Explainer | ಟಿಬೆಟ್​ನ ದೇಶಭ್ರಷ್ಟ ಸಂಸತ್​ಗೆ ಚುನಾವಣೆ: ಹೇಗಿರುತ್ತೆ ಪ್ರತಿನಿಧಿಗಳ ಆಯ್ಕೆ? ಮತದಾನ ಪ್ರಕ್ರಿಯೆ?

ಟಿಬೆಟ್​ನಿಂದ ಹೊರಗೆ ವಾಸಿಸುವ ಟಿಬೆಟಿಯನ್ನರು ಟಿಬೆಟ್ ದೇಶಭ್ರಷ್ಟ ಸಂಸತ್ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಸಂಸತ್ ಪ್ರತಿನಿಧಿಗಳ ಆಯ್ಕೆಗಾಗಿ ಎರಡು ಹಂತದಲ್ಲಿ ಮತದಾನ ನಡೆಯುತ್ತದೆ. ಈ ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಸಂಸತ್, ಸಂವಿಧಾನ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ಇಲ್ಲಿದೆ ವಿವರ

Explainer | ಟಿಬೆಟ್​ನ ದೇಶಭ್ರಷ್ಟ ಸಂಸತ್​ಗೆ ಚುನಾವಣೆ: ಹೇಗಿರುತ್ತೆ ಪ್ರತಿನಿಧಿಗಳ ಆಯ್ಕೆ? ಮತದಾನ ಪ್ರಕ್ರಿಯೆ?
ಟಿಬೆಟ್ ಚುನಾವಣೆ
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 04, 2021 | 2:31 PM

ಟಿಬೆಟ್​ನಿಂದ ಗಡಿಪಾರಾಗಿ ಭಾರತ ಮತ್ತು ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿರುವ 1.3 ಲಕ್ಷಕ್ಕಿಂತಲೂ ಹೆಚ್ಚು ಟಿಬೆಟಿಯನ್ನರು ಕೇಂದ್ರೀಯ ಟಿಬೆಟಿಯನ್ ಆಡಳಿತ (ಸಿಟಿಎ) ಎಂದು ಕರೆಯಲ್ಪಡುವ ಟಿಬೆಟ್​ನ ದೇಶಭ್ರಷ್ಟ ಸಂಸತ್​ನ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ.  17ನೇ ಟಿಬೆಟಿಯನ್ ಸಂಸತ್ ಚುನಾವಣೆಯ ಮೊದಲ ಹಂತದ ಮತದಾನ ಜನವರಿ 3ರಂದು ನಡೆದಿದೆ. ಭಾರತದಲ್ಲಿ ವಾಸಿಸುತ್ತಿರುವ ಟಿಬೆಟಿಯನ್ನರು ಧರ್ಮಶಾಲಾದಲ್ಲಿ ಮತ ಚಲಾಯಿಸಿದ್ದಾರೆ. ಏಪ್ರಿಲ್ 11ರಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ.

ಮತಪತ್ರ (ಬ್ಯಾಲೆಟ್ ಪೇಪರ್) ಮೂಲಕ ಮತದಾರರು ಮತ ಚಲಾಯಿಸುತ್ತಾರೆ. ಸಂಸತ್ತಿನ 45 ಸದಸ್ಯರ ಸೀಟಿಗಾಗಿ ಸುಮಾರು 150 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮೊದಲ ಹಂತದ ಮತದಾನದ ಫಲಿತಾಂಶ ಫೆಬ್ರುವರಿ 8ರಂದು ಪ್ರಕಟವಾಗಲಿದ್ದು, ಅಂತಿಮ ಫಲಿತಾಂಶ ಮೇ ತಿಂಗಳ 14ನೇ ತಾರೀಖಿನಂದು ಪ್ರಕಟವಾಗುವ ಸಾಧ್ಯತೆ ಇದೆ.

ಟಿಬೆಟಿಯನ್ ದೇಶಭ್ರಷ್ಟ ಸಂಸತ್​ನ ಗ್ರೀನ್ ಬುಕ್ ಮಾಹಿತಿ ಪ್ರಕಾರ 1 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಭಾರತದಾದ್ಯಂತ ನೆಲೆಸಿದ್ದಾರೆ. ಇನ್ನುಳಿದವರು ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಕೋಸ್ಟರಿಕಾ, ಫ್ರಾನ್ಸ್, ಮೆಕ್ಸಿಕೊ, ಮಂಗೋಲಿಯಾ, ಜರ್ಮನಿ, ಬ್ರಿಟನ್, ಸ್ವಿಡ್ಜರ್​ಲೆಂಡ್ ಮತ್ತು ಇತರ ದೇಶಗಳಲ್ಲಿ ನೆಲೆಸಿದ್ದಾರೆ. ಟಿಬೆಟ್ ದೇಶಭ್ರಷ್ಟ ಸಂಸತ್ (TpiE) ಪ್ರಧಾನ ಕಚೇರಿಯು ಹಿಮಾಚಲ ಪ್ರದೇಶದ ಕಾಂಗಾ ಜಿಲ್ಲೆಯ ಧರ್ಮಶಾಲಾದಲ್ಲಿದೆ.

ಟಿಬೆಟ್ ದೇಶಭ್ರಷ್ಟ ಸಂಸತ್ ಹೇಗಿದೆ? ಸ್ಪೀಕರ್ ಮತ್ತು ಉಪ ಸ್ಪೀಕರ್ ಈ ಸಂಸತ್​ನ ನಾಯಕತ್ವ ವಹಿಸುತ್ತಾರೆ. 16ನೇ ಟಿಬೆಟ್ ದೇಶಭ್ರಷ್ಟ ಸಂಸತ್​ನಲ್ಲಿ 45 ಸದಸ್ಯರಿದ್ದರು. 2006ರವರೆಗೆ ಈ ಸಂಸತ್​ನ್ನು ಅಸೆಂಬ್ಲಿ ಆಫ್ ಟಿಬೆಟಿಯನ್ ಪೀಪಲ್ಸ್ ಡೆಪ್ಯುಟೀಸ್ (ATPD) ಎಂದು ಕರೆಯಲಾಗುತ್ತಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನವು ಆನಂತರ ಸ್ಪೀಕರ್, ಉಪ ಸ್ಪೀಕರ್ ಎಂದು ಬದಲಾಯಿತು.

ಟಿಬೆಟ್ ಸಂವಿಧಾನ ಹೇಗಿರುತ್ತದೆ? ಕೇಂದ್ರೀಯ ಟಿಬೆಟಿಯನ್‌ ಆಡಳಿತದ ಕಾರ್ಯಗಳು ಟಿಬೆಟ್ ಸರ್ಕಾರದ ಸಂವಿಧಾನವನ್ನು ಆಧರಿಸಿರುತ್ತವೆ. ಇಲ್ಲಿನ ಸಂವಿಧಾನವನ್ನು ‘The Charter of the Tibetans in Exile’ ಎಂದು ಹೇಳುತ್ತಾರೆ. 1991ರಲ್ಲಿ ದಲೈಲಾಮಾ ನೇತೃತ್ವದ ಸಂವಿಧಾನ ಕರಡುತಿದ್ದುಪಡಿ ಸಮಿತಿಯು ದೇಶಭ್ರಷ್ಟ ಟಿಬೆಟಿಯನ್ನರಿಗಾಗಿ ಒಂದು ಚಾರ್ಟರ್ ರಚಿಸಿತು. 1991 ಜೂನ್ 28ರಂದು ದಲೈಲಾಮ ಇದನ್ನು ಅಂಗೀಕರಿಸಿದರು. 2001ರವರೆಗೆ ದಲೈಲಾಮಾ ಅವರು ಕಾಲೋನ್ (ಕ್ಯಾಬಿನೆಟ್ ಸಚಿವರು) ಹುದ್ದೆಗೆ ಮೂರು ಹೆಸರು ಮತ್ತು ಚುನಾಯಿತ ವಿಧಾನಸಭೆಗೆ ತಲಾ ಒಬ್ಬರ ಹೆಸರನ್ನು ಸೂಚಿಸುತ್ತಿದ್ದರು. ಕಾಲೋನ್ ಟ್ರೈಪಾ ( ಕೇಂದ್ರೀಯ ಟಿಬೆಟಿಯನ್ ಆಡಳಿತದ ಮುಖ್ಯಸ್ಥ) ಅವರನ್ನು ಚುನಾಯಿತ ಕಾಲೋನ್​ಗಳು ಆಯ್ಕೆ ಮಾಡುತ್ತಾರೆ.

2001ರಲ್ಲಿ ದೇಶಭ್ರಷ್ಟ ಟಿಬೆಟಿಯನ್ನರ ಬಗ್ಗೆ ಇರುವ ಚಾರ್ಟರ್​ನಲ್ಲಿ ತಿದ್ದುಪಡಿಯಾಗಿ ಮೂಲದಲ್ಲೇ ಹಲವು ಬದಲಾವಣೆಗಳಾದವು. ಅದೇನೆಂದರೆ ದೇಶಭ್ರಷ್ಟ ಟಿಬೆಟಿಯನ್ನರೇ ನೇರವಾಗಿ ಕಾಲೋನ್ ಟ್ರೈಪಾ ಅವರನ್ನು ಆಯ್ಕೆ ಮಾಡುವ ಅವಕಾಶ ಇಲ್ಲಿತ್ತು. ನೇರವಾಗಿ ಚುನಾಯಿತರಾದ ಕಾಲೋನ್ ಟ್ರೈಪಾ, ಟಿಬೆಟಿಯನ್ ದೇಶಭ್ರಷ್ಟ ಸಂಸತ್​ನ ಅನುಮತಿಯಿಂದ ಕಾಲೋನ್​ಗಳನ್ನು ನೇಮಕ ಮಾಡುತ್ತಾರೆ.

ಮಾರ್ಚ್ 14, 2011ರಂದು ದಲೈಲಾಮಾ ಅವರು ತಮ್ಮ ರಾಜಕೀಯ ನಾಯಕತ್ವ ಹೊಣೆಯನ್ನು ಬಿಡುವುದಾಗಿ ಹೇಳಿದ್ದು ಆ ಚಾರ್ಟರ್ (ಸನ್ನದು) ಮತ್ತೆ ತಿದ್ದುಪಡಿಯಾಯಿತು. ದಲೈಲಾಮಾ ಅವರು ರಾಜಕೀಯ ಮುಂದಾಳತ್ವವನ್ನು ಕಾಲೋನ್ ಟ್ರೈಪಾ ಅವರಿಗೆ ಒಪ್ಪಿಸಿದರು. ಅಲ್ಲಿಂದ ಕಾಲೋನ್ ಟ್ರೈಪಾ ಅವರನ್ನು ಸಿಕ್ಯಾಂಗ್ ಅಥವಾ ಕೇಂದ್ರೀಯ ಟಿಬೆಟಿಯನ್‌ ಆಡಳಿತದ ಅಧ್ಯಕ್ಷರು ಎಂದು ಕರೆಯಲಾಯಿತು.

ದಲೈಲಾಮಾ ಜತೆ ಸಿಕ್ಯಾಂಗ್ (ಫೋಟೊ ಕೃಪೆ: ಪಿಟಿಐ)

2021ರ ಚುನಾವಣೆ ಧರ್ಮಶಾಲಾದಲ್ಲಿರುವ ಸಿಟಿಎಯ ಚುನಾವಣಾ ಆಯೋಗದ ಪ್ರಕಾರ 79,697 ಟಿಬೆಟಿಯನ್ನರು ಚುನಾವಣೆಗಾಗಿ ನೋಂದಣಿ ಮಾಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ನಡುವೆಯೇ ಚುನಾವಣೆ ನಡೆಯುತ್ತಿರುವುದರಿಂದ ಮತಗಟ್ಟೆಗಳಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಒಟ್ಟು ಮತದಾರರ ಪೈಕಿ 55,683 ಮಂದಿ ಭಾರತದಲ್ಲಿ ನೆಲೆಸಿದ್ದಾರೆ. ಉಳಿದ 24,014 ಮಂದಿ ಜಗತ್ತಿನ ಇತರ ದೇಶಗಳಲ್ಲಿದ್ದಾರೆ.

18 ವರ್ಷಕ್ಕಿಂತ ಮೇಲ್ಪಟ್ಟ, ಟಿಬೆಟಿಯನ್ ಎಂದು ಗುರುತಿಸಲಿರುವ ದಾಖಲೆ ‘ಟಿಬೆಟಿಯನ್ ಗ್ರೀನ್ ಬುಕ್’ ಹೊಂದಿರುವ ಟಿಬೆಟ್​ನ ಯಾವುದೇ ಪ್ರಜೆಗೆ ಮತದಾನದ ಹಕ್ಕು ಇರುತ್ತದೆ. ಉಪಖಂಡದ ಹೊರಗೆ ವಾಸಿಸುವವ ಟಿಬೆಟಿಯನ್ನರು ಮಾತ್ರ ಅವರ ಭೌಗೋಳಿಕ ವಲಯದಲ್ಲಿ ಸಂಸತ್ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಇತರ ಮತದಾರರು ನೇರವಾಗಿ ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.

ಮತದಾನವು ಎರಡು ಸುತ್ತಿನಲ್ಲಿ ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಯಾವುದೇ ಅಧಿಕೃತ ಅಭ್ಯರ್ಥಿ ಇರುವುದಿಲ್ಲ. ಅಂದರೆ ಮತದಾರರು ತಮಗಿಷ್ಟವಾದ ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡಬಹುದು. ಈತ ಈಗಾಗಲೇ ಪ್ರಚಾರ ಆರಂಭಿಸಿದ ಹಲವಾರು ಅಭ್ಯರ್ಥಿಗಳ ಪೈಕಿ ಒಬ್ಬನಾಗಿರುತ್ತಾನೆ. ಶೇಕಡಾ 60ರಷ್ಟು ಅಥವಾ ಅದಕ್ಕಿಂತ ಹೆಚ್ಚು ಮತಗಳಿಸಿದ ಇಬ್ಬರು ವ್ಯಕ್ತಿಗಳು ಎರಡನೇ ಸುತ್ತಿನಲ್ಲಿ ಅಧಿಕೃತ ಅಭ್ಯರ್ಥಿಗಳಾಗಿರುತ್ತಾರೆ. ಎರಡನೇ ಸುತ್ತಿನ ಮತದಾನ ಏಪ್ರಿಲ್ 11ರಂದು ನಡೆಯಲಿದೆ.

ಸಿಕ್ಯಾಂಗ್ ಹುದ್ದೆ ಪೈಪೋಟಿಯಲ್ಲಿ ಯಾರೆಲ್ಲಾ ಇದ್ದಾರೆ?

2021 ಜನವರಿ 3ರಂದು ನಡೆದ ಮೊದಲ ಸುತ್ತಿನ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಸಿದ ಇಬ್ಬರು ವ್ಯಕ್ತಿಗಳು ಏಪ್ರಿಲ್ 13ರಂದು ನಡೆಯಲಿರುವ ಎರಡನೇ ಸುತ್ತಿನ ಮತದಾನದಲ್ಲಿ ಸಿಕ್ಯಾಂಗ್ ಹುದ್ದೆಗೆ ಸ್ಪರ್ಧಿಸಲಿದ್ದಾರೆ. 8 ಅಭ್ಯರ್ಥಿಗಳು ಸಿಕ್ಯಾಂಗ್ ಹುದ್ದೆಯ ಕಣದಲ್ಲಿರಲಿದ್ದಾರೆ.

ಗ್ರೀನ್ ಬುಕ್

ದಲೈಲಾಮಾ ಅವರ ದೆಹಲಿ ಪ್ರತಿನಿಧಿ ದೋಂಗ್ ಚುಂಗ್ ಗೋದಪ್, ದೇಶಭ್ರಷ್ಟ ಸಂಸತ್​ನ ಮಾಜಿ ಸ್ಪೀಕರ್ ಪೆನ್ಪಾ ಸೆರಿಂಗ್, ಸಿಕ್ಯಾಂಗ್ ಲೋಬ್ಸಂಗ್ ಸಾಂಗೇ ಅವರ ವಿಶೇಷ ಸಲಹೆಗಾರ ಮತ್ತು ದಲೈಲಾಮಾ ಅವರಿಗೆ ಉತ್ತರ ಅಮೆರಿಕದಲ್ಲಿ ಪ್ರತಿನಿಧಿ ಆಗಿದ್ದ ಕೆಲ್ಸಾಂಗ್ ದೋರ್ಜಿ ಅಕುಟ್ ಸಾಂಗ್, ಮಾಜಿ ಉಪ ಸ್ಪೀಕರ್ ದೋಲ್ಮಾ ಗ್ಯಾರಿ, ಉಸ್ತುವಾರಿ ಉಪ ಸ್ಪೀಕರ್ ಆಚಾರ್ಯ ಯೆಶಿ ಫುಂಟೊಸ್ಕ್, ನ್ಯೂಯಾರ್ಕ್​​ನಲ್ಲಿರುವ ಮಾಜಿ ಸಚಿವ ಲೋಬ್ಸಾಂಗ್ ನ್ಯಾಂಡಕ್, ಫೆಡರೇಷನ್ ಆಫ್ ಟಿಬೆಟಿಯನ್ ಕಾರ್ಪೊರೇಟಿವ್ ಸೊಸೈಟೀಸ್, ಬೆಂಗಳೂರಿನ ಮಾಜಿ ಸಿಇಒ ತಾಷಿ ವಾಂಗ್ಡು, ಶಿಲ್ಲಾಂಗ್ ಮೂಲದ ತಾಷಿ ತೊಪ್ಗ್ಯಾಲ್ – ಈ ಬಾರಿ ಕಣದಲ್ಲಿದ್ದಾರೆ.

ಕಶಾಂಗ್ (ಸಚಿವ ಸಂಪುಟ) ಕೇಂದ್ರೀಯ ಟಿಬೆಟಿಯನ್‌ ಆಡಳಿತದ ಉನ್ನತ ಕಾರ್ಯಾಂಗ ಕಚೇರಿಯೇ ಕಶಾಂಗ್. 7 ಸದಸ್ಯರಿರುವ ಈ ಸಂಸತ್​ಗೆ​​  ಸಿಕ್ಯಾಂಗ್ ಅವರೇ ಅಧ್ಯಕ್ಷರು. ಸಿಕ್ಯಾಂಗ್ ಅವರೇ ಏಳು ಕಾಲೋನ್ (ಸಚಿವರು)ನ್ನು ನಾಮನಿರ್ದೇಶನ ಮಾಡಿ ಸಂಸತ್ತಿನ ಅನುಮೋದನೆ ಪಡೆಯುತ್ತಾರೆ. ಕಶಾಂಗ್ ಅವರ ಅಧಿಕಾರ ಅವಧಿ 5 ವರ್ಷ.

ದೇಶಭ್ರಷ್ಟ ಟಿಬೆಟ್ ಸಂಸತ್​ಗೆ ಯಾವುದಾದರೂ ದೇಶ ಅಧಿಕೃತ ಮಾನ್ಯತೆ ನೀಡಿದೆಯೇ? ಭಾರತ ಸೇರಿದಂತೆ ಯಾವುದೇ ದೇಶಗಳು ಟಿಬೆಟ್ ದೇಶಭ್ರಷ್ಟ ಸಂಸತ್​ಗೆ ಅಧಿಕೃತವಾಗಿ ಮಾನ್ಯತೆ ನೀಡಿಲ್ಲ. ಆದರೆ, ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಸಿಕ್ಯಾಂಗ್ ಮತ್ತು ಟಿಬೆಟ್​ನ ಇತರ ನಾಯಕರೊಂದಿಗೆ ವಿವಿಧ ವೇದಿಕೆಗಳಲ್ಲಿ ನೇರ ಮಾತುಕತೆ ನಡೆಸುತ್ತವೆ. ಜಗತ್ತಿನಾದ್ಯಂತ ಟಿಬೆಟಿಯನ್ನರ ಸಮಸ್ಯೆ ಮತ್ತು ಟಿಬೆಟಿಯನ್ನರ ವ್ಯವಹಾರಗಳನ್ನು ನಿರ್ವಹಣೆ ಮಾಡುವುದಕ್ಕಾಗಿ ಪ್ರಜಾತಂತ್ರ ರೀತಿಯಲ್ಲಿ ಆಯ್ಕೆಯಾದ ಪ್ರತಿನಿಧಿಗಳು ಸಹಾಯ ಮಾಡುತ್ತಾರೆ ಎಂದು ಟಿಬೆಟಿಯನ್ ಗಡಿಪಾರು ಸಂಸತ್ ಹೇಳುತ್ತದೆ.

ದರ್ಪ ತೋರುವ ಚೀನಾಕ್ಕೆ ಮತ್ತೊಮ್ಮೆ ಮುಖಭಂಗ -ಎಲ್ಲಿ? ಹೇಗೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada