ತನ್ನಂತೆ ಕಾಣುವ ವ್ಯಕ್ತಿಯನ್ನು ಭಸ್ಮ ಮಾಡಿ ಜೈಲೂಟ ಮಾಡುತ್ತಿದಾತ ಆತ್ಮಹತ್ಯೆಗೆ ಶರಣು, ಇಷ್ಟಕ್ಕೂ ಆತ ಕೊಲೆ ಮಾಡಿದ್ದು ಯಾಕೆ, ನೆರವಾದವರು ಯಾರು?
ಸದಾನಂದ ಶೇರಿಗಾರ್ ಪ್ರಕರಣವೊಂದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನನ್ನೆ ಹೋಲುವ ಆನಂದ ದೇವಾಡಿಗ ಎಂಬುವವರನ್ನು ತನ್ನ ಪ್ರೇಯಸಿ, ಇನ್ನಿಬ್ಬರ ಜೊತೆಗೂಡಿ ಕಾರಿನ ಸಹಿತ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ.
ನೀವು ದುಲ್ಕರ್ ಸಲ್ಮಾನ್ ಅಭಿನಯಿಸಿದ ಮಳೆಯಾಳಂ ಸಿನೆಮಾ ಕುರುಪ್ ನೋಡಿದ್ದೀರಾ. ತಾನೆ ಸತ್ತಂತೆ ಕಾಣುವ ಹಾಗೆ ಸೀನ್ ಸೃಷ್ಟಿ ಮಾಡಿ ಪರಾರಿಯಾಗುವ ಸಿನೆಮಾದ ದೃಶ್ಯದಂತೆ ರಿಯಲ್ ಲೈಫ್ ನಲ್ಲಿ ಈತ ಸೀನ್ ಸೃಷ್ಟಿ ಮಾಡಿದ್ದಾತ. ತನ್ನಂತೆ ಕಾಣುವ ವ್ಯಕ್ತಿಯನ್ನು ಸುಟ್ಟು ಭಸ್ಮ ಮಾಡಿ ಪೊಲೀಸ್ ಅತಿಥಿಯಾಗಿ, ಜೈಲೂಟ ಮಾಡುತ್ತಿದಾತ… ಈಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು, ನೀವು ಕುರುಪ್ ಚಿತ್ರ ನೋಡಿದ್ರೆ ಅಲ್ಲಿ ಒಂದು ಘಟನಾವಳಿ ಬರುತ್ತದೆ. ಚಿತ್ರದ ಹೀರೋ ತಾನು ಪರವೂರಿಗೆ ಪರಾರಿಯಾಗಲು ತನ್ನ ಕಾರಿಗೆ ಅಪಘಾತವಾಗಿ ಬೆಂಕಿ ಹಿಡಿದು ಸಂಪೂರ್ಣ ಭಸ್ಮವಾಗಿರುವ ಸೀನ್ ಸೃಷ್ಟಿಸಿ ಪರಾರಿಯಾಗುತ್ತಾನೆ. ಇದೇ ಸಿನೆಮಾದ ಸೀನ್ ಹೋಲುವ ರೀತಿಯಲ್ಲಿ ನಿಜ ಜೀವನದಲ್ಲಿ ರಿಯಲ್ ಸೀನ್ ಸೃಷ್ಟಿಸಿದ್ದಾತ ಸದಾನಂದ ಶೇರಿಗಾರ್ (Sadananda Sherigar) ಸದ್ಯ ಸಬ್ ಜೈಲಿನಲ್ಲಿ (udupi sub jail) ಭಾನುವಾರ ಬೆಳಗಿನ ಜಾವ ನೇಣಿಗೆ (suicide) ಶರಣಾಗಿದ್ದಾನೆ. ಇದೇ ಜುಲೈ 13 ರಂದು ಅಮಾಯಕ ಆನಂದ ದೇವಾಡಿಗ ಎನ್ನುವವರನ್ನು ಪುಸಲಾಯಿಸಿ ಕಾರ್ಕಳದಿಂದ ಕರೆ ತಂದು ಬೈಂದೂರು ತಾಲೂಕು ಶಿರೂರು ಬಳಿಯ ಹೆನ್ ಬೇರು ಎನ್ನುವ ನಿರ್ಜನ ಪ್ರದೇಶದಲ್ಲಿ ಕಾರಿನ ಸಮೇತ ಸುಟ್ಟ ಪ್ರಕರಣದಲ್ಲಿ ಇದೇ ಸದಾನಂದ ಶೇರಿಗಾರ್ ಪ್ರಮುಖ ಆರೋಪಿಯಾಗಿದ್ದಾತ (Murder-accused undertrial prisoner).
ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿಯಾಗಿರುವ ಸದಾನಂದ ಶೇರಿಗಾರ್ ಗುತ್ತಿಗೆ ಆಧಾರದ ಸರ್ವೇ ಕೆಲಸ ಮಾಡಿಕೊಂಡಿದ್ದಾತ. ಕ್ರಿಮಿನಲ್ ಹಿನ್ನೆಲೆ (criminal) ಇರುವ ಸದಾನಂದ ಶೇರಿಗಾರ್ ಪ್ರಕರಣವೊಂದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನನ್ನೆ ಹೋಲುವ ಆನಂದ ದೇವಾಡಿಗ ಎನ್ನುವ ವ್ಯಕ್ತಿಯನ್ನು ತನ್ನ ಪ್ರೇಯಸಿ ಮತ್ತು ಇನ್ನಿಬ್ಬರ ಜೊತೆಗೂಡಿ ಶಿರೂರು ಹೇನ್ ಬೇರುವಿಗೆ ಕರೆ ತಂದು ಕಾರಿನ ಸಹಿತ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾತ.
ಇದನ್ನೂ ಓದಿ: ಮಕ್ಕಳ ಕೈಗೆ ಮೊಬೈಲ್ ಕೊಡಲ್ಲ: ಸ್ಮಾರ್ಟ್ಫೋನ್ ವ್ಯಸನ ತಗ್ಗಿಸಲು ಪೋಷಕರಿಂದ ಪತ್ರ ಪಡೆಯುತ್ತಿವೆ ಬೆಂಗಳೂರು ಶಾಲೆಗಳು
ಜುಲೈ ತಿಂಗಳಿನಿಂದ ಹಿರಿಯಡಕ ಸಬ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದ ಸದಾನಂದ ಶೇರಿಗಾರ್ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 20 ಜನ ಸಹ ಕೈದಿಗಳು ಇರುವ ಸೆಲ್ ನಲ್ಲಿ ತನ್ನ ಪಂಚೆಯನ್ನೆ ಬಳಸಿ ನೇಣಾಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಸಹಕೈದಿಗಳು ನೆರವಿಗೆ ಬಂದು ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆ ಸದಾನಂದ ಶೇರಿಗಾರ್ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಅಕ್ಷಯ್ ಹಾಕೆ ಮಚ್ಚೇಂದ್ರ ತಿಳಿಸಿದ್ದಾರೆ.
ಸದ್ಯ ಆತ್ಮಹತ್ಯೆ ಪ್ರಕರಣ ಕುರಿತು ತನಿಖೆ ಆರಂಭಿಸಿದ್ದಾರೆ. ವಿಚಾರಣಾಧೀನ ಕೈದಿಯೋರ್ವ ಈ ರೀತಿ ಸಹಕೈದಿಗಳ ಮಧ್ಯೆ ಪ್ರಾಣ ಬಿಟ್ಟಿರುವುದು ಗಂಭೀರ ವಿಷಯವಾಗಿದ್ದು ಇಲಾಖೆ ಯಾವ ರೀತಿಯಲ್ಲಿ ತನಿಖೆ ನಡೆಸಿ ಆತ್ಮಹತ್ಯೆಗೆ ಕಾರಣ ತಿಳಿಸುವರೋ ಕಾದು ನೋಡಬೇಕಿದೆ. (ವರದಿ: ದಿನೇಶ್ ಯಲ್ಲಾಪುರ್, ಟಿವಿ 9, ಉಡುಪಿ)
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ