ತಿರುಪತಿ ಲಡ್ಡು ವಿವಾದ; ಆಂಧ್ರಪ್ರದೇಶ ಸರ್ಕಾರದಿಂದ ಎಸ್‌ಐಟಿ ರಚನೆ

|

Updated on: Sep 24, 2024 | 9:10 PM

ತಿರುಮಲ ತಿರುಪತಿ ಲಡ್ಡು ವಿವಾದ ಭುಗಿಲೆದ್ದಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿಯ ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಕಲಬೆರಕೆ ಉಂಟಾಗಿದೆ ಎಂಬುದನ್ನು ಲ್ಯಾಬ್ ವರದಿಯೇ ದೃಢಪಡಿಸಿದೆ. ಈ ಕುರಿತು ತನಿಖೆ ನಡೆಸಲು ಆಂಧ್ರಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿದೆ.

ತಿರುಪತಿ ಲಡ್ಡು ವಿವಾದ; ಆಂಧ್ರಪ್ರದೇಶ ಸರ್ಕಾರದಿಂದ ಎಸ್‌ಐಟಿ ರಚನೆ
ಸಿಎಂ ಚಂದ್ರಬಾಬು ನಾಯ್ಡು- ಡಿಸಿಎಂ ಪವನ್ ಕಲ್ಯಾಣ್
Follow us on

ಹೈದರಾಬಾದ್: ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವಾದ ಲಡ್ಡು ತಯಾರಿಕೆಗೆ ಕಳಪೆ ಗುಣಮಟ್ಟದ ತುಪ್ಪ ಬಳಸಲಾಗಿದೆ. ಆ ತುಪ್ಪದಲ್ಲಿ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಮತ್ತಿತರ ಎಣ್ಣೆಗಳ ಅಂಶ ಇದ್ದುದು ಲ್ಯಾಬ್ ವರದಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಎಸ್​ಐಟಿ ರಚನೆ ಮಾಡಿದೆ.

ಸೆಪ್ಟೆಂಬರ್ 22ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತುಪ್ಪದಲ್ಲಿನ ಕಲಬೆರಕೆ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಎಸ್​ಐಟಿ ರಚನೆ ಮಾಡಲಾಗಿದೆ.

ಇದನ್ನೂ ಓದಿ: ಜನರ ನಂಬಿಕೆಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ; ತಿರುಪತಿ ಲಡ್ಡು ಆರೋಪ ನಿರಾಕರಿಸಿದ ಜಗನ್ ಮೋಹನ್ ರೆಡ್ಡಿ

ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಗ್ಗೆ ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಗುಂಟೂರು ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಸರ್ವಶ್ರೇಷ್ಠ ತ್ರಿಪಾಠಿ ಅವರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರನ್ನಾಗಿ ನೇಮಿಸಿದೆ. ವಿಶಾಖ ವ್ಯಾಪ್ತಿಯ ಡಿಐಜಿ ಗೋಪಿನಾಥ್, ಕಡಪ ಎಸ್ಪಿ ಹರ್ಷವರ್ಧನ್ ಅವರಲ್ಲದೆ, ಡಿಎಸ್‌ಪಿಗಳು ಮತ್ತು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಇತರ ಸಿಬ್ಬಂದಿಯನ್ನು ಎಸ್‌ಐಟಿ ಒಳಗೊಂಡಿರುತ್ತದೆ.

ತಿರುಪತಿ ಪ್ರಸಾದವನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಹೊಂದಿರುವ ಕಲಬೆರಕೆ ತುಪ್ಪವನ್ನು ಖರೀದಿಸುವುದು ಮತ್ತು ಹಿಂದಿನ ಆಡಳಿತದಿಂದ ಅಧಿಕಾರದ ದುರುಪಯೋಗ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸಲಿದೆ.

ಇದನ್ನೂ ಓದಿ: ತಿರುಪತಿ ಲಡ್ಡಿನಲ್ಲಿ ತಂಬಾಕು ಸಿಕ್ಕಿತ್ತು, ಭಕ್ತೆಯ ಹೇಳಿಕೆ ಕೇಳಿ ಬೆಚ್ಚಿಬಿದ್ದ ಜನ

ಇದರ ನಡುವೆ, ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ಕಂಡುಬಂದಿದೆ ಎಂಬ ವದಂತಿಯನ್ನು ಟಿಟಿಡಿ ನಿರಾಕರಿಸಿದೆ. ಶ್ರೀವಾರಿ ಲಡ್ಡು ಪ್ರಸಾದದಲ್ಲಿ ತಂಬಾಕು ಪೌಚ್ ಪತ್ತೆಯಾಗಿದೆ ಎಂದು ಕೆಲವು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿರುವುದು ಸರಿಯಲ್ಲ ಎಂದು ಟಿಟಿಡಿ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ