ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರಿಗೆ ಭಾರತದ ಪೊಲೀಸರೆಂದರೆ ಅಚ್ಚುಮೆಚ್ಚಂತೆ.. ! ಇದನ್ನು ಅವರೇ ಹೇಳಿಕೊಂಡಿದ್ದಾರೆ. ಹಾಗೇ ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಚೀನಾ ಪೊಲೀಸರು ಮತ್ತು ಭಾರತದ ಪೊಲೀಸ ನಡುವೆ ಇರುವ ವ್ಯತ್ಯಾಸವೇನು ಎಂಬುದನ್ನೂ ಸ್ಪಷ್ಟವಾಗಿ, ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ. ಭಾರತೀಯ ಪೊಲೀಸ್ ಫೌಂಡೇಶನ್ನಿಂದ ಆಯೋಜಿಸಲಾಗಿದ್ದ ಸಮಾರಂಭವೊಂದಕ್ಕೆ ದಲೈ ಲಾಮಾ ಅವರಿಗೆ ಆಮಂತ್ರಣ ನೀಡಲಾಗಿತ್ತು. ಅದನ್ನು ಪುರಸ್ಕರಿಸಿ ಕಾರ್ಯಕ್ರಮಕ್ಕೆ ಬಂದಿದ್ದ ಅವರು, ಇಂಡಿಯನ್ ಪೊಲೀಸ್ ಬಗ್ಗೆ ತಮಗೇಕೆ ಒಳ್ಳೆಯ ಅಭಿಪ್ರಾಯ ಇದೆ ಎಂಬುದನ್ನು ವಿವರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತು ಪ್ರಾರಂಭ ಮಾಡುತ್ತಿದ್ದಂತೆ ಚೀನಾ ಪೊಲೀಸರು ಮತ್ತು ಭಾರತೀಯ ಪೊಲೀಸರ ನಡುವಿನ ವ್ಯತ್ಯಾಸ ಹೇಳಿದ ದಲೈ ಲಾಮಾ, ಚೀನಾ ಪೊಲೀಸರು ಇಂದಿಗೂ ನನ್ನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಭಾರತದ ಪೊಲೀಸರು ತುಂಬ ಪ್ರಾಮಾಣಿಕರು. ಹಗಲು-ರಾತ್ರಿ ಎನ್ನದೆ ನನ್ನ ಬಗ್ಗೆ ಕಾಳಜಿ ತೆಗೆದುಕೊಂಡಿದ್ದಾರೆ. ಇದರಿಂದ ನನಗೆ ಅವರ ಬಗ್ಗೆ ತುಂಬ ಸಂತೋಷವಿದೆ ಎಂದು ಹೇಳಿದ್ದಾರೆ.
ಭಾರತದ ಪೊಲೀಸರು ನನ್ನ ಪಾಲಿಗೆ ರಕ್ಷಕರು. ಭಯದ ಭಾವನೆ ಹುಟ್ಟಲು ಅವಕಾಶವನ್ನೇ ಕೊಡಲಿಲ್ಲ ಎಂದು ಹೇಳಿದ ದಲೈ ಲಾಮಾ, ಭಾರತದ ಸರ್ಕಾರವನ್ನೂ ಹೊಗಳಿದರು. ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯವನ್ನೂ ಜೋಪಾನವಾಗಿ ಕಾಪಾಡಿಕೊಂಡು ಬರುವ ಮೂಲಕ, ಸಾಮರಸ್ಯ ಮೂಡಲು ಕಾರಣವಾಗಿದೆ. ಈ ವಿಚಾರದಲ್ಲಿ ಭಾರತ ಇಡೀ ಜಗತ್ತಿಗೇ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಟಿಬೆಟ್ ಸಂಸ್ಕೃತಿ ರಕ್ಷಣೆ
ಭಾರತದ ಪೊಲೀಸರು, ಭಾರತೀಯ ಸೇನೆಗಳು ಟಿಬೆಟ್ನ ಸಂಸ್ಕೃತಿಯನ್ನು ಸಂರಕ್ಷಿಸುತ್ತಿವೆ. ಆದರೆ ಇನ್ನೊಂದು ಕಡೆ ಚೀನಾ, ಟಿಬೆಟ್ನ ಸಂಸ್ಕೃತಿಯನ್ನು ಪ್ರತ್ಯೇಕತೆಯ ಮೂಲವೆಂಬಂತೆ ನೋಡುತ್ತಿದೆ. ಹಾಗೇ, ಬಳಸಿಕೊಳ್ಳುತ್ತಿದೆ ಎಂದು ದಲೈ ಲಾಮಾ ಹೇಳಿದರು. ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಪರಂಪರೆಯನ್ನು ಹೊಂದಿದೆ. ಆದರೆ ಕೆಟ್ಟದ್ದನ್ನು ಮಾಡುವ ಜನರಿದ್ದಾಗ, ಅವರನ್ನು ಹತ್ತಿಕ್ಕಲು ಕಠಿಣ ನಿಯಮಗಳನ್ನು ಅನುಷ್ಠಾನ ಮಾಡಲೇಬೇಕಾಗುತ್ತದೆ. ಅದರಿಂದ ಒಳ್ಳೆಯದೇ ಆಗುತ್ತದೆ ಎಂದು ದಲೈ ಲಾಮಾ ಅಭಿಪ್ರಾಯಪಟ್ಟರು.
ಹಾಗೇ ಭಾರತದ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಮಾತನಾಡಿ, ಶಿಕ್ಷಣವೆಂಬುದು ಭಾರತದ ನೈತಿಕ ತತ್ವಗಳನ್ನು ಬಿಂಬಿಸುವಂತಿರಬೇಕು.. ನಿರ್ದಿಷ್ಟವಾಗಿ ಅಹಿಂಸೆಯ ಪ್ರತಿಬಿಂಬವಾಗಬೇಕು ಎಂದು ಹೇಳಿದರು. ಆಂತರಿಕ ಮೌಲ್ಯಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಹೇಳಿದ ಅವರು, ಯಾವುದೇ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ಸರಿಯಲ್ಲ ಎಂದು ತಿಳಿಸಿದರು. ಇನ್ನು ತಮ್ಮ ಭಾಷಣದ ಉದ್ದಕ್ಕೂ ಪೊಲೀಸರು ಎದುರಿಸುತ್ತಿರುವ ಸಮಸ್ಯೆ, ಜನರಲ್ಲಿ ಸಾಮಾನ್ಯವಾಗಿ ಪೊಲೀಸರ ಬಗ್ಗೆ ಇರುವ ಭಾವನೆಯನ್ನು ವಿವರಿಸಿದ ದಲೈ ಲಾಮಾ, ನಾನಂತೂ ಭಾರತೀಯ ಪೊಲೀಸರನ್ನು ಹೃದಯಪೂರ್ವಕವಾಗಿ ಶ್ಲಾಘಿಸುತ್ತೇವೆ. ನಿಜಕ್ಕೂ ಅದ್ಭುತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮಾತುಮುಗಿಸಿದರು.
1959ರಲ್ಲಿ ಟಿಬೆಟ್ನ್ನು ಅತಿಕ್ರಮಿಸಿಕೊಂಡ ಚೀನಾ, ದಲೈಲಾಮಾ ಅವರನ್ನು ಗಡೀಪಾರು ಮಾಡಿದೆ. ಅಂದು ಅವರು ಭಾರತಕ್ಕೆ ಬಂದು ನೆಲೆಸಿದ್ದಾರೆ. ಕಳೆದ 60ವರ್ಷಗಳಿಂದಲೂ ನಮ್ಮ ದೇಶದಲ್ಲಿ ಆಶ್ರಯ ಪಡೆದ ದಲೈಲಾಮಾರಿಗೆ ಚೀನಾ ಬಗ್ಗೆ ಸಹಜವಾಗಿಯೇ ಕೋಪ ಇದೆ. ಆಶ್ರಯ ನೀಡಿದ ಭಾರತದ ಬಗ್ಗೆ ಇರುವ ಗೌರವವನ್ನು ಆಗಾಗ ಹೊರಹಾಕುತ್ತಿದ್ದಾರೆ. ಈ ಬಾರಿಯೂ ಅಷ್ಟೇ ಭಾರತವನ್ನು, ಇಲ್ಲಿನ ಪೊಲೀಸರನ್ನು ತುಂಬು ಮನಸಿಂದ ಶ್ಲಾಘಿಸಿದ್ದಾರೆ. ಭಾರತ ಅಹಿಂಸೆ, ಕರುಣೆಯಂಥ ಸಚ್ಚಾರಿತ್ರ್ಯವನ್ನು ಹೊಂದಿರುವ ದೇಶ ಎಂದಿದ್ದಾರೆ.
ಇದನ್ನೂ ಓದಿ: ಖ್ಯಾತ ನಿರ್ದೇಶಕ ಎಸ್.ಪಿ. ಜನನಾಥನ್ ಹೃದಯಾಘಾತದಿಂದ ನಿಧನ! ಸೆಲೆಬ್ರಿಟಿಗಳ ಸಂತಾಪ
Published On - 4:03 pm, Sun, 14 March 21