಳೆ ಈತ ಮೃತಪಟ್ಟಿದ್ದಾನೆ. ಬಾಲಕ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ವರ್ಷಗಳಿಂದ ಕೋಟಾದಲ್ಲಿ ನೆಲೆಸಿದ್ದರು.
ಕಳೆದ ರಾತ್ರಿ ಆತ ಪಿಜಿಯ ಗ್ಯಾಲರಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದುನೀರು ತುಂಬಲು ಅಲ್ಲಿಗೆ ಬಂದ ಇನ್ನೊಬ್ಬ ವಿದ್ಯಾರ್ಥಿಯು ಗಮನಿಸಿ ಹಾಸ್ಟೆಲ್ ಮಾಲೀಕರಿಗೆ ಮಾಹಿತಿ ನೀಡಿದ್ದನು. ಅವರು ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ಹುಡುಗ ಸಾವಿಗೀಡಾಗಿದ್ದಾನೆ ಎಂದು ಘೋಷಿಸಲಾಯಿತು ಎಂದು ಕುನಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಗಂಗಾ ಸಹಾಯ ಶರ್ಮಾ ಹೇಳಿದರು. ಆತನ ಬಳಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ, ಆದರೆ ಪೊಲೀಸರು ಕೊಠಡಿಯಿಂದ ಇಲಿ ವಿಷವನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ ಕೊನೆಯ ವಾರದಲ್ಲಿ, ಉತ್ತರಾಖಂಡದ 16 ವರ್ಷದ ವಿದ್ಯಾರ್ಥಿ ಕೋಟಾದ ಇಂದ್ರ ವಿಹಾರ್‌ನಲ್ಲಿರುವ ತನ್ನ ಪಿಜಿ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜುಲೈನಲ್ಲಿ ಇನ್ನೊಬ್ಬ NEET ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡರು. 16 ವರ್ಷದ ಯುವಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ನಿವಾಸಿಯಾಗಿದ್ದಾನೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ