ಟಿಬೆಟ್ನಲ್ಲಿ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಚೀನಾ ಅನುಮೋದನೆ
Dam on Brahmaputra in Tibet: 14 ನೇ ಪಂಚವಾರ್ಷಿಕ ಯೋಜನೆಯು ಬ್ರಹ್ಮಪುತ್ರ ನದಿಯ ಕೆಳಭಾಗದಲ್ಲಿ ಅಣೆಕಟ್ಟನ್ನು ನಿರ್ಮಿಸುವ ಯೋಜನೆಯನ್ನು ಒಳಗೊಂಡಿತ್ತು. ಈ ಯೋಜನೆ ಬಗ್ಗೆ ಭಾರತ ಮತ್ತು ಬಾಂಗ್ಲಾದೇಶ ಮತ್ತು ಇತರ ನದಿ ದಂಡೆಯಲ್ಲಿರುವ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ.
ಬೀಜಿಂಗ್: ಭಾರತದ ಹಿತಾಸಕ್ತಿಗೆ ಬೆಲೆ ಕಲ್ಪಿಸದೆ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಿಸುವ 14ನೇ ಪಂಚವಾರ್ಷಿಕ ಯೋಜನೆಗೆ ಚೀನಾ ಸಂಸತ್ ಗುರುವಾರ ಅನುಮೋದನೆ ನೀಡಿದೆ. ಅರುಣಾಚಲ ಪ್ರದೇಶದ ಗಡಿ ಬಳಿ ಟಿಬೆಟ್‌ನ ಬ್ರಹ್ಮಪುತ್ರ ನದಿಯಲ್ಲಿನ ವಿವಾದಾತ್ಮಕ ಜಲವಿದ್ಯುತ್ ಯೋಜನೆ ಸೇರಿದಂತೆ ಶತಕೋಟಿ ಡಾಲರ್ ಮೌಲ್ಯದ ಯೋಜನೆಗಳನ್ನು ಒಳಗೊಂಡಿರುವ ಮೆಗಾ ನೀಲನಕ್ಷೆಗೆ ಭಾರತ ಕಳವಳ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಮತ್ತು 2035 ರ ಹೊತ್ತಿಗೆ ದೀರ್ಘ–ವ್ಯಾಪ್ತಿಯ ಉದ್ದೇಶಗಳಿಗಾಗಿ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ (ಎನ್‌ಪಿಸಿ) 2,000ಕ್ಕಿಂಂತಲೂ ಹೆಚ್ಚು ಸದಸ್ಯರ ಸಂಸತ್ 14ನೇ ಪಂಚವಾರ್ಷಿಕ ಯೋಜನೆಯನ್ನು (2021-2025) ಅಂಗೀಕರಿಸಿತು. ಗುರುವಾರ ತನ್ನ ಆರು ದಿನಗಳ ಅಧಿವೇಶನದ ಕೊನೆಯ ದಿನದಂದು ಈ ಯೋಜನೆ ಅಂಗೀಕರಿಸಲ್ಪಟ್ಟಿದೆ ಎಂದು ಅಲ್ಲಿನ ಅಧಿಕೃತ ಮಾಧ್ಯಮ ವರದಿ ಮಾಡಿದೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ರಧಾನಿ ಲಿ ಕೆಪಿಯಾಂಗ್, ಹಿರಿಯ ನೇತಾರರು ಮತ್ತು ಎನ್‌ಪಿಸಿ ನೀಲನಕ್ಷೆಗೆ ಅಂಗೀಕಾರ ನೀಡಿದೆ. ಈ ನೀಲನಕ್ಷೆಯಲ್ಲಿ ಚೀನಾದ ಅಭಿವೃದ್ಧಿಗಾಗಿರುವ 60 ಪ್ರಸ್ತಾವನೆಗಳು ಇವೆ. ಕಳೆದ ವರ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಇದಕ್ಕೆ ಅಂಗೀಕಾರ ನೀಡಿತ್ತು.
14 ನೇ ಪಂಚವಾರ್ಷಿಕ ಯೋಜನೆಯು ಬ್ರಹ್ಮಪುತ್ರ ನದಿಯ ಕೆಳಭಾಗದಲ್ಲಿ ಅಣೆಕಟ್ಟನ್ನು ನಿರ್ಮಿಸುವ ಯೋಜನೆಯನ್ನು ಒಳಗೊಂಡಿತ್ತು. ಈ ಯೋಜನೆ ಬಗ್ಗೆ ಭಾರತ ಮತ್ತು ಬಾಂಗ್ಲಾದೇಶ ಮತ್ತು ಇತರ ನದಿ ದಂಡೆಯಲ್ಲಿರುವ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ನಿಮ್ಮ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಚೀನಾ ಈ ಆತಂಕವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.
ಗಡಿಯಾಚೆಗಿನ ನದಿಗಳಿಂದ ಲಭಿಸಬೇಕಾದ ನೀರಿನ ಬಗ್ಗೆ ನದಿದಂಡೆಯ ಕೆಳಭಾಗದಲ್ಲಿರುವ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಈ ಬಗ್ಗೆ ಭಾರತ ಪದೇ ಪದೇ ಚೀನಾಕ್ಕೆ ಹೇಳಿದ್ದು, ಮೇಲಿನ ಪ್ರದೇಶಗಳಲ್ಲಿ ನಡೆಸುವ ಯಾವುದೇ ಯೋಜನೆಗಳು ಕೆಳ ಪ್ರದೇಶದಲ್ಲಿರುವ ರಾಜ್ಯಗಳಿಗೆ ತೊಂದರೆಯುಂಟು ಮಾಡುವಂತಿರಬಾರದು ಎಂದಿತ್ತು.
ಟಿಬೆಟ್ ಸ್ವಾಯತ್ತ ಪ್ರದೇಶದ ಉಪ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಚೆ ದಲ್ಹಾ, ಎನ್‌ಪಿಸಿ ಅಧಿವೇಶನದಲ್ಲಿ ಅಲ್ಲಿನ ಅಧಿಕಾರಿಗಳು ಈ ವರ್ಷ (ಅಣೆಕಟ್ಟಿನ) ನಿರ್ಮಾಣವನ್ನು ಪ್ರಾರಂಭಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಯೋಜನೆಗಾಗಿ ಸಮಗ್ರ ಯೋಜನೆ ಮತ್ತು ಪರಿಸರ ಪರಿಣಾಮದ ಮೌಲ್ಯಮಾಪನಗಳನ್ನು ಆದಷ್ಟು ಬೇಗ ಅನುಮೋದಿಸಬೇಕು ಎಂದು ಹೇಳಿರುವುದಾಗಿ ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಟಿಬೆಟ್‌ನ ಪ್ರಾಂತೀಯ ಸರ್ಕಾರದ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದನ್ನೂ ಓದಿ: Quad Summit 2021: ಕ್ವಾಡ್ ಸಭೆಗೂ ಮುನ್ನವೇ ಬೆಚ್ಚಿದ ಚೀನಾ; ನಾಲ್ಕು ಪ್ರಮುಖ ರಾಷ್ಟ್ರಗಳ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ
Published On - 5:48 pm, Fri, 12 March 21